Asianet Suvarna News Asianet Suvarna News

ಸಿದ್ದರಾಮಯ್ಯಗೆ ಕ್ಷೇತ್ರ ಗೊಂದಲ, ರೇವಣ್ಣಗೆ ಪತ್ನಿ ಸ್ಪರ್ಧಿಸುವ ಚಿಂತೆ: ಪ್ರತಾಪ ಸಿಂಹ ಲೇವಡಿ!

ರಮೇಶ ಜಾರಕಿಹೊಳಿ ದಾಡಸಿತನದ ನೇತಾರ ಎಂದು ಕೇಳಿದ್ದೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಅವರು ದಾಡಸಿತನದ ನಾಯಕರು ಹೌದು. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲೂ ಪರಿಣಾಮ ಬೀರುವ ಏಕೈಕ ನಾಯಕ ರಮೇಶ ಜಾರಕಿಹೊಳಿಯವರು ಇಡೀ ಕ್ಷೇತ್ರದ ಜನರ ಪ್ರೀತಿ ಗಳಿಸಿರುವ ರಾಜ್ಯದ ಏಕೈಕ ನಾಯಕರಾಗಿದ್ದಾರೆ: ಪ್ರತಾಪ ಸಿಂಹ 

BJP MP Pratap Simha slams Siddaramaiah and HD Revanna grg
Author
First Published Mar 25, 2023, 9:30 PM IST

ಗೋಕಾಕ(ಮಾ.25): ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಚಿಂತೆ, ರೇವಣ್ಣಗೆ ಪತ್ನಿ ಭವಾನಿ ಸ್ಪರ್ಧಿಸುವ ಕ್ಷೇತ್ರದ ಚಿಂತೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿದರು. ನಗರದಲ್ಲಿ ಶುಕ್ರವಾರ ಬಿಜೆಪಿ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರ ಹಾಗೂ ಹೆಂಡತಿ-ಮಕ್ಕಳ ಬಗ್ಗೆ ಚಿಂತೆ ಮಾಡುವವರಿಂದ ಈ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಅಂತವರಿಗೆ ನಿವೃತ್ತಿ ನೀಡಿ ಬಿಜೆಪಿಯನ್ನು ಅರಳಿಸಬೇಕು. ಜೆಡಿಎಸ್‌ನಲ್ಲಿ ನಡೆದಿರುವ ಕುಟುಂಬ ರಾಜಕಾರಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಚಿಂತೆಯನ್ನು ತೀವ್ರವಾಗಿ ಟೀಕಿಸಿದರು.

ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಯಾರೆಂಬ ಜಗಳ ನಡೆಯುತ್ತಿದೆ. ಸಿದ್ದರಾಮಯ್ಯ ಎಲ್ಲ ಭಾಗ್ಯಗಳನ್ನು ನಾನು ಕೊಟ್ಟೆಎನ್ನುತ್ತಾರೆ. ಆದರೆ, ಅವರಿಗೆ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ. ಅವರಿಗೆ ಸ್ಪರ್ಧಿಸುವ ಕ್ಷೇತ್ರದ ಚಿಂತೆ. ವರುಣಾಕ್ಕೆ ಹೋಗಲು ಅವರ ಶ್ರೀಮತಿಯೇ ಬಿಡುತ್ತಿಲ್ಲ. ಅವರ ಶ್ರೀಮತಿಗೆ ಮಗನ ಚಿಂತೆ. ಹಾಸನದಲ್ಲಿ ಜೆಡಿಎಸ್‌ಗೆ ಕುಟುಂಬದ ಚಿಂತೆ. ಅಲ್ಲಿ ರೇವಣ್ಣಗೆ ಭವಾನಿಯ ಚಿಂತೆ. ಇವೆರಡು ಪಕ್ಷಗಳಿಗೆ ಕ್ಷೇತ್ರ ಚಿಂತೆ. ಹೆಂಡತಿ-ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿರುವುದರಿಂದ ಈ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಈ ನಿಟ್ಟಿನಲ್ಲಿ ನೀವು ಆತ್ಮಾವಲೋಕದ ಮಾಡಿಕೊಳ್ಳಬೇಕಿದೆ ಎಂದರು.

ಮಹೇಶ ಕುಮಟಳ್ಳಿಗೆ ಟಿಕೆಟ್‌ ನೀಡುತ್ತಾರೆಂಬ ಆತ್ಮವಿಶ್ವಾಸ: ರಮೇಶ ಜಾರಕಿಹೊಳಿ

ಮಾತು ಎತ್ತಿದರೆ ಕಾಂಗ್ರೆಸ್‌ ಪಕ್ಷ ಕೇಂದ್ರ ಹಾಗೂ ರಾಜ್ಯಕ್ಕೆ ದಮ್ಮು ದಮ್ಮು ಎನ್ನುತ್ತಾರೆ. ರಾಮ ಜನ್ಮಭೂಮಿ ತೀರ್ಪು ಬಂದರೆ ದೇಶದಲ್ಲಿ ಕಲಹ ಆಗುತ್ತದೆ ಎಂದರು. ಆದರೆ, ಸುಪ್ರೀಂಕೋರ್ಚ್‌ಗೆ ಧೈರ್ಯ ತುಂಬಿದವರು ನಾವು. ಕಾಶ್ಮೀರದಲ್ಲಿ 370 ವಿಧಿಯನ್ನು ಕಿತ್ತು ಹಾಕಿದವರು ನಾವು. ಚೀನಾದಲ್ಲಿ ಯುಪಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರಿಗೆ ಹೆದರಿಕೆ ಇತ್ತು. ಆಗ ಅವರು ಚೀನಾ ಗಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಬೇಡ ಎಂದರು. ಆದರೆ, ನರೇಂದ್ರ ಮೋದಿ ಪ್ರಧಾನಿ ಆದ ನಂತರ ಚೀನಾ ಭಾರತಕ್ಕೆ ಧಮ್ಕಿ ಹಾಕಲು ಬಂದಾಗ ಮೋದಿ ಅವರ ಧೈರ್ಯ ಪರಾಕ್ರಮ ನೋಡಿ ಹಿಂದೆ ಸರಿದದ್ದು ನಮ್ಮ ದಮ್ಮು ಎಂದರು.

ನಮ್ಮ ಮುಖ್ಯಮಂತ್ರಿ ಅವರು ಕಳಸಾ ಬಂಡೂರಿ ಯೋಜನೆಗೆ ಹೋರಾಟ ಮಾಡಿದರು. ಆದರೆ, ಅವರೇ ಆ ಯೋಜನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಭದ್ರಾ ಯೋಜನೆಗೆ .6,000 ಕೋಟಿ ತಂದು ಯೋಜನೆ ಕಾರ್ಯರೂಪಕ್ಕೆ ತಂದೆವು. ಇದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಆಡಳಿತದ ದಮ್ಮು ಎಂದು ಹೇಳಿದರು.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಚುನಾವಣೆಗೆ ಹಲವು ತಿಂಗಳು ಇರುವಂತೆ ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ದುಡಿಯುತ್ತಾರೆ. ಇಲ್ಲಿ ಅಭ್ಯರ್ಥಿ ಯಾರೆಂಬನ್ನು ನೋಡದೆ ಯಾರೇ ಇರಲಿ ಅವರ ಗೆಲುವಿಗಾಗಿ ಶ್ರಮಿಸುತ್ತಾರೆ. ಬಿಜೆಪಿಯ ಈ ನಿಲುವು ನನಗೆ ಬಹಳ ಹಿಡಿಸಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಮೋದಿ ಪ್ರಧಾನಿಯಾಗುವ ಮೊದಲು ಚೀನಾ ಹಾಗೂ ಪಾಕಿಸ್ತಾನಗಳಿಂದ ಬರಿ ಗಲಾಟೆ ನಡೆಯುತ್ತಿತ್ತು. ಉಗ್ರರು ಸಾವಿರಾರು ಕಿಲೋಮೀಟರ್‌ ದೂರದ ಮುಂಬೈಗೆ ಬಂದು ಬಾಂಬ್‌ ಸ್ಫೋಟ ಮಾಡಿದರು. ಮೋದಿ ಅವರನ್ನು ಸಹ ಪಾಕಿಸ್ತಾನ ಪರೀಕ್ಷೆ ಮಾಡಲು ಮುಂದಾಯಿತು. ಆದರೆ, ಮೋದಿ ಅದಕ್ಕೆ ತಕ್ಕ ಶಾಸ್ತಿ ಮಾಡಿದರು. ಮೋದಿ ಅವರ ಆಡಳಿತದಲ್ಲಿ ಗಟ್ಟಿತನವಿದೆ ಎಂದರು.

ವೇದಿಕೆಯ ಮೇಲೆ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ, ರಾಜ್ಯ ಉಪಾಧ್ಯಕ್ಷ ರವಿಕುಮಾರ, ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ, ಜಿಲ್ಲಾ ಅಧ್ಯಕ್ಷ ಬಸವರಾಜ ನೇಸರಗಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಯುವ ಮೋರ್ಚಾ ನಗರ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಗ್ರಾಮೀಣ ಅಧ್ಯಕ್ಷ ಆನಂದ ಅತ್ತುಗೋಳ, ಅರಭಾಂವಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲ್ಹಾರ ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳು ಇದ್ದರು.

ಬೆಳಗಾವಿ: ಯುಗಾದಿ ದಿನದಿಂದಲೇ ಚುನಾವಣಾ ಪ್ರಚಾರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಕ್‌ಸ್ಟಾರ್ಟ್..!

ರಮೇಶ ಜಾರಕಿಹೊಳಿ ದಾಡಸಿತನದ ನೇತಾರ ಎಂದು ಕೇಳಿದ್ದೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಅವರು ದಾಡಸಿತನದ ನಾಯಕರು ಹೌದು. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲೂ ಪರಿಣಾಮ ಬೀರುವ ಏಕೈಕ ನಾಯಕ ರಮೇಶ ಜಾರಕಿಹೊಳಿಯವರು ಇಡೀ ಕ್ಷೇತ್ರದ ಜನರ ಪ್ರೀತಿ ಗಳಿಸಿರುವ ರಾಜ್ಯದ ಏಕೈಕ ನಾಯಕರಾಗಿದ್ದಾರೆ ಅಂತ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. 

ಕಾಂಗ್ರೆಸ್‌ ಬಿಜೆಪಿ ವಿರುದ್ಧ ಬರೀ ಭ್ರಷ್ಟಾಚಾರದ ಅಪಪ್ರಚಾರ ಮಾಡುತ್ತಿದೆ. ಆದರೆ, ದಾಖಲೆಗಳನ್ನು ನೀಡಲು ಮುಂದಾಗುತ್ತಿಲ್ಲ. ಅವರ ಆರೋಪಕ್ಕೆ ಯಾವುದೇ ಮಹತ್ವವಿಲ್ಲ. ಕಾಂಗ್ರೆಸ್‌ ನೀಡುವ ಗ್ಯಾರಂಟಿ ಯೋಜನೆ ಹಲವಾರು ರಾಜ್ಯಗಳಲ್ಲಿ ಈಡೇರಿಸಲಿಲ್ಲ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತಗಳಿಸಲಿದೆ. 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಸಮರ್ಥ ನಾಯಕತ್ವದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲಿದೆ ಅಂತ ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. 

Follow Us:
Download App:
  • android
  • ios