ಬಿಜೆಪಿ-ಜೆಡಿಎಸ್ ಮೈತ್ರಿ: ಸಮಾನ ಮನಸ್ಕರು ಒಟ್ಟಾಗುವುದು ಒಳ್ಳೆ ಬೆಳವಣಿಗೆ, ಡಿವಿಎಸ್
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ರಾಜ್ಯದ ನಾಯಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚೆಯಾಗಿಲ್ಲ. ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಸಮಾನ ಮನಸ್ಕರು ಒಂದಾಗುವುದು ಉತ್ತಮ ಬೆಳವಣಿಗೆ. ಇದು ಅನಿವಾರ್ಯ ಅಲ್ಲ, ಅವಶ್ಯಕತೆ ಎಂದ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ

ಬೆಂಗಳೂರು(ಸೆ.10): ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಒಂದೇ ಮನಸ್ಥಿತಿಯವರು ಒಟ್ಟಾಗುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ರಾಜ್ಯದ ನಾಯಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚೆಯಾಗಿಲ್ಲ. ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಸಮಾನ ಮನಸ್ಕರು ಒಂದಾಗುವುದು ಉತ್ತಮ ಬೆಳವಣಿಗೆ. ಇದು ಅನಿವಾರ್ಯ ಅಲ್ಲ, ಅವಶ್ಯಕತೆ ಎಂದರು.
2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಹಸಿದು ಬಾಗಿಲ ಬಳಿ ಬಂದಿತ್ತು?
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಆಡಳಿತ ವೈಖರಿ ನೋಡಿದರೆ, ಜನ ಈಗಾಗಲೇ ಭ್ರಮನಿರಸನರಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ನಾವು, ಜೆಡಿಎಸ್ ಸಮಾನ ಪೈಪೋಟಿ ನೀಡಿದ್ದೇವೆ. ಅದು ಕಾಂಗ್ರೆಸ್‌ಗೆ ಅನುಕೂಲವಾಗಿದೆ. ಈಗ ಒಂದೇ ಮನಸ್ಥಿತಿಯವರು ಒಟ್ಟಾಗೋದು ಉತ್ತಮ ಬೆಳವಣಿಗೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಾರಿಗೂ ಅರ್ಥವಾಗದ ಚತುರ ರಾಜಕಾರಣಿ. ನಾವು ಇಲ್ಲಿ ಜೆಡಿಎಸ್ ಜತೆಗೆ ಜಗಳ ಮಾಡುತ್ತಿರುವಾಗ ದೇವೇಗೌಡರು ಪ್ರಧಾನಿ ಮೋದಿ ಭೇಟಿಯಾಗಿ ಸ್ನೇಹದಿಂದ ಇರುತ್ತಿದ್ದರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ದೇವೇಗೌಡರ ರಾಜಕೀಯ ರಣತಂತ್ರ ಯಾರಿಗೂ ಗೊತ್ತಾಗುವುದಿಲ್ಲ. ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ವ್ಯಕ್ತಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಪಕ್ಷ ಬಿಡುವವರ ಸಂಖ್ಯೆ ಕಡಿಮೆ ಇದೆ. ಆದರೆ, ಬೆಂಗಳೂರಿನ ಕೆಲವರಿಗೆ ಸಿದ್ಧಾಂತಕ್ಕಿಂತ ವ್ಯವಹಾರ ಮುಖ್ಯ. ಹೀಗಾಗಿ ಅವರು ಬಿಜೆಪಿ ಬಂದಾಗ ಬಿಜೆಪಿ, ಕಾಂಗ್ರೆಸ್ ಬಂದಾಗ ಕಾಂಗ್ರೆಸ್ ಕಡೆಗೆ ಹೋಗುತ್ತಾರೆ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೆಸರು ಪ್ರಸ್ತಾಪಿಸದೆ ಟಾಂಗ್ ನೀಡಿದರು.