ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ 1984ರ ಸಿಖ್ ದಂಗೆಯನ್ನು ನೆನಪಿಸುವ ಬ್ಯಾಗ್ ಗಿಫ್ಟ್ ನೀಡಿದ್ದಾರೆ. ಈ ಘಟನೆ ಸಂಸತ್ತಿನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕಿ ವಯನಾಡ್ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭಾ ಕಲಾಪದ ವೇಳೆ ಪ್ಯಾಲೇಸ್ತಿನ್ ಉಲ್ಲೇಖಿಸುವ ಬ್ಯಾಗ್ ಹಿಡಿದು ಬಂದಿದ್ದು, ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಪಾಕಿಸ್ತಾನದ ಸಸಚಿವರೊಬ್ಬರು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದರೆ, ಇತ್ತ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ವಿಚಾರ ಸುದ್ದಿಯಲ್ಲಿರುವಾಗಲೇ ಈಗ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಅವರು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರಿಗೆ ಬ್ಯಾಗೊಂದನ್ನು ಗಿಫ್ಟ್ ನೀಡಿದ್ದು, ಈ ವಿಚಾರವೀಗ ಬರೀ ಸುದ್ದಿಯಾಗುತ್ತಿದೆ.
ಹೌದು ಕೇವಲ ಬ್ಯಾಗ್ ನೀಡಿದ್ದರೆ ಸುದ್ದಿಯಾಗುತ್ತಿರಲಿಲ್ಲ, ಆದರೆ 1984ರ ಸಿಖ್ ದಂಗೆಯನ್ನು ನೆನಪಿಸುವ ಬ್ಯಾಗನ್ನು ಪ್ರಿಯಾಂಕಾ ಗಾಂಧಿಗೆ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಅವರು ಉಡುಗೊರೆಯಾಗಿ ನೀಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಬ್ಯಾಗಿನ ಬಗ್ಗೆ ಏನು ಅರಿವಿರದ ಪ್ರಿಯಾಂಕಾ ಗಾಂಧಿ, ಅಪರಾಜಿತ ಅವರು ಕೊಟ್ಟ ಗಿಫ್ಟನ್ನು ಹಿಡಿದುಕೊಂಡು ಸೀದಾ ಮುಂದೆ ಹೋಗಿದ್ದಾರೆ. ಈ ಬ್ಯಾಗಿನ ಮೇಲೆ 1984 ಎಂದು ಬರೆಯಲಾಗಿದೆ. ಪ್ರಿಯಾಂಕಾ ಗಾಂಧಿ ಅಜ್ಜಿ ಇಂದಿರಾಗಾಂಧಿ ಸಾವಿನ ನಂತರ ಈ ಸಿಖ್ ದಂಗೆ ನಡೆದಿತ್ತು, ಇದಾರಲ್ಲಿ ಸಿಖ್ ಸಮುದಾಯವನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗಿತ್ತು. ಇಂದಿರಾಗಾಂಧಿ ಹತ್ಯೆಗೆ ಪ್ರತೀಕಾರವಾಗಿ ಈ ಸಿಖ್ ಹತ್ಯಾಕಾಂಡ ನಡೆದಿತ್ತು. ಹಲವು ಕಾಂಗ್ರೆಸ್ ನಾಯಕರು ಈ ದಂಗೆಯಲ್ಲಿ ಭಾಗಿಯಾದ ಆರೋಪವಿತ್ತು.
ಇತ್ತ ಪ್ರಿಯಾಂಕಾ ಗಾಂಧಿಗೆ ಗಿಫ್ಟ್ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪಾರ್ಲಿಮೆಂಟ್‌ನಲ್ಲಿ ಸದಾ ಡ್ರಾಮಾ ಮಾಡುವ ಪ್ರಿಯಾಂಕಾ ಗಾಂಧಿಗೆ ಬಿಜೆಪಿ ಸಂಸದೆ ಅಪರಾಜಿತ ಸಾರಂಗಿ ಸರಿಯಾದ ಉಡುಗೊರೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿಯವರೆ ಈ ಬ್ಯಾಗನ್ನು ಕೂಡ ಹಿಡಿದು ನೀವು ಪೋಸ್ ಕೊಡಿ ಹಾಗೂ 1984ರ ಸಂತ್ರಸ್ತರಿಗೆ ಒಗ್ಗಟ್ಟು ಪ್ರದರ್ಶಿಸಿ ಎಂದು ಪ್ರೀತಿ ಗಾಂಧಿ ಎನ್ನುವವರು ಪ್ರಿಯಾಂಕಾ ಗಾಂಧಿಯವರಿಗೆ ಈ ವೀಡಿಯೋ ಟ್ಯಾಗ್ ಮಾಡಿದ್ದಾರೆ.
ನಿನ್ನೆ ಅಂಬೇಡ್ಕರ್‌ಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನಡೆದ ಬಿರುಸಿನ ಕಾಳಗದ ನಂತರ ಈ ಬೆಳವಣಿಗೆ ನಡೆದಿದೆ. ನಿನ್ನೆ ಸಂಸತ್ ಪ್ರವೇಶ ಸ್ಥಳದಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ಸಂಸದರು ಕಿತ್ತಾಡಿಕೊಂಡಿದ್ದರು. ಈ ಘಟನೆಯಲ್ಲಿ ಇಬ್ಬರು ಬಿಜೆಪಿ ಸಂಸದರಾದ ಪ್ರತಾಪ್ ಸಾರಂಗಿ ಹಾಗೂ ಮುಕೇಶ್ ರಾಜಪುತ್ ಎಂಬುವವರ ತಲೆಗೆ ಗಾಯವಾಗಿತ್ತು. ಸಂಸತ್‌ನ ಮಕರದ್ವಾರದಲ್ಲಿ ರಾಹುಲ್ ಗಾಂಧಿ ಬಿಜೆಪಿ ಸದಸ್ಯರನ್ನು ತಳ್ಳಿದರು ಎಂದು ಎರಡು ಪಾರ್ಟಿಗಳು ದೂರಿದ್ದರು. ಅಲ್ಲದೇ ಎರಡು ಕಡೆಯಿಂದಲೂ ಈ ಬಗ್ಗೆ ದೂರು ದಾಖಲಾಗಿದೆ. ಇದಾದ ನಂತರ ಲೋಕಸಭಾ ಸ್ಪೀಕರ್ ಪಾರ್ಲಿಮೆಂಟ್‌ನ ದ್ವಾರದಲ್ಲಿ ಇಂತಹ ಚಟುವಟಿಕೆಯನ್ನು ನಿಷೇಧಿಸಿದ್ದರು.
ಕಳೆದ ವಾರ ಪ್ರಿಯಾಂಕಾ ಗಾಂಧಿ ಪ್ಯಾಲೇಸ್ತಿನ್ ಸಂತ್ರಸ್ತರು ಹಾಗೂ ಬಾಂಗ್ಲಾದ ಅಲ್ಪಸಂಖ್ಯಾತರ ಪರ ಬ್ಯಾಗ್ ಹಿಡಿದು ಸಂಸತ್‌ಗೆ ಆಗಮಿಸಿದ್ದರು. ಈ ಘಟನೆಯನ್ನು ಖಂಡಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ, ಪ್ರಿಯಾಂಕಾ ಗಾಂಧಿ ರಾಹುಲ್ ಗಾಂಧಿಗಿಂತ ದೊಡ್ಡ ಅನಾಹುತ, ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಎಂದು ಟೀಕಿಸಿದ್ದರು.
