*   2 ಸಭೆಗಳಲ್ಲಿ ಜಗತ್‌ ಪ್ರಕಾಶ್‌ ನಡ್ಡಾ ಭಾಗಿ*  ಬೆಂಗಳೂರು, ಚಿತ್ರದುರ್ಗದಲ್ಲಿ ಪಕ್ಷ ಸಂಘಟನೆ ಸಭೆ*  ಚಿತ್ರದುರ್ಗದಲ್ಲಿ ಭಾರಿ ಸಿದ್ಧತೆ  

ಬೆಂಗಳೂರು/ಚಿತ್ರದುರ್ಗ(ಜೂ.18):  ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಈಗಿನಿಂದಲೇ ಪರೋಕ್ಷವಾಗಿ ಸಿದ್ಧತೆ ಆರಂಭಿಸಿರುವ ಹಿನ್ನೆಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರು ಶನಿವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಆಗಮಿಸಲಿರುವ ನಡ್ಡಾ ಅವರು ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಎರಡು ಸಭೆಗಳಲ್ಲಿ ಪಾಲ್ಗೊಂಡು ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ.

Add Asianetnews Kannada as a Preferred SourcegooglePreferred

ದೆಹಲಿಯಿಂದ ಮಧಾಹ್ನ 12 ಗಂಟೆಗೆ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು 12.30ಕ್ಕೆ ಬೆಂಗಳೂರಿನ ಯಲಹಂಕದ ಹೊಟೇಲ್‌ ರಮಡಾದಲ್ಲಿ ನಡೆಯುತ್ತಿರುವ ಒಬಿಸಿ ಮೋರ್ಚಾದ ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಜಕೀಯ ಸಂಸ್ಕೃತಿ ಬದಲಾಯಿಸಿದ್ದು ಮೋದಿ ಹೆಗ್ಗಳಿಕೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಣ್ಣನೆ

ಬಳಿಕ ಜಕ್ಕೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಚಿತ್ರದುರ್ಗಕ್ಕೆ ತೆರಳಲಿರುವ ನಡ್ಡಾ ಅವರು 4 ಗಂಟೆಗೆ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಬಿಜೆಪಿ ಸದಸ್ಯರ ರಾಜ್ಯಮಟ್ಟದ ಜನಪ್ರತಿನಿಧಿ ಸಮಾವೇಶ ಉದ್ಘಾಟಿಸಲಿದ್ದಾರೆ.

ಚಿತ್ರದುರ್ಗದಲ್ಲಿ ಭಾರಿ ಸಿದ್ಧತೆ:

ನಡ್ಡಾ ಆಗಮನ ಹಿನ್ನೆಲೆ ಬಿಜೆಪಿ ಮುಖಂಡರು ಚಿತ್ರದುರ್ಗದ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಮಾವೇಶ ನಡೆಯುವ ಬಸವಕೇಂದ್ರ ಮುರುಘಾಮಠದ ಆವರಣದಲ್ಲಿರುವ ಅನುಭವ ಮಂಟಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ ಶುಕ್ರವಾರ ಖುದ್ದು ಹಾಜರಿದ್ದು ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

ಇಡೀ ನಗರವನ್ನು ಬಿಜೆಪಿ ಬಾವುಟಗಳಿಂದ ಸಿಂಗರಿಸಲಾಗಿದೆ. ಪ್ರತಿಯೊಂದು ವೃತ್ತಗಳೂ ಕೇಸರಿಮಯವಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಆಗಮಿಸುತ್ತಿರುವ ಹಿನ್ನೆಲೆ ಪೊಲೀಸರು ವಾಹನ ನಿಲುಗಡೆ, ಸುಗಮ ಸಂಚಾರಕ್ಕೆ ಸಂಬಂಧಿಸಿದ ಪೂರ್ವ ತಯಾರಿಗಳನ್ನು ಅಂತಿಮಗೊಳಿಸಿದ್ದಾರೆ. ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಬಳ್ಳಾರಿ, ಬೆಂಗಳೂರು ಕಡೆಯಿಂದ ಜನಪ್ರತಿನಿಧಿಗಳು ಆಗಮಿಸುತ್ತಿರುವುದರಿಂದ ನಗರ ಪ್ರವೇಶಿಸುವ ಎಲ್ಲ ಕಡೆ ಸ್ವಾಗತದ ಕಮಾನುಗಳನ್ನು ಕಟ್ಟಲಾಗಿದೆ. 

Karnataka Cabinet Expansion: ಸಂಪುಟ ಪುನಾರಚನೆಗೆ ಹೈಕಮಾಂಡ್‌ ಅಸ್ತು: ಬೊಮ್ಮಾಯಿಗೆ ನಡ್ಡಾ ಬುಲಾವ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಸಮಾವೇಶಕ್ಕೆ ಆಗಮಿಸುತ್ತಿದ್ದು, ಇವರ ಭಾವಚಿತ್ರವಿರುವ ಬ್ಯಾನರುಗಳು ಎಲ್ಲ ಕಡೆ ರಾರಾಜಿಸುತ್ತಿವೆ. ಅನುಭವ ಮಂಟಪದ ಪ್ರಾಂಗಣದಲ್ಲಿ ಹತ್ತು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು ವೇದಿಕೆ ಕೂಡ ವಿಶಾಲವಾಗಿದೆ. ರಾಜ್ಯ ಮಟ್ಟದ ಸಮಾವೇಶ ಇದಾಗಿರುವುದರಿಂದ 50ಕ್ಕೂ ಹೆಚ್ಚು ಶಾಸಕರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ನಡ್ಡಾ ವೇಳಾಪಟ್ಟಿ

ಮಧ್ಯಾಹ್ನ 12: ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ
12.30: ಯಲಹಂಕದಲ್ಲಿ ಒಬಿಸಿ ಮೋರ್ಚಾ ಪ್ರಶಿಕ್ಷಣ ವರ್ಗದಲ್ಲಿ ಭಾಗಿ
3.55: ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ
ಸಂಜೆ 4.00: ಚಿತ್ರದುರ್ಗದಲ್ಲಿ ಬಿಜೆಪಿ ಜನಪ್ರತಿನಿಧಿ ಸಮಾವೇಶಕ್ಕೆ ಹಾಜರಿ
ಸಂಜೆ 5.30: ಚಿತ್ರದುರ್ಗದಿಂದ ಹೊರಟು ಬೆಂಗಳೂರು ತಲುಪಿ ದಿಲ್ಲಿಗೆ ಪ್ರಯಾಣ