ಸಿದ್ದರಾಮಯ್ಯ ಎದೆಯಲ್ಲಿ ನಡುಕ ಶುರು: ಪ್ರತಾಪ್ ಸಿಂಹ
ಬೆಂಗಳೂರು ಬಿಟ್ಟು ವರುಣಾಗೆ ಏಕೆ ವಿ. ಸೋಮಣ್ಣ ಬಂದಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಅಭ್ಯರ್ಥಿ ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ.
ಚಾಮರಾಜನಗರ(ಏ.20): ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದರೆ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರ ಗುಂಡಿಗೆಯಲ್ಲಿ ಭಯ ಶುರುವಾಗಲಿದೆ. ನಾನು ಗೋಲಿ, ಬುಗುರಿ ಆಡಿ ಬೆಳೆದಿದ್ದು ಸಿದ್ದರಾಮನಹುಂಡಿಯಲ್ಲಿ, ವರುಣಾಗೆ ಯಾಕೆ ವಿ. ಸೋಮಣ್ಣ ಬಂದ್ರು ಎಂದು ಕೇಳುತ್ತಿದ್ದಾರೆ, ಅವರ ಎದೆಯಲ್ಲಿ ನಡುಕ ಶುರುವಾಗಿದೆ, ಅವರಿಗೆ ಭಯ ಬರಿಸಬೇಕಿತ್ತು, ಬರಿಸಿದ್ದಾಗಿದೆ ನಮಗೆ ಖುಷಿ ಇದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದರು.
ಚಾಮರಾಜನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಬೆಂಗಳೂರು ಬಿಟ್ಟು ವರುಣಾಗೆ ಏಕೆ ವಿ. ಸೋಮಣ್ಣ ಬಂದಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಅಭ್ಯರ್ಥಿ ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದರು.
ಮಾದಪ್ಪ ನನ್ನ ಕಳುಹಿಸಿದ್ದಾನೆ, ಬರಿಗೈಲಿ ಕಳುಹಿಸಬೇಡಿ: ಸಚಿವ ಸೋಮಣ್ಣ
ಸಚಿವ ವಿ. ಸೋಮಣ್ಣ ಯಾಕೆ ಬಂದ್ರು, ಅವರು ಸ್ಧಳೀಯರಾ? ಅಂತಾ ಸಿದ್ದರಾಮಯ್ಯ ಕೇಳ್ತಾರೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಏಕೆ ಚಿಕ್ಕಮಗಳೂರಿಗೆ ಬಂದ್ರು, ಅವರೇನು ಅಲ್ಲಿ ಗೋಲಿ-ಬುಗುರಿ ಆಡಿದ್ರಾ, ಇಟಲಿಯಲ್ಲಿ ಹುಟ್ಟಿದ್ದ ಸೋನಿಯಾಗಾಂ ಬಳ್ಳಾರಿಗೆ ಬಂದ್ರು, ಡೆಲ್ಲಿಯಲ್ಲಿ ಹುಟ್ಟಿದ್ದ ರಾಹುಲ್ ಗಾಂಧಿ ವೈನಾಡಿನಲ್ಲಿ ನಿಂತಿದ್ದರು, ತಾವು ಯಾಕೆ ಬಾದಾಮಿಗೆ ಹೋದ್ರಿ, ಕೋಲಾರ ಹುಡುಕ್ತಾ ಇದ್ರಿ ಎಂದು ಲೇವಡಿ ಮಾಡಿದರು.
ಹಳೇ ಮೈಸೂರು ಬಾಗದಲ್ಲಿ ಹೈಕಮಾಂಡ್ ನಮ್ಮ ಅಭಿಪ್ರಾಯ ಕೇಳಿತ್ತು. ವರುಣಾಗೆ ಸಿದ್ದರಾಮಯ್ಯ ವಾಪಾಸ್ ಬರುತ್ತಾರೆ. ಅವರ ಉತ್ಸಾಹ ತಣ್ಣಗಾಗಿಸಲು ಯಾರನ್ನೂ ಕಳಿಸಬೇಕು ಅನ್ನೋ ಚರ್ಚೆಯಿತ್ತು. ಆಗ ನಾವೂ ಹೇಳಿದ್ದು ಸೋಮಣ್ಣ ಹೆಸರು. ಚಾಮರಾಜನಗರ, ವರುಣಾ ಎರಡಕ್ಕೂ ಕೂಡ ಅವರನ್ನು ಕಳಿಸಿದ್ದಾರೆ. 13ರಂದು ನೀವೂ ಗೆಲ್ಲಿಸಿಕೊಡಿ. ನಾವೂ ಸೋಮಣ್ಣರನ್ನು ವರುಣಾದಲ್ಲಿ ಗೆಲ್ಲಿಸ್ತೀವಿ. ನಂತರ ಅವರು ವರುಣಾದಲ್ಲಿರಬೇಕು, ಚಾಮರಾಜನಗರದಲ್ಲಿರಬೇಕು ಅಂತಾ ತೀರ್ಮಾನ ಮಾಡೋಣ ಎಂದು ಮನವಿ ಮಾಡಿದರು.
ಬಸವೇಗೌಡ ಮನೆಗೆ ಹೋಗಿ ಬಾಗಿಲು ಕಾದಿದ್ದೀರಿ !
ನಾನೇ ಹುಲಿಯಾ ಎಂದು ಡಂಗೂರು ಸಾರಿಸಿಕೊಂಡ ಸಿದ್ದರಾಮಯ್ಯಅವರಿಗೆ ಸೋಲಿನ ಭಯ ಕಾಡಲಾಂಭಿದೆ. ಇದೀಗ ಹಳೆ ಸ್ನೇಹಿತರು ನೆನಪಾಗುತ್ತಿದ್ದಾರೆ. ಅಪ್ಪ, ಮಗ ಇಬ್ಬರೂ ಮುಡಾ ಮಾಜಿ ಅಧ್ಯಕ್ಷ ಬಸವೇಗೌಡ ಅವರ ಮನೆ ಬಾಗಿಲು ಕಾದಿದ್ದೀರಿ, ನಿಮಗೆ ಈ ಪರಿಸ್ಥಿತಿ ಬರಬಾರದಿತ್ತು, ಸೋಮಣ್ಣ ಹಳೇ ಮೈಸೂರಿಗೆ ಬಂದ ನಂತರ ವಾತಾವರಣ ಬದಲಾಗಿದೆ, ಚಾಮರಾಜನಗರದಲ್ಲಿ ನಾಲ್ಕಕ್ಕೆ ನಾಲ್ಕು ಗೆಲ್ತೀವಿ, ಮೈಸೂರಿನಲ್ಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ, ಮಾದಪ್ಪ, ಚಾಮುಂಡೇಶ್ವರಿ ಇಬ್ಬರ ಸೇವೆಯನ್ನೂ ಸೋಮಣ್ಣ ಮಾಡಿದ್ದಾರೆ. ಆದ್ದರಿಂದ, ಎರಡೂ ಕಡೆ ಗೆಲ್ಲಿಸಿಕೊಳ್ಳುವ ಕೆಲಸ ಮಾಡೋಣ ಎಂದು ಹೇಳಿದರು.
ಚಾಮರಾಜನಗರ, ವರುಣಾ ಬಿಜೆಪಿ ಅಭ್ಯರ್ಥಿ ಸೋಮಣ್ಣ ಮಾತನಾಡಿ, ಇಂದಿರಾಗಾಂಧಿಗೂ, ರಾಹುಲ್ ಗಾಂಧಿಗೂ ಕರ್ನಾಟಕಕಕ್ಕೂ ಕೇರಳಕ್ಕೂ ಏನು ಸಂಬಂಧ ಅದೇ ರೀತಿ ನಾನು ವರುಣದಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.
ಮಂಗಳವಾರ ಒಂದೇ ದಿನ ವರುಣಾದ 24 ಗ್ರಾಮ ಸುತ್ತಿದ್ದೇನೆ, ಜನರು ಬದಲಾವಣೆ ಬಯಸಿದ್ದಾರೆ. ಅದೇ ರೀತಿ, ಚಾಮರಾಜನಗರದ ಜನರು ಕೂಡ ಈ ಬಾರಿ ನನಗೆ ಆಶೀರ್ವಾದ ಮಾಡಬೇಕು, 3 ಬಾರಿ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದೀರಿ, ನನಗೆ 5 ವರ್ಷ ಅವಕಾಶ ಕೊಡಿ, ರಾಜ್ಯದಲ್ಲೇ ನಂ 1 ತಾಲೂಕು ಮಾಡುವೆ ಎಂದು ಕೋರಿದರು.
ಶಾಸಕ ನಿರಂಜನ್, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಮಾಜಿ ಸದಸ್ಯೆ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಚಾಮರಾಜನಗರ ಉಸ್ತುವಾರಿ ಕೋಟೆ ಎಂ. ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಉಪಾಧ್ಯಕ್ಷ ವೃಷಬೇಂದ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ ಪ್ರತಾಪ್, ಮಂಗಲ ಶಿವಕುಮಾರ್, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ, ರೈತ ಮುಖಂಡ ಅಮ್ಮನಪುರ ಮಲ್ಲೇಶ್, ಡಾ.ಎ.ಆರ್.ಬಾಬು, ಹನುಮಂತಶೆಟ್ಟಿ, ಶಾಂತಮೂರ್ತಿ ಕುಲಗಾಣ, ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಮಂಡಲ ಅಧ್ಯಕ್ಷರಾದ ಬಸವಣ್ಣ, ಜಿಪಂ ಮಾಜಿ ಸದಸ್ಯರಾದ ಆರ್. ಬಾಲರಾಜು, ಬಾಲರಾಜು, ಶಿವಕುಮಾರ್, ಮುಖಂಡರಾದ ವೆಂಕಟರಮಣಸ್ವಾಮಿ ಪಾಪು, ಕೆಲ್ಲಬಂಳ್ಳಿ ಸೋಮನಾಯಕ, ನೂರೊಂದು ಶೆಟ್ಟಿ, ಆರ್. ಸುಂದರ್, ಕೆ. ವೀರಭದ್ರಸ್ವಾಮಿ, ಬಾಲಸುಬ್ರಮಣ್ಯ ಇದ್ದರು.
ಚಾಮರಾಜನಗರದಲ್ಲಿ ನಾಗಶ್ರೀ ಬಂಡಾಯ ಶಮನ, ಸೋಮಣ್ಣ ಹಾದಿ ಸುಗಮ!
ನಗರಸಭಾ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಲು ಹೋಗಿದ್ದಾಗ ಅವರು ನೀವು ಚಾಮರಾಜನಗರ ಕ್ಷೇತ್ರಕ್ಕೆ ಬಂದಿರುವುದು ಯಾವುದೋ ಜನ್ಮದ ಪುಣ್ಯ. ಆಧುನಿಕ ಚಾಮರಾಜನಗರ ಮಾಡಲು ದೇವರು ನಿಮಗೆ ಶಕ್ತಿ ನೀಡಿದ್ದಾನೆ ಅಂತ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ. ಸೊಮಣ್ಣ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.