Asianet Suvarna News Asianet Suvarna News

ಕೆರೆ ಒತ್ತುವರಿ ತೆರವಿಗೆ ವಿರೋಧಿಸಿದ್ದೇ ಬಿಜೆಪಿ: ಸಿದ್ದು ತಿರುಗೇಟು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ತರಾಟೆ ತೆಗೆದುಕೊಂಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

BJP Opposed the Eviction of the Encroachment of the Lake Says Siddaramaiah grg
Author
First Published Sep 7, 2022, 3:30 AM IST

ಬೆಂಗಳೂರು(ಸೆ.07):  ‘ಬೆಂಗಳೂರಿನ ಮಳೆ ಅನಾಹುತಕ್ಕೆ ಹಿಂದಿನ ಸರ್ಕಾರಗಳು ಕಾರಣ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ತರಾಟೆ ತೆಗೆದುಕೊಂಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಕಾಂಗ್ರೆಸ್‌ ಸರ್ಕಾರ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲು ಮುಂದಾದಾಗ ಬಿಜೆಪಿಯವರೇ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದ್ದರು’ ಎಂದು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರ ಬದುಕು ನರಕ ಸದೃಶವಾಗಿದೆ. ಮುಖ್ಯಮಂತ್ರಿಗಳು ಇದಕ್ಕೆಲ್ಲ ಹಿಂದಿನ ಸರ್ಕಾರಗಳು ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಭವಿಷ್ಯದ ಪರಿಣಾಮ ಪರಿಗಣಿಸಿ ಮುಲಾಜಿಲ್ಲದೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿದ್ದೆವು. ಆದರೆ ಪ್ರತಿಪಕ್ಷದಲ್ಲಿದ್ದ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು’ ಎಂದು ಟೀಕಿಸಿದ್ದಾರೆ.

‘ಬಾಣಸವಾಡಿ ಕೆರೆಯ ಒತ್ತುವರಿ ತೆರವು ಮಾಡುವಾಗ ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ಅವರು ‘ಸರ್ಕಾರ ಹುಚ್ಚಾಟ ನಡೆಸುತ್ತಿದೆ. ಜನರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ಆದರೂ ಈ ರೀತಿ ಮಾಡಿರುವುದು ಸರಿಯಲ್ಲ. ಸರ್ಕಾರ ಮನೆ ಒಡೆಯುವ ಪ್ರವೃತ್ತಿ ನಿಲ್ಲಿಸಬೇಕು’ ಎಂದು ಹೇಳಿ ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದ್ದರು. ಮತ್ತೊಬ್ಬ ಬಿಜೆಪಿ ಶಾಸಕ ಜಗದೀಶ್‌ ಕುಮಾರ್‌ ಸೇರಿದಂತೆ ವಿಧಾನ ಪರಿಷತ್‌ ಸದಸ್ಯರೂ ಪ್ರತಿಭಟನೆ ನಡೆಸಿದ್ದರು ಎಂಬುದನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿದ್ರೂ ಗೆಲುವು ಖಚಿತ: ಎಚ್‌.ಎಂ.ರೇವಣ್ಣ

ಒತ್ತುವರಿ ತೆರವು ಮಾಡಿದ್ದೇ ಕಾಂಗ್ರೆಸ್‌:

‘ಎ.ಟಿ.ರಾಮಸ್ವಾಮಿಯವರು ಬೆಂಗಳೂರಿನಲ್ಲಿ 11,980 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ವರದಿ ನೀಡಿದ್ದರು. ಇದರಲ್ಲಿ 11,680 ಎಕರೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ತೆರವುಗೊಳಿಸಿದ್ದೆವು. ರಾಮಸ್ವಾಮಿಯವರು ಹೇಳಿದ್ದ ಜಾಗದ ಜೊತೆಗೆ ಹೆಚ್ಚುವರಿಯಾಗಿ 7 ಸಾವಿರ ಎಕರೆ ತೆರವುಗೊಳಿಸಿದ್ದೆವು. ತೆರವುಗೊಳಿಸಿದ್ದ ಜಮೀನಿನ ಅಂದಾಜು ಮೌಲ್ಯ 4 ಲಕ್ಷ ಕೋಟಿ ರುಪಾಯಿ ಎಂಬುದನ್ನು ಬಸವರಾಜ ಬೊಮ್ಮಾಯಿ ಅರ್ಥಮಾಡಿಕೊಳ್ಳಲಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಅಷ್ಟೇ ಅಲ್ಲ, ನಿಯಮ ಉಲ್ಲಂಘಿಸಿ ಸಂಘ ಸಂಸ್ಥೆಗಳಿಗೆ ನೀಡಿದ್ದ ಜಮೀನನ್ನೂ ವಾಪಸ್‌ ಪಡೆದಿದ್ದೆವು. ಅಪೊಲೊ ಆಸ್ಪತ್ರೆಯಿಂದ 5 ಎಕರೆ, ರಾಷ್ಟೊ್ರೕತ್ಥಾನ ಪರಿಷತ್‌ನಿಂದ 10 ಎಕರೆ, ಮಿಥಿಕ್‌ ಸೊಸೈಟಿ ಸೇರಿದಂತೆ ಹಲವರಿಂದ ಜಮೀನು ವಾಪಸ್‌ ಪಡೆದಿದ್ದೆವು. ತೆರವುಗೊಳಿಸಿದ ಜಮೀನಿನಲ್ಲಿ ಬಡವರಿಗೆ ಲಕ್ಷ ಮನೆ ನಿರ್ಮಿಸಲು 1500 ಎಕರೆ ಭೂಮಿಯನ್ನು ವಸತಿ ಇಲಾಖೆಗೆ ನೀಡಿದ್ದೆವು’ ಎಂದು ಅಂಕಿ ಅಂಶ ನೀಡಿದ್ದಾರೆ.

ಬಿಜೆಪಿ ಏನು ಮಾಡಿದೆ ?

‘ಆದರೆ, ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಒತ್ತುವರಿದಾರರಿಗೇ ಮಾರಾಟ ಮಾಡುವ, ರಿಯಲ… ಎಸ್ಟೇಟ್‌ ದಂಧೆಗೆ ಅನುಕೂಲ ಮಾಡಿಕೊಡುವ ಕಾನೂನನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ರೆವಿನ್ಯೂ ಲೇಔಟ್‌ಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ನಿವೇಶನಗಳನ್ನು ಮುಕ್ತವಾಗಿ ಖಾತೆ ಮಾಡಿಕೊಡಲು ಬೊಮ್ಮಾಯಿಯವರ ಸರ್ಕಾರವೇ ಅವಕಾಶ ನೀಡಿದೆ. ಪ್ರತಿ ನಿವೇಶನವನ್ನು ನೋಂದಣಿ ಮಾಡುವಾಗ ಯಾರಾರ‍ಯರು ಎಷ್ಟೆಷ್ಟುಕಮಿಷನ್‌ ತಿನ್ನುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಮಂಗಳೂರು ಭೇಟಿಗೆ ಸಿದ್ದು ವ್ಯಂಗ್ಯ

‘ರಿಯಲ್‌ ಎಸ್ಟೇಟ್‌ ದಂಧೆಯವರಿಗಾಗಿ ಕಾನೂನುಗಳನ್ನು ಮನಸೋ ಇಚ್ಛೆ ಬದಲಾಯಿಸಿ ನಗರವನ್ನು ನರಕ ಮಾಡಿದ್ದರೆ ಅದಕ್ಕೆ ಕಾರಣ ಯಾರು. ಬೆಂಗಳೂರು ಅಭಿವೃದ್ಧಿಗಾಗಿ ಈವರೆಗೂ ಒಬ್ಬ ಸ್ವತಂತ್ರ ಸಚಿವರನ್ನು ಏಕೆ ನೇಮಿಸಿಲ್ಲ. ತಾನು ಚೆನ್ನಾಗಿ ತಿಂದು ಮೇಕೆ ಬಾಯಿಗೆ ಒರೆಸುವ ಕೋತಿಯ ತಂತ್ರವನ್ನು ಜನರು ಅರ್ಥಮಾಡಿಕೊಳ್ಳದಷ್ಟುದಡ್ಡರಲ್ಲ. ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ ಬೆಂಗಳೂರು ಅಭಿವೃದ್ಧಿ ಬಗ್ಗೆಯೇ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಲಿ. ಕಳೆದ 20 ವರ್ಷಗಳಲ್ಲಿ ಏನೇನಾಗಿದೆ ಎಂಬ ಕುರಿತು ಸಮಗ್ರ ವರದಿಯನ್ನೂ ಬಿಡುಗಡೆ ಮಾಡಲಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸಿದ್ದು ವಾದವೇನು?

- ಬಾಣಸವಾಡಿ ಕೆರೆ ಒತ್ತುವರಿ ತೆರವು ಮಾಡುವಾಗ ವಿರೋಧಿಸಿದ್ದು ಯಾರು?
- ಒತ್ತುವರಿದಾರರಿಗೇ ಜಾಗ ಮಾರಾಟ ಮಾಡುವ ಕಾನೂನು ತಂದಿದ್ದು ಯಾರು?
- ಅಕ್ರಮ ರೆವಿನ್ಯೂ ಲೇಔಟ್‌ಗಳ ನಿವೇಶನಗಳ ಖಾತೆಗೆ ಅವಕಾಶ ನೀಡಿದ್ದು ಯಾರು?
- ಬೆಂಗಳೂರು ಅಭಿವೃದ್ಧಿಗೆ ಸ್ವತಂತ್ರ ಸಚಿವರನ್ನು ಏಕೆ ನೇಮಿಸಿಲ್ಲ?
- ಬೆಂಗಳೂರು ಅಭಿವೃದ್ಧಿ ಬಗ್ಗೆಯೇ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆಯಾಗಲಿ
- ಕಳೆದ 20 ವರ್ಷದಲ್ಲಿ ಏನೇನಾಗಿದೆ ಎಂಬ ಸಮಗ್ರ ವರದಿ ಬಿಡುಗಡೆ ಮಾಡಿ
 

Follow Us:
Download App:
  • android
  • ios