ಮಳೆ ಕೊರತೆಯಿಂದಾಗಿ ತಮಿಳುನಾಡಿನೊಂದಿಗೆ ತಲೆದೋರಿರುವ ಕಾವೇರಿ ಜಲವಿವಾದದ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಬುಧವಾರ ಮಹತ್ವದ ಸರ್ವಪಕ್ಷ ಸಭೆ ಆಯೋಜಿಸಿದೆ.
ಬೆಂಗಳೂರು (ಆ.23): ಮಳೆ ಕೊರತೆಯಿಂದಾಗಿ ತಮಿಳುನಾಡಿನೊಂದಿಗೆ ತಲೆದೋರಿರುವ ಕಾವೇರಿ ಜಲವಿವಾದದ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಬುಧವಾರ ಮಹತ್ವದ ಸರ್ವಪಕ್ಷ ಸಭೆ ಆಯೋಜಿಸಿದೆ. ಈ ಸಭೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೂ ಒಳಗೊಂಡು ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳು, ಮೂರೂ ಪಕ್ಷಗಳ ಪ್ರಮುಖ ಮುಖಂಡರು, ಕಾನೂನು ಸಲಹೆಗಾರರನ್ನು ಆಹ್ವಾನಿಸಲಾಗಿದೆ. ಜಲಸಂಪನ್ಮೂಲ ಇಲಾಖೆಯ ಹೊಣೆ ಹೊತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ವಿವಿಧ ಸಚಿವರುಗಳೂ ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಳೆ ಅಭಾವದಿಂದ ರಾಜ್ಯದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಆದರೂ, ತಮಿಳುನಾಡು ಸರ್ಕಾರ ಕರ್ನಾಟಕ ತನ್ನ ಪಾಲಿನ ಕಾವೇರಿ ನೀರು ಹರಿಸುತ್ತಿಲ್ಲ ಎಂದು ಸುಪ್ರೀಂಕೋರ್ಚ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ಕಾನೂನು ಹೋರಾಟ ಹೇಗಿರಬೇಕೆಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ಸರ್ವಪಕ್ಷ ಸಭೆಯಲ್ಲಿ ನಡೆಯಲಿದ್ದು, ಮೂರೂ ಪಕ್ಷಗಳ ರಾಜಕೀಯ ನಾಯಕರು, ಕಾನೂನು ಸಲಹೆಗಾರರು ನೀಡುವ ಸಲಹೆ, ಅಭಿಪ್ರಾಯಗಳು ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿ ಎದುರಿಸಲು ನೆರವಾಗುವ ಸಾಧ್ಯತೆ ಇದೆ.
ಡಿಎಂಕೆ ಒತ್ತಡಕ್ಕೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್
ಕಾವೇರಿ ಜಲ ವಿವಾದದ ಜೊತೆಗೆ ಕೃಷ್ಣಾ, ಮಹದಾಯಿ ಜಲ ವಿವಾದಗಳು ಮತ್ತು ರಾಜ್ಯದ ಅಣೆಕಟ್ಟೆಗಳು ಭರ್ತಿಯಾಗದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ, ಕುಡಿಯುವ ನೀರು ಪೂರೈಕೆಯಲ್ಲಿ ಆಗಬಹುದಾದ ವ್ಯತ್ಯಯಗಳ ಬಗ್ಗೆಯೂ ಚರ್ಚೆ ನಡೆಸಿ ಸರ್ಕಾರ ಈ ಪರಿಸ್ಥಿತಿ ನಿಭಾಯಿಸಲು ಸರ್ವಪಕ್ಷಗಳ ಮುಖಂಡರಿಂದ ಸಲಹೆ ಪಡೆಯುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಈ ಮಹತ್ವದ ಸಭೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ಎಂ. ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ ಸೇರಿದಂತೆ ಮೂರೂ ಪಕ್ಷಗಳ ಹಲವು ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ರಾಜ್ಯದ ಎಲ್ಲ 28 ಸಂಸದರು ಹಾಗೂ ಸುಪ್ರೀಂ ಕೋರ್ಚ್‌ನಲ್ಲಿ ರಾಜ್ಯದ ಪರ ವಾದ ಮಂಡಿಸಲಿರುವ ಹಿರಿಯ ನ್ಯಾಯವಾದಿಗಳಾದ ಶ್ಯಾಮ್ ದಿವಾನ್, ಎಸ್.ಎಸ್.ಜವಳಿ, ಮೋಹನ್ ವಿ. ಕಾತರಕಿ ಅವರ ಜೊತೆಗೆ ಇನ್ನಿತರೆ ಪ್ರಮುಖ ಕಾನೂನು ಸಲಹೆಗಾರರರನ್ನೂ ಸರ್ಕಾರ ಈ ಸಭೆಗೆ ಆಹ್ವಾನಿಸಿದೆ.
ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಇಂಧನ ಸಚಿವ ಕೆ.ಜೆ.ಜಾಜ್‌ರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಹಾಗೂ ಪ್ರಕಾಶ್ ಹುಕ್ಕೇರಿ ಭಾಗವಹಿಸಲಿದ್ದಾರೆ.
ತಮ್ಮ ಆಡಳಿತಾವಧಿಯಲ್ಲಿ ಇಂತಹ ಜಲ ವಿವಾದಗಳು ಉದ್ಭವಿಸಿದ ಸನ್ನಿವೇಶದಲ್ಲಿ ಕೈಗೊಂಡ ನಿರ್ಧಾರಗಳೇನು, ಕಾನೂನಾತ್ಮಕವಾಗಿ ಹೇಗೆ ಹೋರಾಟ ನಡೆಸಲಾಯಿತು ಎಂಬ ಬಗ್ಗೆ ಸರ್ವ ಪಕ್ಷಗಳ ನಾಯಕರು ಹಾಗೂ ಕಾನೂನು ಸಲಹೆಗಾರರು ನೀಡುವ ಸಲಹೆ, ಸೂಚನೆಗಳು ಸರ್ಕಾರದ ಪಾಲಿಗೆ ಅತ್ಯಂತ ಪ್ರಮುಖವಾಗಲಿವೆ.
ಯಾರಿಗೆ ಆಹ್ವಾನ?: ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ರಾಜ್ಯದ ಎಲ್ಲ 28 ಸಂಸದರು ಹಾಗೂ ಹಿರಿಯ ವಕೀಲರಾದ ಶ್ಯಾಮ್ ದಿವಾನ್, ಎಸ್.ಎಸ್.ಜವಳಿ, ಮೋಹನ್ ಕಾತರಕಿ, ಇನ್ನಿತರ ಪ್ರಮುಖ ಕಾನೂನು ಸಲಹೆಗಾರರು.
‘ನಮ್ನೀರು, ನಮ್ಹಕ್ಕು’ ಎಂದವರು ತ.ನಾಡಿಗೆ ಬಿಟ್ಟಿದ್ದೇಕೆ?: ಎಚ್.ಡಿ.ಕುಮಾರಸ್ವಾಮಿ
ರಾಜಕೀಯ ಕಾರಣಕ್ಕೆ ತಮಿಳುನಾಡು ಜೊತೆ ಸ್ನೇಹ ಇರಬಹುದು. ಆದರೆ ನೀರಿನ ವಿಚಾರದಲ್ಲಿ ನಾವು ಬಗ್ಗುವುದಿಲ್ಲ. ರೈತರ ಹಿತ ಕಾಪಾಡುವಲ್ಲಿ ನಾವು ಹಿಂದಡಿ ಇಡುವುದಿಲ್ಲ. ನೀರಿನ ವಿಷಯದಲ್ಲಿ ರಾಜಕಾರಣ ಬೇಡ.
- ಚಲುವರಾಯಸ್ವಾಮಿ, ಕೃಷಿ ಸಚಿವ
