ಬೆಂಗಳೂರು (ಫೆ. 05): ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದ ನಂತರ ಕೇರಳ ಮತ್ತು ತಮಿಳುನಾಡಿನಲ್ಲಿ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಲು ಬಿಜೆಪಿ ಸಿದ್ಧತೆ ಆರಂಭಿಸಿದೆ. ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಪಡೆದಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಮಿಳುನಾಡಿನ ಉಸ್ತುವಾರಿಯೂ ಹೌದು.

ಬರುವ ಏಪ್ರಿಲ್‌ ತಿಂಗಳಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಭರದ ತಯಾರಿ ಆರಂಭಿಸಿರುವ ಸಿ.ಟಿ.ರವಿ ಅವರು ಸತತವಾಗಿ ಆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆಗೆ ಚೇತನ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರವಿ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

*ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡು ಕೆಲಸ ಆರಂಭಿಸಿದ್ದೀರಿ. ಹೇಗನ್ನಿಸುತ್ತಿದೆ?

-ಇದೊಂದು ಹೊಸ ಅನುಭವ. ಅನುಭವ ಹೊಂದಲು ಹಾಗೂ ಬೆಳೆಯಲು ಎರಡೂ ಅವಕಾಶಗಳಿವೆ. ಕಲಿಯುವ ಅಂಶಗಳು, ಬೇರೆ-ಬೇರೆ ರಾಜ್ಯಗಳಲ್ಲಿನ ನಡೆಯುವ ರಾಜಕೀಯ ವಿದ್ಯಮಾನಗಳು ನಮ್ಮ ಅನುಭವವನ್ನು ವಿಸ್ತಾರಗೊಳಿಸುವುದರ ಜತೆ ವಿಶ್ವಾಸ ಮೂಡಿಸುತ್ತವೆ. ಮೂರು ತಿಂಗಳಲ್ಲಿ ವಿಶ್ವಾಸ ಹಾಗೂ ಅನುಭವ ಎರಡೂ ವಿಸ್ತರಿಸಿದೆ.

ಕಾರ್ಯಕರ್ತರೊಂದಿಗೆ ಬೆರೆಯುವ ಸ್ವಭಾವ ಇರುವ ಮತ್ತು ನಾನು ಕಾರ್ಯಕರ್ತ ಎಂಬ ಮನೋಭಾವ ಇಟ್ಟುಕೊಂಡು ಕೆಲಸ ಮಾಡುವ ಕಾರಣ ಎಲ್ಲರೊಂದಿಗೆ ಕೆಲಸ ಮಾಡುವುದು ಸುಲಭವಾಗಿದೆ. ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಂದುಕೊಂಡು ಹೋದರೆ ಸಾಧ್ಯವಿಲ್ಲ. ಮೂರು ರಾಜ್ಯಗಳು ವಿವಿಧ ಸಾಂಸ್ಕೃತಿಕ ಮತ್ತು ರಾಜಕೀಯ ಹಿನ್ನೆಲೆ ಹೊಂದಿದ್ದು, ಕರ್ನಾಟಕದೊಂದಿಗೆ ಒಂದಲ್ಲ, ಒಂದು ರೀತಿಯಲ್ಲಿ ಸಂಬಂಧ ಹೊಂದಿದೆ.

*ನೀವು ಉಸ್ತುವಾರಿ ವಹಿಸಿಕೊಂಡಿರುವ ಮೂರೂ ರಾಜ್ಯಗಳ ಜೊತೆಗೆ ಕರ್ನಾಟಕದ ನದಿ ನೀರಿನ ಹಂಚಿಕೆ ಕುರಿತಂತೆ ಆಗಾಗ ಸಮಸ್ಯೆ ಸೃಷ್ಟಿಯಾಗುತ್ತಿರುತ್ತದೆ? ಹೇಗೆ ನಿಭಾಯಿಸುತ್ತೀರಿ?

-ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಯಾವುದೇ ರಾಜ್ಯಕ್ಕೂ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಪ್ರಾದೇಶಿಕ ಪಕ್ಷಗಳಲ್ಲಿ ಸಮಸ್ಯೆ ಇರುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ ಮತ್ತು ತಮಿಳುನಾಡು ರಾಜ್ಯವನ್ನು ಸಮಾನವಾಗಿ ಕಾಣುವುದರಿಂದ ನ್ಯಾಯ ಕೊಡಬೇಕಾದರೆ ಸಮಾನ ನ್ಯಾಯವನ್ನೇ ಕೊಡಲಾಗುತ್ತದೆ. ನಮ್ಮಲ್ಲಿ ರಾಷ್ಟ್ರೀಯತೆ ಇರುವ ಕಾರಣ ಆ ನಿಟ್ಟಿನಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ. ಕೆಲವರು ಇಂತಹ ವಿಚಾರದಲ್ಲಿ ನಮ್ಮನ್ನು ಸಿಕ್ಕಿಸಲು ಯತ್ನಿಸುತ್ತಾರೆ. ಇಂತಹ ವಿಚಾರದಲ್ಲಿ ಮೈ ಮರೆಯವಂತಿಲ್ಲ.

ಶಂಖದಿಂದ ಬಿದ್ದರೆ ಮಾತ್ರ ತೀರ್ಥ ಎಂಬ ಮಾತಿದೆ. ಒಂದು ಸದುದ್ದೇಶದಿಂದ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಿದರೂ ಅಲ್ಲಿನ ಪ್ರತಿಸ್ಪರ್ಧಿ ಪಕ್ಷಗಳು ರಾಜಕೀಯವಾಗಿ ವಿವಾದ ಉಂಟು ಮಾಡುತ್ತವೆ. ಉದಾಹರಣೆಗೆ ಅಯೋಧ್ಯೆ ತೀರ್ಪನ್ನು ಸರ್ಕಾರ ತೆಗೆದುಕೊಂಡಿದ್ದರೆ ವಿವಾದ ಮಾಡುವ ಸಾಧ್ಯತೆ ಇತ್ತು. ಸುಪ್ರೀಂಕೋರ್ಟ್‌ ತೀರ್ಪನ್ನು ಎಲ್ಲರೂ ಒಪ್ಪಿಕೊಂಡರು. ಪ್ರತಿಯೊಂದನ್ನು ರಾಜಕೀಯವಾಗಿ ನೋಡುವ ಮನೋಭಾವನೆ ದೇಶದಲ್ಲಿ ಹೆಚ್ಚಿದೆ. ವಿವಾದ ಅಲ್ಲದಿದ್ದರೂ ವಿವಾದ ಹುಟ್ಟು ಹಾಕಲಾಗುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಈ ವಿಚಾರದಲ್ಲಿ ಹೆಜ್ಜೆ ಇಡಲಾಗುವುದು.

*ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ತಮಿಳುನಾಡು ವಿಧಾನಸಭಾ ಚುನಾವಣೆ ನಿಮಗೆ ಮೊದಲ ಸವಾಲಾಗಿದೆಯೇ?

-ಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು 2001ರಲ್ಲಿ ನಾಲ್ಕು ಶಾಸಕರು ಹಾಗೂ 1999ರಲ್ಲಿ ಐವರು ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಇದಕ್ಕಿಂತ ಮೀರಿದ ಸಾಧನೆ ಬಿಜೆಪಿ ತಮಿಳುನಾಡಿನಲ್ಲಿ ಮಾಡಿಲ್ಲ. ಪ್ರತಿ ಚುನಾವಣೆಯೂ ಸವಾಲು. ಆದರೆ ಬಿಜೆಪಿ ಚುನಾವಣೆಗಾಗಿಯೇ ಇರುವ ಪಕ್ಷವಲ್ಲ. ವೈಚಾರಿಕ ಕಾರಣಕ್ಕಾಗಿ ಸಂಘಟನೆ ಗಟ್ಟಿಮಾಡಲಾಗುತ್ತಿದೆ. ರಾಷ್ಟ್ರ ಮೊದಲು ಎಂಬುವ ಪಕ್ಷ ಬಿಜೆಪಿ. ಪಕ್ಷ ತಳಮಟ್ಟದಲ್ಲಿ ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ.

* ತಮಿಳುನಾಡಿನಲ್ಲಿ ಪಕ್ಷ ಸಂಘಟನೆ ಹೇಗಿದೆ? ಚುನಾವಣೆ ಸಿದ್ಧತೆ ಹೇಗೆ ಸಾಗಿದೆ?

-ಪಕ್ಷದ ಸಂಘಟನೆ ಚೆನ್ನಾಗಿದೆ. ಬಿಜೆಪಿಯನ್ನು ಜನರ ಪಕ್ಷವನ್ನಾಗಿ ರೂಪಿಸುವ ಪ್ರಯತ್ನದಲ್ಲಿದ್ದೇವೆ. ಕೇಡರ್‌ ಆಧಾರಿತ ಪಕ್ಷವನ್ನು ಮಾಸ್‌ ಆಧಾರಿತ ಪಕ್ಷವನ್ನಾಗಿ ಮಾಡುವ ಕೆಲಸಕ್ಕೆ ಕೈಹಾಕಿದ್ದೇವೆ. 70 ಸಾವಿರ ಬೂತ್‌ ಸಮಿತಿಗಳ ಪೈಕಿ 48 ಸಾವಿರ ಬೂತ್‌ ಸಮಿತಿಗಳನ್ನು ರಚಿಸಲಾಗಿದೆ. ಅವುಗಳನ್ನು ಸಕ್ರಿಯಗೊಳಿಸುವ ಕೆಲಸ ನಡೆಯುತ್ತಿದೆ. 1004 ಸಂಘಟನಾ ಮಂಡಲಗಳನ್ನು ರಚಿಸಿದ್ದೇವೆ. 69 ಸಂಘಟನಾ ಜಿಲ್ಲೆಗಳಿಗೆ ಸಮಿತಿಗಳನ್ನು ರಚಿಸಿದ್ದೇವೆ. ಚೆನ್ನಾಗಿ ಸಂಘಟನೆ ನಡೆಯುತ್ತಿದೆ.

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಬಂದು ಸಭೆ ನಡೆಸಿದ್ದಾರೆ. ಇದೇ ತಿಂಗಳು ಪ್ರಧಾನ ಮಂತ್ರಿಗಳು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಇನ್ನು ಪ್ರತಿಯೊಬ್ಬರ ನೇತೃತ್ವದಲ್ಲಿ ಸಂಘಟನೆಗೆ ಒತ್ತು ನೀಡಲಾಗಿದೆ. ಹಾಲಿ-ಮಾಜಿ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

* ಈ ಬಾರಿ ಅಲ್ಲಿನ ಆಡಳಿತಾರೂಢ ಎಐಎಡಿಎಂಕೆ ಜೊತೆ ಹೊಂದಾಣಿಕೆಗೆ ಬಿಜೆಪಿ ಸಜ್ಜಾಗಿದೆಯಂತೆ?

-ಹೌದು. ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ತೀರ್ಮಾನವಾಗಿದೆ. ಎಷ್ಟುಸ್ಥಾನಗಳಲ್ಲಿ ಹೊಂದಾಣಿಗೆ ಎನ್ನುವುದು ಇನ್ನು ಮುಂದೆ ನಿರ್ಧಾರವಾಗಬೇಕಿದೆ. ಪಕ್ಷಕ್ಕೆ ಸಿಗಬಹುದಾದ ಸ್ಥಾನಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದು ನಮ್ಮ ಗುರಿ. ಹಾಗೆಯೇ ಮಿತ್ರ ಪಕ್ಷಗಳು ಗೆಲ್ಲುವಂತೆ ನೋಡಿಕೊಳ್ಳಬೇಕಿದೆ.

*ತಮಿಳುನಾಡಿನಲ್ಲಿ ಇದುವರೆಗೆ ಪ್ರಾದೇಶಿಕ ಪಕ್ಷಗಳೇ ರಾಜ್ಯಭಾರ ನಡೆಸಿವೆ. ತಮಿಳರು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಅವಕಾಶ ನೀಡುತ್ತಾರಾ?

-ನೋಡಿ, 54 ವರ್ಷಗಳಿಂದ ಎರಡೇ ಪಕ್ಷಗಳು ಅಧಿಕಾರದಲ್ಲಿ ನಿರಂತರವಾಗಿವೆ. ಒಂದಲ್ಲ ಒಂದು ದಿನ ಪಕ್ಷದ ರಾಷ್ಟ್ರವಾದ ತಮಿಳು ಭಾಷಿಕರನ್ನು ರಕ್ಷಣೆ ಮಾಡುತ್ತದೆ ಎಂಬ ವಿಶ್ವಾಸ ಆ ಜನರಿಗೆ ಬರುತ್ತದೆ. ಆಗ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಅಸಾಧ್ಯ ಎಂಬುವಂತಹದ್ದು ಏನೂ ಇಲ್ಲ. ಶೇ.1ರಷ್ಟುಮತ ಇದ್ದ ತ್ರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಅಭಿಪ್ರಾಯಗಳು ಈಗಾಗಲೇ ವ್ಯಕ್ತವಾಗುತ್ತಿದೆ. ತೆಲಂಗಾಣದಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪರ್ಯಾಯ ಪಕ್ಷ ಎಂಬುದನ್ನು ಸಾಬೀತುಪಡಿಸಿದ್ದೇವೆ.

*ನಟ ರಜನಿಕಾಂತ್‌ ರಾಜಕೀಯ ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿದಿರುವುದು ಬಿಜೆಪಿಗೆ ಅನುಕೂಲವಾಗಲಿದೆಯೇ ಅಥವಾ ಅನನುಕೂಲವಾಗಲಿದೆಯೇ?

-ಆರೋಗ್ಯದ ದೃಷ್ಟಿಯಿಂದ ರಜನಿಕಾಂತ್‌ ಅವರು ಪಕ್ಷ ಸ್ಥಾಪನೆ ಮಾಡಲಿಲ್ಲ. ರಜನಿಕಾಂತ್‌ ಅವರು ತಮಿಳುನಾಡಿನ ಹಿತಾಸಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿದ್ದು, ಒಳ್ಳೆ ನಿಲುವು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಅವರ ಒಂದು ನಿಲುವು ದೇಶ ಹಾಗೂ ತಮಿಳುನಾಡಿನ ರಕ್ಷಣೆಗೆ ಸಹಕಾರಿಯಾಗಲಿದೆ. ರಾಜಕೀಯ ಪಕ್ಷವನ್ನು ಹುಟ್ಟು ಹಾಕದಿದ್ದರೂ ರಾಜಕೀಯ ಪಕ್ಷಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ನೀಡಬಹುದು ಎಂಬ ನಿರೀಕ್ಷೆಯಿದೆ.

*ಮುಂಬರುವ ಚುನಾವಣೆ ಉದ್ದೇಶದಿಂದಲೇ ತಮಿಳುನಾಡಿಗೆ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ ನೀಡಿರುವಂತಿದೆ?

-ಹಿಂದೆ ಕಡೆಗಣಿಸಲ್ಪಟ್ಟರಾಜ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಪರಿಣಾಮ ಈಶಾನ್ಯ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ. ರಾಜಕೀಯ ಕಾರಣಕ್ಕೆ ಈ ಹಿಂದೆ ಅನುದಾನ ನೀಡಲಾಗುತ್ತಿತ್ತು. ಇದೀಗ ನಮ್ಮ ಸರ್ಕಾರ ಜನಸಂಖ್ಯೆಯನ್ನು ಆಧರಿಸಿ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ. ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಒಂದು ರಾಜ್ಯಕ್ಕೆ ಅನುದಾನದ ಕೊರತೆ ಎದುರಾಗಬಾರದು. ಎಲ್ಲ ರಾಜ್ಯಗಳಿಗೂ ಅನುದಾನ ಹಂಚಿಕೆ ಮಾಡಬೇಕು ಎಂಬ ಉದ್ದೇಶದಿಂದ ಈ ಬಾರಿ ತಮಿಳುನಾಡಿಗೂ ಬಜೆಟ್‌ನಲ್ಲಿ ಹಲವು ಕೊಡುಗೆಗಳನ್ನು ನೀಡಲಾಗಿದೆ.

*ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆ ಮಾಡುತ್ತಿದೆ ಎಂಬ ಕೂಗು ದಿನೇ ದಿನೇ ಬಲವಾಗುತ್ತಿದೆ. ಹೇಳಿ ಕೇಳಿ ತಮಿಳುನಾಡಿನಲ್ಲಿ ಹಿಂದಿಗೆ ಬಲವಾದ ವಿರೋಧ ಇದೆಯಲ್ಲ?

-ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಸಿಗಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ. ಇದರಿಂದ ಪ್ರಾದೇಶಿಕ ಭಾಷೆಗಳ ಅಸ್ಮಿತೆÜಗೆ ಧಕ್ಕೆಯಾಗುವುದು ತಪ್ಪುತ್ತದೆ. ಹಾಗೆಯೇ ಉನ್ನತ ಶಿಕ್ಷಣ ಸಂದರ್ಭದಲ್ಲಿ ಮೂರನೇ ಭಾಷೆಯಾಗಿ ದೇಶದ 22 ಭಾಷೆಗಳಲ್ಲಿ ಯಾವ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂಬ ಅವಕಾಶ ನೀಡಲಾಗಿದೆ. ಇದರಿಂದಾಗಿ ತಮಿಳುನಾಡಿನಿಂದ ಹೊರಗೆ ಕೂಡ ತಮಿಳು ಭಾಷೆ ಕೂಡ ಕಲಿಯಬಹುದು. ಹೀಗಾಗಿ ಯಾವುದೇ ಭಾಷೆಯ ಹೇರಿಕೆ ಮಾಡುವ ಉದ್ದೇಶವೇ ಇಲ್ಲ.

*ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ಪೊಲೀಸ್‌ ಸೇವೆ ತೊರೆದು ನಿಮ್ಮ ಪಕ್ಷ ಸೇರಿದ್ದಾರೆ. ತಮಿಳುನಾಡು ಬಿಜೆಪಿಯಲ್ಲಿ ಅವರ ಪಾತ್ರ ಏನು?

-ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಕಾರಿಯಾಗಿದ್ದ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಒಂದು ರೀತಿಯ ಕುತೂಹಲ ಹುಟ್ಟು ಹಾಕಿದ್ದಾರೆ. ಭವಿಷ್ಯದಲ್ಲಿ ತಮಿಳುನಾಡಿನಲ್ಲಿ ಪ್ರಭಾವಶಾಲಿ ನಾಯಕರಾಗಿ ಹೊರ ಹೊಮ್ಮಲಿದ್ದಾರೆ. ಭವಿಷ್ಯದಲ್ಲಿ ಮುಂದೆ ಒಂದು ದಿನ ನಾವು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲಿದ್ದೇವೆ.

* ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆಗಳು ರಾಷ್ಟಾ್ರದ್ಯಂತ ವಿವಾದ ಎಬ್ಬಿಸಿವೆ. ಇದು ತಮಿಳುನಾಡಿನ ಚುನಾವಣೆಯ ಮೇಲೂ ಪರಿಣಾಮ ಬೀರುವುದಿಲ್ಲವೇ?

-ಕೃಷಿ ತಿದ್ದುಪಡಿ ಕಾಯ್ದೆಗಳು ರೈತ ವಿರೋಧಿಯಲ್ಲ. ಕಾಯ್ದೆ ಬಗ್ಗೆ ತಪ್ಪಾಗಿ ಅರ್ಥೈಸುವ ಕೆಲಸ ಮಾಡಲಾಗುತ್ತಿದೆ. ರೈತರು ಹೊಸ ಕೃಷಿ ಕಾಯ್ದೆ ವಿರುದ್ಧ ಇಲ್ಲ. ರೈತರ ಹೆಸರಿನಲ್ಲಿ ವಿರೋಧ ನಡೆಸಲಾಗುತ್ತಿದ್ದು, ಸುಳ್ಳ ಸುದ್ದಿ ಹಬ್ಬಿಸುವ ಮೂಲಕ ರೈತ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಇವೆಲ್ಲವೂ ತಾತ್ಕಾಲಿಕವಾಗಿದ್ದು, ಶೀಘ್ರವೇ ಮುಖವಾಡ ಕಳಚಿ ಬೀಳಲಿದೆ. 11 ಬಾರಿ ರೈತರ ಜತೆ ಮಾತುಕತೆಯಾಗಿದ್ದು, ಎಲ್ಲ ಗೊಂದಲವನ್ನು ನಿವಾರಣೆ ಮಾಡಲಾಗಿದೆ. ಆದರೂ ಕೆಲವರು ವಿರೋಧದ ವಾತಾವಣ ಮುಂದುವರೆಸುವ ಪ್ರಯತ್ನದಲ್ಲಿದ್ದಾರೆ. ನಿಜವಾದ ರೈತರು ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ.

-  ಸಂದರ್ಶನ: ವಿಜಯ್‌ ಮಲಗಿಹಾಳ