3 ವರ್ಷದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭ: ಸಚಿವ ಮಧು ಬಂಗಾರಪ್ಪ
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಯಶಸ್ವಿಯಾಗಿ ನಡೆಯುತ್ತಿದ್ದು ಉತ್ತಮ ಫಲಿತಾಂಶ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್ ನಲ್ಲಿ 500 ಹಾಗೂ ಮುಂದಿನ ಮೂರು ವರ್ಷದಲ್ಲಿ ರಾಜ್ಯಾದ್ಯಂತ 3000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಪ್ರಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಹೊಸಕೋಟೆ (ಡಿ.24): ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಯಶಸ್ವಿಯಾಗಿ ನಡೆಯುತ್ತಿದ್ದು ಉತ್ತಮ ಫಲಿತಾಂಶ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್ ನಲ್ಲಿ 500 ಹಾಗೂ ಮುಂದಿನ ಮೂರು ವರ್ಷದಲ್ಲಿ ರಾಜ್ಯಾದ್ಯಂತ 3000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಪ್ರಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿರುವ ಶ್ರೀರಂಗನಾಥ ಪ್ರೌಢಶಾಲೆ ಆವರಣದಲ್ಲಿ ನಡೆದ ಶ್ರೀರಂಗನಾಥ ಕಲಾ ಉತ್ಸವ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ.
ಆದರೆ ಆ ಸಮಸ್ಯೆಗಳು ಇಂದು, ನಿನ್ನೆಯದಲ್ಲ. ಬದಲಾಗಿ ಸುಮಾರು ಎರಡು ಮೂರು ದಶಕಗಳಿಂದ ಇರುವ ಸಮಸ್ಯೆ. ಆದರೆ ನನ್ನ ಅವಧಿಯಲ್ಲಿ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಪ್ರೇಮಿಗಳಾಗಿ ಮಕ್ಕಳ ಶೈಕ್ಷಣಿಕ ಪ್ರಗತಿ ಸೇರಿದಂತೆ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ವಿಚಾರವಾಗಿ ಕೂಡ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಕಾರಾತ್ಮವಾಗಿ ಸ್ಪಂದಿಸುತ್ತಿದ್ದಾರೆ. ಇದರ ಪರಿಣಾಮವಾಗಿಯೇ 8ನೇ ತರಗತಿವರೆಗೆ ಮಕ್ಕಳಿಗೆ ಕೊಡುತ್ತಿದ್ದ ಮೊಟ್ಟೆಯನ್ನು 10ನೇ ತರಗತಿ ಮಕ್ಕಳಿಗೂ ವಿಸ್ತರಿಸಿ ವಾರದಲ್ಲಿ 2 ದಿನ ನೀಡಲು ಸಾಧ್ಯವಾಯಿತು ಎಂದರು.
ಪ್ರಧಾನಿ ಮೋದಿ ಓಡಾಡೋದು ಯಾವ ಪ್ಲೇನ್?: ಸಿಎಂ ಸಿದ್ದರಾಮಯ್ಯ
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕಲ್ಕುಂಟೆ ಅಗ್ರಹಾರ ಗ್ರಾಮದ ರಂಗನಾಥ ಪ್ರೌಢಶಾಲೆ 1960ರಲ್ಲಿ 40 ವಿದ್ಯಾರ್ಥಿಗಳಿಂದ ಪ್ರಾರಂಭ ಆಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ 68 ವರ್ಷ ಪೂರೈಸಿ 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಇಲ್ಲಿ ಪದವಿ ಪೂರ್ವ ಕಾಲೇಜಿದ್ದು ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರ ಜೊತೆ ನಾನು ಹಾಗೂ ಸಚಿವ ಮಧು ಬಂಗಾರಪ್ಪ ಚರ್ಚಿಸಿ ಮಂಜೂರು ಮಾಡಿಸಿ ಕೊಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಾಲ ಗುರುಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ತಾಲೂಕು ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ, ರಂಗನಾಥ ಶಾಲೆಯ ಅಧ್ಯಕ್ಷ ಶಿವಕೇಶವ ರೆಡ್ಡಿ, ಅನುಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬೋಧನಹೊಸಹಳ್ಳಿ ಪ್ರಕಾಶ್, ಮುಖಂಡರಾದ ಯಡಗೊಂಡಹಳ್ಳಿ ರಾಧಾಕೃಷ್ಣ, ಹಾರೋಹಳ್ಳಿ ದೇವರಾಜ್ ಕಲ್ಕುಂಟೆ, ಸಂಪಂಗಿರಾಮಣ್ಣ, ಮುತ್ಕೂರು ಮುನಿರಾಜು, ಬಿಇಒ ಪದ್ಮನಾಭ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಕ್ಷ್ಮಣ್‌ಸಿಂಗ್, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯ ಶಿಕ್ಷಕ ಶಿವಪ್ಪ ಇತರರು ಹಾಜರಿದ್ದರು.
ದಿ.ಬಂಗಾರಪ್ಪರನ್ನು ನೆನೆದ ಮಧು ಬಂಗಾರಪ್ಪ: ನನ್ನ ತಂದೆ ರಾಜಕಾರಣದಲ್ಲಿ ಹಠವಾದಿಯಾಗಿ ಹಲವಾರು ಪ್ರಥಮಗಳನ್ನು ದಾಖಲಿಸಿದವರು. ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದ ಅವರು, ರೈತರ ಪರವಾಗಿ ನೀರಾವರಿ ಹೋರಾಟ ಮಾಡಿಕೊಂಡು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿದವರು. ಅವರ ಅಧಿಕಾರಾವಧಿಯ ಸಾರ್ಥಕ ಯೋಜನೆಗಳು ಇಂದು ನನ್ನನ್ನು ಪ್ರತಿ ತಾಲೂಕಿನಲ್ಲಿ ನನ್ನ ತಂದೆಯ ಹೆಸರಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ನನ್ನ ತಂದೆಯನ್ನು ಹತ್ತಿರದಿಂದ ಕಂಡವರು ಸಾಕಷ್ಟು ಹಿರಿಯ ಜೀವಿಗಳು ಸಿಕ್ಕಿ ನನ್ನನ್ನು ಆಶೀರ್ವದಿಸುತ್ತಿದ್ದಾರೆ. ಅದೇ ನನಗೆ ಸುದೈವ ಎಂದು ಸಚಿವ ಮಧು ಬಂಗಾರಪ್ಪ ತಮ್ಮ ತಂದೆ ಬಂಗಾರಪ್ಪನವರನ್ನು ಸ್ಮರಿಸಿದರು.
ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ, ಹೈಕಮಾಂಡ್ ಭೇಟಿ ಆಗಿಲ್ಲ: ಜಗದೀಶ್ ಶೆಟ್ಟರ್
53 ಸಾವಿರ ಶಿಕ್ಷಕರ ಕೊರತೆ: ರಾಜ್ಯದಲ್ಲಿ ಪ್ರಸ್ತುತ 53 ಸಾವಿರ ಶಿಕ್ಷಕರ ಕೊರತೆ ಇದ್ದು 43 ಸಾವಿರ ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 12 ಸಾವಿರ ಶಿಕ್ಷಕರನ್ನು ಈಗಾಗಲೆ ನೇಮಕಾತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೇಮಕಾತಿ ಮಾಡಬೇಕಿದೆ. ಆದರೆ ಮೊದಲು ಆರ್ಥಿಕ ಇಲಾಖೆಯ ಸಾಧಕ-ಬಾಧಕಗಳನ್ನು ಸಹ ನೋಡಬೇಕಿದೆ. ಆದ್ದರಿಂದ ಎಲ್ಲವನ್ನೂ ಪರಿಗಣಿಸಿ ನೇಮಕಾತಿ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.