ಸಿದ್ದರಾಮಯ್ಯ ಸಮಾಜವಾದಿಯೇ ಅಥವಾ ಮಜಾವಾದಿಯೇ?: ಆರ್.ಅಶೋಕ್
ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್‌ಖಾನ್ ವಿಶೇಷ ವಿಮಾನದಲ್ಲಿ ಹಾರಾಡುವ ಮೂಲಕ ಮೋಜು ಮಸ್ತಿ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಬೆಂಗಳೂರು (ಡಿ.24): ರಾಜ್ಯದಲ್ಲಿ ಭೀಕರ ಬರದಿಂದ ಏಳು ತಿಂಗಳಲ್ಲಿ 350ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 60 ಲಕ್ಷಕ್ಕೂ ಹೆಚ್ಚು ರೈತರು ನಿರಾಶ್ರಿತರಾಗಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್‌ಖಾನ್ ವಿಶೇಷ ವಿಮಾನದಲ್ಲಿ ಹಾರಾಡುವ ಮೂಲಕ ಮೋಜು ಮಸ್ತಿ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ. ಹಿಂದೆಂದೂ ಕಂಡು ಕೇಳರಿಯದ ಬರಗಾಲ ರಾಜ್ಯವನ್ನು ಆವರಿಸಿದೆ. ಇಂತಹ ಸನ್ನಿವೇಶದಲ್ಲಿ ವೆಚ್ಚಕ್ಕೆ ಕಡಿವಾಣ ಹಾಕಿ ಮೇಲ್ಪಂಕ್ತಿ ಹಾಕಿಕೊಡಬೇಕಾದ ಮುಖ್ಯಮಂತ್ರಿಗಳು ಮಜಾ ಮಾಡುತ್ತಿದ್ದಾರೆ.
ಸದಾ ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಸಮಾಜವಾದಿಯೋ ಅಥವಾ ಮಜಾವಾದಿಯೋ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರ ಪರಿಹಾರಕ್ಕಾಗಿ ಮನವಿ ಮಾಡಲು ದೆಹಲಿಗೆ ಪ್ರಯಾಣ ಮಾಡಲು ಐಷಾರಾಮಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ್ದನ್ನು ಮುಖ್ಯಮಂತ್ರಿಗಳ ಆಪ್ತರಾದ ಸಚಿವ ಜಮೀರ್ ಅಹಮದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇವರಿಗೆ ರಾಜ್ಯದ ಜನ ಸಂಕಷ್ಟದಲ್ಲಿ ಇರುವ ಬಗ್ಗೆ ಪರಿಜ್ಞಾನವಿಲ್ಲ ಎಂದರು.
3 ವರ್ಷದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭ: ಸಚಿವ ಮಧು ಬಂಗಾರಪ್ಪ
ವಿಧಾನಸಭೆಗೆ ಅಪರಿಚಿತ ವ್ಯಕ್ತಿ ಬಂದು ಕೂತಿರಲಿಲ್ಲವೆ?: ಸಂಸತ್ತಿನಲ್ಲಿ ಸಂಸದರ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಕಾಂಗ್ರೆಸ್ ಪ್ರತಿಭಟನೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಕರ್ನಾಟಕದ ವಿಧಾನಸಭೆಯಲ್ಲಿ ಅನಾಮಧೇಯ ವ್ಯಕ್ತಿ ಸೂಟ್ ಕೇಸ್ ತಂದು ಶಾಸಕರಂತೆ ಕುಳಿತಿದ್ದರು. ಅದರಲ್ಲಿ ಬಾಂಬ್ ಇತ್ತೋ ಏನು ಇತ್ತೋ ಗೊತ್ತಿಲ್ಲ. ಸಂಸದ ಪ್ರತಾಪ್ ಸಿಂಹ ಅವರ ರಾಜೀನಾಮೆ ಕೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.