ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕರುಣಿಸಿದ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಮೋಸ ವಂಚನೆಯನ್ನೇ ತನ್ನ ಜೀವಾಳ ಮಾಡಿರುವ ಕಾಂಗ್ರೆಸ್‌ ಎಂದೂ ಸಹ ದೇಶಕ್ಕಾಗಿ ಎನ್ನುವುದೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು. 

ಕೊಪ್ಪಳ (ಮಾ.13): ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕರುಣಿಸಿದ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಮೋಸ ವಂಚನೆಯನ್ನೇ ತನ್ನ ಜೀವಾಳ ಮಾಡಿರುವ ಕಾಂಗ್ರೆಸ್‌ ಎಂದೂ ಸಹ ದೇಶಕ್ಕಾಗಿ ಎನ್ನುವುದೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್‌ ಖಾತೆ ಸಚಿವರಾಗಿದ್ದ ವೇಳೆಯಲ್ಲಿ ವಿದ್ಯುತ್‌ನ್ನೇ ಕೊಡದವರು ಈಗ ಉಚಿತ ವಿದ್ಯುತ್‌ ನೀಡುತ್ತೇವೆ ಎನ್ನುತ್ತಾರೆ. 

ಇನ್ನು ಕಾಂಗ್ರೆಸ್‌ ಪಕ್ಷದ ವತಿಯಿಂದ ಗ್ಯಾರಂಟಿ ಕಾರ್ಡ್‌ ವಿತರಣೆ ಮಾಡುತ್ತಿರುವುದು ನಾಚಿಕೆಗೇಡು. ಅದ್ಯಾವ ಗ್ಯಾರಂಟಿ ಕಾರ್ಡ್‌ ಅಲ್ಲವೇ ಅಲ್ಲ, ಫಾಲ್ಸ್‌ ಕಾರ್ಡ್‌. ಸರ್ಕಾರದಲ್ಲಿ ಇಲ್ಲದ ತಮಗೆ ಗ್ಯಾರಂಟಿ ಕಾರ್ಡ್‌ ಹೇಗೆ ಕೊಡುತ್ತೀರಿ? ಸರ್ಕಾರ ಇದ್ದಾಗ ಜನರಿಗೆ ಗ್ಯಾರಂಟಿ ಕೊಟ್ಟಿಲ್ಲ ನೀವು, ಈಗ ಗ್ಯಾರಂಟಿ ಕಾರ್ಡ್‌ ನೀಡಿದರೆ ಜನರು ನಂಬುವುದಿಲ್ಲ ಎಂದರು. ಮಹಾತ್ಮಾಗಾಂಧಿ ಮತ್ತು ಇಂದಿರಾ ಗಾಂಧಿ ಅವರಿಗೂ ಏನು ಸಂಬಂಧ? ಜನರಿಗೆ ಮೋಸ ಮಾಡಲು ಗಾಂಧಿ ಹೆಸರನ್ನು ಬಳಕೆ ಮಾಡುತ್ತಾ ಬಂದಿದ್ದೀರಿ. ಈಗ ಅದೆಲ್ಲವೂ ಗೊತ್ತಾಗುತ್ತಿರುವುದರಿಂದ ಜನರು ನಿಮ್ಮನ್ನು ತಿರಸ್ಕಾರ ಮಾಡುತ್ತಿದ್ದಾರೆ. 

ದಾರಿ ಮಧ್ಯೆ ನಿಂತ ಸರ್ಕಾರಿ ಮುಕ್ತಿ ವಾಹನ: ತಳ್ಳಿ ಸ್ಟಾರ್ಟ್ ಮಾಡಿದ ಮೃತನ ಸಂಬಂಧಿಕರು

ನೀವು ಈಗ ಏನು ಹೇಳಿದರೂ ಮತದಾರರು ನಂಬುವ ಸ್ಥಿತಿಯಲ್ಲಿ ಇಲ್ಲ. ಇಡೀ ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದು, ಅಲ್ಲಿ ಯಾವ ಗ್ಯಾರಂಟಿ ಕಾರ್ಡ್‌ ಕೊಟ್ಟಿಲ್ಲ, ಇಲ್ಲಿ ಅಧಿಕಾರ ಇಲ್ಲದಿರುವ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ನೀಡುತ್ತಿದೆ ಎಂದು ಅಪಹಾಸ್ಯ ಮಾಡಿದರು. ಕುಕ್ಕರ್‌ ಬಾಂಬ್‌ ಇಟ್ಟಿದ್ದನ್ನು ಪತ್ತೆ ಮಾಡಿದಾಗ ಏನೆಲ್ಲ ಮಾತನಾಡಿದರು. ಈಗ ಅದರ ಮೂಲ ಪತ್ತೆಯಾಗಿದೆ. ಕುಕ್ಕರ್‌ ಬಾಂಬ್‌ ಇಟ್ಟವರ ಬಾಲವನ್ನೇ ಕಟ್‌ ಮಾಡಿದ್ದೇವೆ ಎಂದು ಹೇಳಿದರು. ಕೇಂದ್ರ ಸಚಿವ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಜನರು ಗೌರವಯುತ ಬದುಕು ಸಾಗಿಸುತ್ತಿದ್ದಾರೆ. 

ಆರೋಗ್ಯಪೂರ್ಣ ಬದುಕು ಸಾಗಿಸುತ್ತಿದ್ದಾರೆ. ಇದಕ್ಕಾಗಿ ಶೌಚಾಲಯ ಕಟ್ಟಿಸಲಾಗಿದೆ, ಗ್ಯಾಸ್‌ ನೀಡಲಾಗಿದೆ. ಇದ್ಯಾವುದನ್ನು ಈ ಹಿಂದೆ ಮಾಡದ ಕಾಂಗ್ರೆಸ್‌ ಈಗ ಗ್ಯಾರಂಟಿ ಕಾರ್ಡ್‌ ಕೊಟ್ಟರೆ ಯಾರು ಕೇಳುತ್ತಾರೆ? ಇಂಥ ಗ್ಯಾರಂಟಿ ಕಾರ್ಡ್‌ಗೆ ಯಾವ ಬೆಲೆ ಇದೆ ಎಂದು ಕಿಡಿಕಾರಿದರು. ಸಚಿವ ಬಿ. ಶ್ರೀರಾಮುಲು ಅವರು ಮಾತನಾಡಿ, 75 ವರ್ಷಗಳಲ್ಲಿ ಬಹುತೇಕ ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಜನರಿಗೆ ಯಾವುದೇ ಗ್ಯಾರಂಟಿ ನೀಡಿಲ್ಲ. ಜನರಿಗೆ ಉತ್ತಮ ಬದುಕು ನೀಡುವ ಗ್ಯಾರಂಟಿ ನೀಡಿಲ್ಲ. ಇದ್ಯಾವುದನ್ನು ಮಾಡಲು ಆಗದವರು ಈಗ ಅಧಿಕಾರಕ್ಕಾಗಿ ಇಲ್ಲದ ಗ್ಯಾರಂಟಿ ನೀಡುತ್ತಿದ್ದಾರೆ ಎಂದರೇ ಏನರ್ಥ? ಇಂಥ ಸುಳ್ಳುಗಳನ್ನು ನಂಬಲು ಜನರು ಸಿದ್ಧರಿಲ್ಲ. ಮೋಸ ಹೋಗಿ ಅವರಿಗೆ ಸಾಕಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ಸಿಎಂ ಹುದ್ದೆಗಾಗಿ ಕುಸ್ತಿ ನಡೆದಿದೆ. ಸಿದ್ದು ಮತ್ತು ಡಿಕೆಶಿ ನಡುವೆ ಕಾದಾಟ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಲೇ ಸಿಎಂ ಹೆಸರನ್ನು ಯಾಕೆ ಘೋಷಣೆ ಮಾಡುವುದಿಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಗಾಗಿ ಹರಕೆಯ ಕುರಿ ಮಾಡಲಾಗುತ್ತದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಉತ್ತಮ ಬೆಂಬಲ ಇದೆ. ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರು ಇದ್ದು, ಮುಂದಿನ ಬಾರಿಯ ಚುನಾವಣೆಯ ಐದು ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೇವೆ ಎಂದರು.

ಕರ್ನಾಟಕ ಹೈಟೆಕ್‌ ಇಂಡಿಯಾದ ಎಂಜಿನ್‌: ಪ್ರಧಾನಿ ಮೋದಿ ಬಣ್ಣನೆ

ಸಂಸದ ಸಂಗಣ್ಣ ಕರಡಿ ಮಾತನಾಡಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರ ನಿಷ್ಕಾಳಜಿಯಿಂದ ಜಿಲ್ಲೆಯಲ್ಲಿ ನೀರಾವರಿಯಾಗಿರಲಿಲ್ಲ. ಆದರೆ, ಈಗ ಬಿಜೆಪಿ ಸರ್ಕಾರದಲ್ಲಿ ಆಗುತ್ತಿದೆ. ಕಾಂಗ್ರೆಸ್‌ ಪಕ್ಷ ನೀರಾವರಿಯನ್ನೆ ಮರೆತಿದೆ ಎಂದರು. ಶಾಸಕರಾದ ಬಸವರಾಜ ದಢೇಸ್ಗೂರು, ಪರಣ್ಣ ಮುನವಳ್ಳಿ, ಹೇಮಲತಾ ನಾಯಕ,ಸಿದ್ದೇಶ ಸಿದ್ದರಾಜು, ಅಮರನಾಥ ಪಾಟೀಲ್‌, ಸಿ.ವಿ. ಚಂದ್ರಶೇಖರ, ಮಹಾಂತೇಶ ಪಾಟೀಲ, ಸುನಿಲಕುಮಾರ ಸೇರಿ ಹಲವು ಗಣ್ಯರು ಇದ್ದರು.