'ಒಂದ್ಕಡೆ ಸಿಡಿ.. ಮತ್ತೊಂದ್ಕಡೆ ಈಶ್ವರಪ್ಪ ಗಲಾಟೆ.. ಇದ್ರಿಂದ ಸಿಎಂ ಕೆಲ್ಸ ಮಾಡೋದು ಕಷ್ಟವಾಗ್ತಿದೆ'
ಒಂದು ಕಡೆ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಮತ್ತೊಂದೆಡೆ ಈಶ್ವರಪ್ಪನವರ ಲೆಟರ್ ವಾರ್.ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ, (ಏ.07): ಒಂದ್ ಕಡೆ ಸಿಡಿ ಗಲಾಟೆ, ಮತ್ತೊಂದು ಕಡೆ ಈಶ್ವರಪ್ಪ ಗಲಾಟೆ ಇದರ ಮಧ್ಯೆ ಸಿಎಂ ಯಡಿಯೂರಪ್ಪ ಕೆಲಸ ಮಾಡೋದು ಕಷ್ಟ ಆಗ್ತಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದೊಳಗಿನ ಸಹೋದ್ಯೋಗಿಗಳ ಹೊಂದಾಣಿಕೆ ಕೊರತೆಯಿಂದ ಸಿಎಂ ಅಭಿವೃದ್ಧಿ ಪರ ಕೆಲಸ ಮಾಡೋದು ಕಷ್ಟವಾಗ್ತಿದೆ ಸ್ಪಷ್ಟಪಡಿಸಿದರು.
ಯಡಿಯೂರಪ್ಪ-ಈಶ್ವರಪ್ಪ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಮತ್ತೊಮ್ಮೆ ಜಗಜ್ಜಾಹೀರು
ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಹೇಳಿಕೆ ಮುಖ್ಯ. ಅವರ ಹೇಳಿಕೆಯನ್ನಾಧರಿಸಿ ತನಿಖೆ ನಡೆಯಬೇಕು. ಸಿಡಿ ಮತ್ತು ಅದರಲ್ಲಿನ ದೃಶ್ಯಗಳನ್ನು ನಾನು ನಂಬೋದಿಲ್ಲ.. ಮಾರ್ಪಿಂಗ್ ನಡೆಯುತ್ತದೆ. ಹಾಗಾಗಿ ಸಂತ್ರಸ್ತೆ ನೀಡೋ ಹೇಳಿಕೆ ಮೇಲೆ ಪ್ರಕರಣದ ಗಂಭೀರತೆ ತಿಳಿಯಲಿದೆ ಎಂದು ಹೇಳಿದರು.
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಪದೇ ಪದೇ ಮುಷ್ಕರ ಮಾಡೋದು ಸರಿ ಇಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡೋದು ಸರಿ ಕಾಣಲ್ಲ. ಕೊರೊನಾ ಸಮಯದಲ್ಲಿ ಮುಷ್ಕರ ನಡೆಸಬಾರದು.. ಸಾರಿಗೆ ಸಚಿವರು ಬಿಗಿಯಾಗಿ ನಡೆದುಕೊಳ್ಳಬೇಕು. ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳು ಈಡೇರಿವೆ. ಸದ್ಯ ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲ. ಸರ್ಕಾರದ ವಿರುದ್ಧ ಸಾರಿಗೆ ನೌಕರರ ಕ್ರಮ ಅಕ್ಷಮ್ಯ ಅಪರಾಧ ಎಂದರು.