ಹಿಂದುಳಿದ ಕಲಬುರಗಿ ಪ್ರಗತಿಗೆ ಖರ್ಗೆ ಕಾಳಜಿ ಯಾಕೆ ತೋರಲಿಲ್ಲ: ತೇಜಸ್ವಿ ಸೂರ್ಯ ಪ್ರಶ್ನೆ
ಮೋದಿ ಕನಸಿನ ಜಲ್ ಜೀವನ್ ಮಿಷನ್‌ನಿಂದ ಹಳ್ಳಿಯ ಮನೆ ಮನೆಗೂ ನಲ್ಲಿ ನೀರು ಸಂಪರ್ಕ ಯಶಸ್ಸು, ನರೇಂದ್ರ ಮೋದಿಜಿಗೆ ಮಾಡಲು ಸಾಧ್ಯವಾಗಿದ್ದನ್ನ ಖರ್ಗೆಯವರಿಗೆ ಯಾಕೆ ಮಾಡಲಾಗಲಿಲ್ಲ? ಎಂದು ತೇಜಸ್ವಿ ಸೂರ್ಯ ಪ್ರಶ್ನೆ
ಕಲಬುರಗಿ(ಮಾ.24): ಕಲಬುರಗಿ ಭಾಗದಿಂದ 9 ಬಾರಿ ವಿಧಾನಸಭೆಗೆ, 1 ಬಾರಿ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರೂ ಕೂಡ ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ಡಾ. ಮಲ್ಲಿಕಾರ್ಜುನ ಖರ್ಗೆ ಕಾಳಜಿ ಏಕೆ ತೋರಿಸಲಿಲ್ಲ? ಎಂದು ಪ್ರಶ್ನಿಸಿರುವ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶ, ಜನತೆಯನ್ನು ಮೂಲಭೂತ ಸೌಕರ್ಯಗಳಿಂದ ವಂಚಿಸಿದ್ದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ಇಲ್ಲಿನ ಜನತೆ ಮೂಲೆಗೆ ತಳ್ಳಿದ್ದಾರೆಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನ ಹಾಗೂ ಆ ಪಕ್ಷದ ಹೈಕಮಾಂಡ್ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ತಿವಿದಿದ್ದಾರೆ.
ಯುವ ಸಮಾವೇಶದ ಹಿನ್ನೆಲೆಯಲ್ಲಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಪ್ರವಾಸದಲ್ಲಿರುವ ತೇಜಸ್ವಿ ಸೂರ್ಯ ಗುರುವಾರ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹಾರ್ ಗ್ರಾಮದ ನಿವಾಸಿಗಳಾದ ಮರಿಯಪ್ಪ ಪೂಜಾರಿ ಮತ್ತು ಲಕ್ಷ್ಮಿ ರವರನ್ನು ಭೇಟಿಯಾದ ಪ್ರಸಂಗವನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಸ್ಥಾನದ ಆಮಿಷ ತೋರಿದ್ರೂ ಬಿಜೆಪಿ ತೊರೆಯಲ್ಲ: ಮಾಲೀಕಯ್ಯ ಗುತ್ತೇದಾರ್
ಮರಿಯಪ್ಪ ಹಾಗೂ ಲಕ್ಷ್ಮೇ ಇವರ ಕುಟುಂಬವು ಕೇವಲ ಎರಡು ತಿಂಗಳುಗಳ ಹಿಂದೆ ಜಲ ಜೀವನ್ ಮಿಷನ್‌ನ ಅಡಿಯಲ್ಲಿ ಮನೆಗೆ ನಲ್ಲಿ ನೀರಿನ ಸಂಪರ್ಕ ಪಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿಯನ್ನು ಶ್ಲಾಘಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 2019 ರ ವರೆಗೆ ಇದ್ದ ನಲ್ಲಿ ನೀರಿನ ಸಂಪರ್ಕ ಕೇವಲ 68,709 (ಶೇ 15ರಷ್ಟು ಮಾತ್ರ). ಆದರೆ, 2019ರ ನಂತರ 1,87,128 (ಶೇ 49ರಷ್ಟು ವೃದ್ಧಿ) ಮನೆಗಳಿಗೆ ನೇರ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಿಜೆಪಿ ಆಡಳಿತದ ಸಂದರ್ಭದ ವ್ಯತ್ಯಾಸ ಇಲ್ಲಿ ಸ್ಪಷ್ಟವಾಗಿ ಗಮನಿಸಬಹುದು, ಮೋದಿ ಆಡಳಿತ ಗ್ರಾಮೀಣರ ಜನಮನ ಗೆದ್ದಿದೆ ಎನ್ನಲು ಇದೇ ಕನ್ನಡಿ ಎಂದು ತೇಜಸ್ವಿ ಸೂರ್ಯ ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.