ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಗಾಂಧಿ ಕುಟುಂಬ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಸಂಸದ ಲೆಹರ್‌ ಸಿಂಗ್‌ ಸಿರೋಯಾ ಆಪಾದಿಸಿದ್ದಾರೆ.

ಬೆಂಗಳೂರು (ಆ.23): ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಗಾಂಧಿ ಕುಟುಂಬ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಸಂಸದ ಲೆಹರ್‌ ಸಿಂಗ್‌ ಸಿರೋಯಾ ಆಪಾದಿಸಿದ್ದಾರೆ. ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಖರ್ಗೆ ಅವರಂತಹ ಹಿರಿಯ, ಅನುಭವಿ ನಾಯಕರಿಗೆ ಅನನುಭವಿ ರಾಹುಲ್‌ ಗಾಂಧಿ ಸಲಹೆ ನೀಡುತ್ತಿರುವುದು ಬೇಸರ ತಂದಿದೆ ಎಂದರು. 

ಕಿರಿಯ ಸಂಸದರಾದ ಕೆ.ಸಿ.ವೇಣುಗೋಪಾಲ್‌, ಜೈಮ್‌ ರಮೇಶ್‌ ಮತ್ತು ಸುರ್ಜೇವಾಲಾ ಅವರ ಅಣತಿಯಂತೆ ಖರ್ಗೆಯಂತಹ ಎತ್ತರದ ನಾಯಕ ಕೆಲಸ ಮಾಡುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಖರ್ಗೆ ಅವರು ನಿಜಲಿಂಗಪ್ಪ ಮತ್ತು ದೇವೇಗೌಡರ ಹಾದಿಯಲ್ಲಿ ನಡೆಯಬೇಕು. ಗಾಂಧಿ ಕುಟುಂಬದ ಯಾವುದೇ ಒತ್ತಡಗಳಿಗೆ ಮಣಿಯದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. 

ಇಂದು ಕಾವೇರಿ ಸರ್ವಪಕ್ಷ ಸಭೆ: ತಮಿಳ್ನಾಡು ಕ್ಯಾತೆ ಬಗ್ಗೆ ರಣತಂತ್ರದ ಚರ್ಚೆ

ತಮ್ಮ ಕಾರ್ಯವೈಖರಿಗೆ ಸೂಚನೆಗಳನ್ನು ನೀಡುವುದಷ್ಟೇ ಅಲ್ಲದೇ ನೂತನ ಸಂಸತ್ತಿನ ಉದ್ಘಾಟನೆ ಬಹಿಷ್ಕರಿಸುವಂತಹ ಆದೇಶ ನೀಡುವ ಅವಕಾಶವನ್ನು ರಾಹುಲ್‌ ಗಾಂಧಿ ಅವರಿಗೆ, ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಮಾಡಿಕೊಟ್ಟಿರುವುದು ಬೇಸರ ತಂದಿದೆ. ಒಂದು ಕುಟುಂಬದ ಅಣತಿಯಂತೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೂಡ ಪಾಲ್ಗೊಳ್ಳದೇ ದೂರವುಳಿದು ಈಗ ಖರ್ಗೆ ಸುಳ್ಳು ನೆಪ ಹೇಳುತ್ತಿದ್ದಾರೆ. ಪಕ್ಷ ಅಥವಾ ಕುಟುಂಬಕ್ಕಿಂತ ದೇಶ ಮುಖ್ಯವಲ್ಲವೇ ಎಂದು ಲಹರ್‌ ಸಿಂಗ್‌ ಪ್ರಶ್ನಿಸಿದರು.

ಪ್ರತಿ ಪಕ್ಷಗಳ ಬಿಕ್ಕಟ್ಟಿನ ಸಭೆ ಮದುವೆ ಮನೆಯ ಗಲಾಟೆ ರೀತಿ ಕಾಣಿಸುತ್ತಿದೆ: ಪ್ರತಿಪಕ್ಷಗಳು ನಡೆಸಲಿರುವ ಬಿಕ್ಕಟ್ಟಿನ ಸಭೆಯು ಮದುವೆ ಮನೆಯ ಗಲಾಟೆಯಂತಾಗಿದೆ ಎಂದು ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಸಿರೋಯಾ ವ್ಯಂಗ್ಯವಾಡಿದ್ದಾರೆ. ಪ್ರತಿಪಕ್ಷಗಳ ಬಿಕ್ಕಟ್ಟಿನ ಸಭೆಯ ತಯಾರಿ ಚುರುಕಾಗಿದೆ. ಕೆಲವರು ಸಭೆ ನಡೆಯಲಿರುವ ಸ್ಥಳಕ್ಕೆ ತಲುಪಿದ್ದೇವೆ ಎಂದರೆ, ಇನ್ನೂ ಕೆಲವರು ತಲುಪುತ್ತೇವೆ ಎನ್ನುತ್ತಾರೆ. ಕೆಲವರು ಹೋಗುವುದಿಲ್ಲ ಎನ್ನುತ್ತಾರೆ, ಮತ್ತೆ ಕೆಲವರಿಗೆ ಆಹ್ವಾನ ಸಿಕ್ಕಿಲ್ಲ. ಇನ್ನೂ ಕೆಲವರ ಕುರುಹೇ ಇಲ್ಲ. ನಮ್ಮ ನಾಯಕರೇ ದೊಡ್ಡವರು ಎಂದು ಕೆಲವರು ಹೇಳುತ್ತಾರೆ. 

‘ಅತೃಪ್ತ’ ಸೋಮಶೇಖರ್‌ ಸದ್ಯದಲ್ಲೇ ದಿಲ್ಲಿಗೆ ದೌಡು: ಕಾಂಗ್ರೆಸ್‌ ಪಕ್ಷ ಸೇರ್ಪಡೆ?

ಮತ್ತಷ್ಟು ಮಂದಿಗೆ ತಮ್ಮ ಬೇಡಿಕೆಗಳು ಈಡೇರಬೇಕಿದೆ ಎಂದು ಟ್ವೀಟ್‌ ಮೂಲಕ ಲೇವಡಿ ಮಾಡಿದ್ದಾರೆ. ಕೆಲವರಿಗೆ ಕಾಂಗ್ರೆಸ್‌ ಮೇಲೆಯೇ ಅನುಮಾನ. ಒಟ್ಟಾರೆಯಾಗಿ ಈ ಸಭೆಯು ಮದುವೆ ಮನೆಯಲ್ಲಿ ವಧುವಿಗಿಂತ ವರ ಹೆಚ್ಚು ಸುಂದರನಾಗಿಲ್ಲವೇ ಎಂಬಂತಹ ಗಲಾಟೆಯಂತಾಗಿದೆ. ಈ ಅನುಕೂಲದ ಮದುವೆ ನಡೆಯುವುದೇ ಅಥವಾ ನಡೆದರೂ ದೀರ್ಘಕಾಲ ಮುಂದುವರಿಯುವುದೇ ಎಂದು ನೋಡಬೇಕಿದೆ. ವಧು ಮತ್ತು ವರನಿಗೆ ನನ್ನ ವತಿಯಿಂದ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.