ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಗದೊಮ್ಮೆ ಪ್ರಧಾನಿ: ನಳಿನ್ ಕಟೀಲ್
ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿರುವುದು ದೇಶದಲ್ಲಿ ನರೇಂದ್ರ ಮೋದಿ ಅಲೆ ಇದೆ. ಅಲ್ಲದೆ ದೇಶದಲ್ಲಿ ಬಿಜೆಪಿ ಪರ ಮತದಾರರ ಒಲವು ಇರುವುದು ಸ್ಪಷ್ಟವಾಗಿದೆ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು (ಡಿ.04): ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿರುವುದು ದೇಶದಲ್ಲಿ ನರೇಂದ್ರ ಮೋದಿ ಅಲೆ ಇದೆ. ಅಲ್ಲದೆ ದೇಶದಲ್ಲಿ ಬಿಜೆಪಿ ಪರ ಮತದಾರರ ಒಲವು ಇರುವುದು ಸ್ಪಷ್ಟವಾಗಿದೆ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ತೆಲಂಗಾಣದಲ್ಲೂ ಪಕ್ಷ ಅದ್ಭುತ ಸಾಧನೆ ತೋರಿಸಿದೆ. ಚುನಾವಣಾ ಪ್ರಚಾರ ವೇಳೆ ಮೋದಿ ಗ್ಯಾರಂಟಿ ನೀಡಿರುವುದು ಸಫಲವಾಗಿದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ ಎಂದರು.
ಕರ್ನಾಟಕದ ಫಲಿತಾಂಶ ನೋಡಿ ಕಾಂಗ್ರೆಸ್ ದೇಶದ ಇತರ ಭಾಗಗಳಲ್ಲೂ ಗ್ಯಾರಂಟಿ ಯೋಜನೆ ಘೋಷಿಸಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಜನರಿಗೆ ಮೋಸ ಮಾಡಿರುವುದು ದೇಶದ ಜನರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಅವರು ಈ ಚುನಾವಣೆಯನ್ನು ಸೆಮಿಫೈನಲ್ ಎಂದಿದ್ದರು. ಸೆಮಿಫೈನಲ್‌ನಲ್ಲಿ ಕಾಂಗ್ರೆಸ್‌ನ್ನು ಜನರು ಹೊರಗಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಗದೊಮ್ಮೆ ಪ್ರಧಾನಿ ಆಗೋದು ಸ್ಪಷ್ಟ. ದೇಶದಲ್ಲಿ ಅಭಿವೃದ್ದಿ, ಶಾಂತಿ ಸುವ್ಯವಸ್ಥೆಗೆ ಮೋದಿ ಅಗತ್ಯ ಎಂದು ಜನತೆಗೆ ಗೊತ್ತಾಗಿದೆ ಎಂದರು.
ಸಿದ್ದು ಸರ್ಕಾರದಿಂದ 6 ತಿಂಗಳಲ್ಲಿ 60 ತಪ್ಪು: ಆರ್.ಅಶೋಕ್ ವಾಗ್ದಾಳಿ
ಪ್ರಾಮಾಣಿಕ ರಾಜಕಾರಣ ಮಾಡಿರುವೆ: ಇಲ್ಲಿ ನಳಿನ್ ಎನ್ನುವುದು ಶೂನ್ಯವಾಗಿದ್ದು, ಸಿದ್ಧಾಂತ, ಕಮಲದ ಚಿಹ್ನೆ ಎನ್ನುವುದೇ ಬಹಳ ಮುಖ್ಯವಾಗಿದೆ. ಪಕ್ಷ ನಿಶ್ಚಯ ಮಾಡುವ ಸಿದ್ಧಾಂತ, ವಹಿಸುವ ಜವಾಬ್ದಾರಿಗೆ ಬದ್ಧನಾಗಿ ಕೆಲಸ ನಿರ್ವಹಿಸುವುದಷ್ಟೇ ನನ್ನ ಕೆಲಸವಾಗಿದೆ. ರಾಷ್ಟ್ರೀಯ ವಿಚಾರಧಾರೆಯಲ್ಲಿ ಬೆಳೆದ ತಾನು ಕೊಟ್ಟಿರುವ ಜವಾಬ್ದಾರಿಯಲ್ಲಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ, ಬದಲಾಗಿ ಆದರ್ಶವಾಗಿ, ಯಾವುದೇ ಚ್ಯುತಿ ಬಾರದಂತೆ, ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ ಎಂದು ಬಿಜೆಪಿ ನಿಕಪಟೂರ್ವ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪುತ್ತೂರಿನ ರೋಟರಿ ಸಭಾಭವನದಲ್ಲಿ ಮಂಗಳವಾರ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಮಂಡಲ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಾಗ ನೀನು ಮಾಸ್ ಲೀಡರ್ ಆಗಲು ಈ ಅವಕಾಶವಲ್ಲ, ಪಕ್ಷವನ್ನು ಮಾಸ್ ಆಗಿಸಬೇಕು ಎಂದು ಪಕ್ಷ ತಿಳಿಸಿತ್ತು. ಅದರಂತೆ ೧೮ ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಪಂಚಾಯಿತಿ ಚುನಾವಣೆಯಿಂದ ಎಲ್ಲಾ ಚುನಾವಣೆಗಳಲ್ಲೂ ಅತಿಹೆಚ್ಚು ಗೆಲುವು ಬಿಜೆಪಿ ಪಕ್ಷದ್ದಾಗಿದೆ. ಕಾರ್ಯಕರ್ತರು ಎಲ್ಲವನ್ನೂ ತುಲನೆ ಮಾಡಬೇಕು ಎಂದು ಹೇಳಿದರು.
ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ: ರೇಣುಕಾಚಾರ್ಯ ಭವಿಷ್ಯ
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಯೇ ಬಿಜೆಪಿಯ ಮೂಲ ಸಿದ್ಧಾಂತ. ಸೋತಿದ್ದೇವೆ ಎಂದು ವಿಚಲಿತರಾಗದೆ ಸಂಘಟನೆ ಬಲಪಡಿಸುವ ಆತ್ಮವಿಶ್ವಾಸ ನಮ್ಮದು ಎಂದರು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷ ರಾಮದಾಸ್ ಬಂಟ್ವಾಳ, ಪುತ್ತೂರು ನಗರ ಮಂಡಲ ಉಪಾಧ್ಯಕ್ಷ ಇಂಧುಶೇಖರ್ ಮತ್ತಿತರರಿದ್ದರು. ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರ್ವಹಿಸಿದರು.