ಬೆಂಗಳೂರು[ಡಿ.18]: ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಕೂಡ ಹಲವು ರಾಜಕೀಯ ನಾಯಕರು ಪಕ್ಷಾತೀತವಾಗಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಅವರ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಲೇ ಪಕ್ಷ ತೊರೆದಿದ್ದ ದಲಿತ ನಾಯಕ ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌, ಇತ್ತೀಚಿನ ಕಾಂಗ್ರೆಸ್‌ ಸಭೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಕೇಂದ್ರ ಸಚಿವ ವಿ.ಮುನಿಯಪ್ಪ ಅವರು ಕೂಡ ತಮ್ಮ ರಾಜಕೀಯ ಅಸಮಾಧಾನ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಇವರಲ್ಲದೆ, ಬಿಜೆಪಿ ಸಂಸದ ಪಿ.ಸಿ. ಗದ್ದಿಗೌಡರ್‌, ಶಾಸಕ ಅರವಿಂದ ಲಿಂಬಾವಳಿ, ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ವರ್ತೂರು ಪ್ರಕಾಶ್‌, ನಿಡುಮಾಜಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಹಲವು ನಾಯಕರು, ಮಠಾಧೀಶರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜತೆಗೆ ಮೈಸೂರು ಹಾಗೂ ಬಾದಾಮಿ ಭಾಗದ ಹಲವು ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಹಾಗೂ ಅವರ ಅಭಿಮಾನಿಗಳು ಕೂಡ ಆಗಮಿಸಿ ಶುಭ ಹಾರೈಸಿದರು.

ಇಂದಿನಿಂದ 4 ದಿನ ಏಕಾಂತ ವಿಶ್ರಾಂತಿ

ಬುಧವಾರದಿಂದ ನಾಲ್ಕು ದಿನಗಳ ಕಾಲ ಸಿದ್ದರಾಮಯ್ಯ ಅವರು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಗಾಗಿ ಬೆಂಗಳೂರಿನ ಹೊರಗಡೆ ತೆರಳಲಿದ್ದಾರೆ. ಹಾಗಾಗಿ ಈ ನಾಲ್ಕು ದಿನಗಳ ಕಾಲ ಅವರ ಸಾರ್ವಜನಿಕ ಭೇಟಿಗೆ ಅವಕಾಶ ಸಿಗುವುದಿಲ್ಲ.

ವೈದ್ಯರ ಸಲಹೆ ಮೇರೆಗೆ ನಾಲ್ಕು ದಿನಗಳ ಕಾಲ ಸಿದ್ದರಾಮಯ್ಯ ಅವರು ನಗರದ ಹೊರಗಡೆ ವಿಶ್ರಾಂತಿಗೆ ತೆರಳಲಿದ್ದಾರೆ. ಹಾಗಾಗಿ ನಾಲ್ಕು ದಿನಗಳ ಬಳಿಕ ಎಂದಿನಂತೆ ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ. ಅಲ್ಲಿಯವರೆಗೆ ಭೇಟಿಗೆ ಅವಕಾಶ ಇರುವುದಿಲ್ಲ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.