ಬೆಳಗಾವಿ: ಯುಗಾದಿ ದಿನದಿಂದಲೇ ಚುನಾವಣಾ ಪ್ರಚಾರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಕ್‌ಸ್ಟಾರ್ಟ್..!
ಚುನಾವಣೆ ಪ್ರಚಾರ ಆರಂಭಕ್ಕೂ ಮುನ್ನ ಹಿಂಡಲಗಾ ಗಣಪತಿ, ಸುಳೇಭಾವಿ ಮಹಾಲಕ್ಷ್ಮಿ ದೇವಿಗೆ ಪೂಜೆ, ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಚಲಾಯಿಸಿದ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಸತ್ಯಮೇವ ಜಯತೇ ಯಾವತ್ತೂ ಧರ್ಮಕ್ಕೆ ಜಯವಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಮಾ.23): ರಾಜ್ಯದ ಅತ್ಯಂತ ಹೈವೋಲ್ಟೇಜ್ ಕ್ಷೇತ್ರವಾಗಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತವಾಗಿ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಚುನಾವಣೆ ಪ್ರಚಾರ ಆರಂಭಕ್ಕೂ ಮುನ್ನ ನಿನ್ನೆ(ಬುಧವಾರ) ಹಿಂಡಲಗಾ ಗಣಪತಿ ದೇವಸ್ಥಾನ, ಸುಳೇಭಾವಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿದರು. ಪ್ರಚಾರ ವಾಹನವನ್ನು ಖುದ್ದು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಚಲಾಯಿಸಿದರು. ಸುಳೇಭಾವಿ, ಉಚಗಾವಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಇಂದು ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣೆ ಪ್ರಚಾರ ನಡೆಸಿದ್ದಾರೆ. ಉಚಗಾವಿಯ ಪ್ರಮುಖ ಬಡಾವಣೆಗಳಲ್ಲಿ ಸಾವಿರಾರು ಜನರ ಜೊತೆ ಬೃಹತ್ ಪಾದಯಾತ್ರೆ ಮಾಡುವ ಮೂಲಕ ಮತಯಾಚನೆ ಮಾಡಿದರು.
ಮುಂದಿನ 60 ದಿನ ಒಂದು ಯುದ್ಧ ಇದ್ದ ಹಾಗೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್
ಸುಳೇಭಾವಿ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, 'ಶಕ್ತಿದೇವತೆ ಸುಳೇಭಾವಿ ಮಹಾಲಕ್ಷ್ಮಿ ಆಶೀರ್ವಾದ ಪಡೆದು ಪ್ರಚಾರ ಆರಂಭಿಸಿದ್ದೇನೆ. ಶಕ್ತಿಸ್ಥಳ ಸುಳೇಭಾವಿ ಲಕ್ಷ್ಮೀದೇವಿ ಸನ್ನಿಧಿಯಿಂದ ಪ್ರಚಾರ ಆರಂಭಿಸುತ್ತಿದ್ದೇವೆ. ಬಹಳಷ್ಟು ಹುರುಪು, ಶಕ್ತಿ, ಕಾನ್ಫಿಡೆನ್ಸ್‌ನಿಂದ ಮನೆಮಗಳಾಗಿ ಸೇವೆ ಸಲ್ಲಿಸಿದ್ದೇನೆ. ನಿಮ್ಮ ಆಶೀರ್ವಾದವೇ ನನಗೆ ಬಲ, ನನಗೆ ಬೆಂಬಲ. ಯಾವುದೇ ಜಾತಿ, ಭಾಷಾ ರಾಜಕಾರಣ ಮಾಡದೇ ಬಸವಣ್ಣ ಸಂಸ್ಕೃತಿ ಮೈಗೂಡಿಸಿ ರಾಜಕಾರಣ ಮಾಡ್ತಿದೀನಿ. ಐದು ಪರ್ಸೆಂಟ್ ರಾಜಕಾರಣ, 95 ಪರ್ಸೆಂಟ್ ಧರ್ಮ ಕರಣ, ಸಮಾಜ ಕರಣ ಮಾಡಿದ್ದೇನೆ ಅಂತ ತಿಳಿಸಿದ್ದಾರೆ.
ಈ ಚುನಾವಣೆ ನನ್ನ ಕೊನೆಯ ಎಲೆಕ್ಷನ್ ಎಂದ ಬಿಜೆಪಿ ನಾಯಕ..!
ಮುಂದಿನ 60 ದಿನ ಒಂದು ಯುದ್ಧ ಇದ್ದ ಹಾಗೆ. ಸತ್ಯಮೇವ ಜಯತೇ ಯಾವತ್ತೂ ಧರ್ಮಕ್ಕೆ ಜಯವಿದೆ. ಐದು ವರ್ಷ ನಿಸ್ವಾರ್ಥತೆಯಿಂದ ಸೇವೆ ಮಾಡಿದ್ದೇನೆ. ಮುಂದಿನ ಐದು ವರ್ಷ ನಿಮ್ಮ ಆಶೀರ್ವಾದ ಇರಲಿ. ಎಲ್ಲರೂ ಒಗ್ಗಟ್ಟಾಗಿ ಈ ಪರಿಸ್ಥಿತಿ ಎದುರಿಸೋಣ. ವಿಜಯಲಕ್ಷ್ಮಿ ಒಲದೇ ಒಲಿಯುತ್ತಾಳೆ ಎಂಬ ಭರವಸೆ ಇದೆ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಪುತ್ರ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಸೇರಿ ಹಲವರು ಸಾಥ್ ನೀಡಿದರು.