ಜೆಡಿಎಸ್‌ ಜೊತೆಗಿನ ಮೈತ್ರಿಗೆ ಬಿಜೆಪಿಯಲ್ಲಿ ಯಾರಿಗೂ ಅಸಮಾಧಾನ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ

ನವದೆಹಲಿ (ಅ.02): ಜೆಡಿಎಸ್‌ ಜೊತೆಗಿನ ಮೈತ್ರಿಗೆ ಬಿಜೆಪಿಯಲ್ಲಿ ಯಾರಿಗೂ ಅಸಮಾಧಾನ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾನುವಾರ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಅವರು ದೆಹಲಿಗೆ ಆಗಮಿಸಿದರು. ಈ ವೇಳೆ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮೈತ್ರಿ ವಿಚಾರದಲ್ಲಿ ಅವರನ್ನು ಪರಿಗಣಸದೇ ಇರುವುದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. 

ಆದರೆ, ಮೈತ್ರಿಗೆ ಸಂಬಂಧಿಸಿದಂತೆ ನನಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಈ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿದ್ದಾರೆ. ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದರು. ಜೆಡಿಎಸ್‌ ನಲ್ಲಿ ವಿಶೇಷವಾಗಿ ಮುಸ್ಲಿಂ ನಾಯಕರಿಗೆ ಈ ಬಗ್ಗೆ ಅಸಮಾಧಾನ ಇರಬಹುದು. ಕೆಲವು ನಾಯಕರು ಪಕ್ಷ ಬಿಟ್ಟು ಹೋಗುತ್ತಿರಬಹುದು. ಮುಸ್ಲಿಂ ನಾಯಕರು ಜೆಡಿಎಸ್ ತೊರೆಯುತ್ತಿರುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. 

ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಪರಿಹಾರ: ಸಂಸದ ಡಿ.ಕೆ.ಸುರೇಶ್

ಹಿಂದೆ ಕೂಡಾ ಮುಸ್ಲಿಂ ಸಮುದಾಯ ಜೆಡಿಎಸ್‌ಗೆ ವಾಸ್ತವವಾಗಿ ಬೆಂಬಲ ನೀಡಿರಲಿಲ್ಲ. ಬೆಂಬಲ ನೀಡಿದ್ದರೆ ಜೆಡಿಎಸ್ 19 ಸ್ಥಾನಕ್ಕೆ ಸೀಮಿತವಾಗಿ ಇರುತ್ತಿರಲಿಲ್ಲ ಎಂದರು. ‘ಆಪರೇಷನ್‌ ಹಸ್ತ’ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ಗೆ ಬಿಜೆಪಿಯ ಯಾವ ನಾಯಕರೂ ಹೋಗುವುದಿಲ್ಲ. ರಾಮಪ್ಪ ಲಮಾಣಿಯವರನ್ನು ಕರೆದು ಮಾತನಾಡುತ್ತೇನೆ. ಉಳಿದವರ ಜೊತೆಗೂ ನಾನೇ ಮಾತನಾಡುತ್ತೇನೆ. ಕೆಲವು ಕಾರಣಗಳಿಗೆ ಒಬ್ಬೊಬ್ಬ ನಾಯಕರು ಹೋದರೆ ಪಕ್ಷಕ್ಕೆ ಏನೂ ಪರಿಣಾಮ ಬೀರುವುದಿಲ್ಲ ಎಂದರು.

ಮತ್ತೆ ಮೋದಿ ಪ್ರಧಾನಿ ಆಗಲೆಂದು ಬಿಜೆಪಿ ಪೂಜೆ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ನಿಮಿತ್ತ ಅವರ ಆರೋಗ್ಯ ವೃದ್ಧಿ ಮತ್ತು ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ಗಣೇಶನಿಗೆ ವಿಶೇಷ ಪೂಜೆ ನೆರವೇರಿಸಿದ್ದೇವೆ. ಇನ್ನು ಮುಂದೆ ರಾಜ್ಯಾದ್ಯಂತ ಪ್ರವಾಸ ಮಾಡಿ, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. 

ಬಿಜೆಪಿ-ಜೆಡಿಎಸ್ ಮೈತ್ರಿ: ಅಸಮಾಧಾನ ಹೋಗಲಾಡಿಸಲು ಶಾಸಕರು, ಎಂಎಲ್‌ಸಿಗಳ ಸಭೆ ನಡೆಸಿದ ದೇವೇಗೌಡರು!

ರಾಜ್ಯ ಸರ್ಕಾರ ಇದ್ದರೂ ಸತ್ತಂತಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಹಾಗಾಗಿ, ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಲಿದ್ದೇವೆ. ರಾಜ್ಯದಲ್ಲಿನ ಭೀಕರ ಬರಗಾಲ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ, ಮುಳಬಾಗಿಲಿನಿಂದ ಹೋರಾಟ ಪ್ರಾರಂಭವಾಗಿದೆ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರ ಸಭೆಗಳನ್ನು ನಡೆಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಮೋದಿಯವರಿಗೆ ಉಡುಗೊರೆ ನೀಡಲಿದ್ದೇವೆ ಎಂದರು.