: ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಫೆ.20ರಿಂದ ಮಾ.15ರವರೆಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಸಮಾವೇಶ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಬೆಂಗಳೂರು (ಫೆ.15) : ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಫೆ.20ರಿಂದ ಮಾ.15ರವರೆಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಸಮಾವೇಶ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
20ರಂದು ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶ(BJP Morcha convention) ನಡೆಸುವ ಮೂಲಕ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಮೋರ್ಚಾ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ(BY Vijayendra) ತಿಳಿಸಿದ್ದಾರೆ.
ಮಹಿಳಾ ಸಾಕ್ಷರತೆಯಿಂದ ದೇಶ ಸುಭಿಕ್ಷವಾಗಿರಲು ಸಾಧ್ಯ: ಬಿ.ವೈ.ವಿಜಯೇಂದ್ರ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆ(Karnataka assembly election)ಯ ಹೊಸ್ತಿಲಿನಲ್ಲಿ ವಿರೋಧ ಪಕ್ಷಗಳು ಟೊಳ್ಳು ಭರವಸೆಗಳನ್ನು ನೀಡುವುದರ ಮುಖಾಂತರ ಮತದಾರರ ಮನ ಗೆಲ್ಲುವ ಪ್ರಯತ್ನದಲ್ಲಿ ನಿರತವಾಗಿವೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj bommai) ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರಾಜ್ಯದ ಮನೆ-ಮನೆ, ಮತದಾರರ ಮನ-ಮನಕ್ಕೆ ತಲುಪಿಸುವ ಕೆಲಸ ಯಶಸ್ವಿಗೊಳಿಸಬೇಕು. ಹೀಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿಯಿಂದ ಯುವ, ಮಹಿಳಾ, ರೈತ, ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮೋರ್ಚಾಗಳ ಸಮಾವೇಶ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದರು.
ಹಳೇ ಮೈಸೂರಿಗೆ ಒತ್ತು:
ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಚುನಾವಣೆಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿಯಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದಲ್ಲಿ ಬೃಹತ್ ಸಮಾವೇಶ ಮಾಡಿದ್ದರು. ಹೀಗಾಗಿ, 20ರಂದು ಮಂಡ್ಯ ನಗರದಲ್ಲಿ ಯುವಮೋರ್ಚಾ ಸಮಾವೇಶ ಜರುಗಲಿದೆ. ಪಕ್ಷದ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಶಕ್ತಿ ತುಂಬಲು ಸಮಾವೇಶ:
ಉದಾಹರಣೆಗೆ ತುಮಕೂರು ಜಿಲ್ಲೆಯ ತುಮಕೂರು ಮಹಾನಗರದಲ್ಲಿ ಯುವ ಮೋರ್ಚಾ ಸಮಾವೇಶ ಮಾಡಿದರೆ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಯುವ ಮೋರ್ಚಾ ಕಾರ್ಯಕರ್ತರು ಆ ಸಮಾವೇಶಕ್ಕೆ ಬರಲಿದ್ದಾರೆ. ಗುಬ್ಬಿಯಲ್ಲಿ ಮಹಿಳಾ ಮೋರ್ಚಾ ಸಮಾವೇಶ ಮಾಡಿದರೆ, ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಮಹಿಳಾ ಮೋರ್ಚಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇದೇ ರೀತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೋರ್ಚಾಗಳ ಸಮಾವೇಶ ಮಾಡಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಎಲ್ಲಾ ಮೋರ್ಚಾಗಳಿಗೆ ಶಕ್ತಿ ತುಂಬಿ ಬಲಗೊಳಿಸಲು ಈ ಮೋರ್ಚಾ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಜಯೇಂದ್ರ ಹೇಳಿದರು.
ಸಂಚಾಲಕರ ನೇಮಕ:
ಮೋರ್ಚಾ ಸಮಾವೇಶಗಳ ಸಂಬಂಧ ರಾಜ್ಯದ ಪ್ರತಿ ಜಿಲ್ಲೆಗೆ ಸಂಚಾಲಕರು ಹಾಗೂ ಸಹಸಂಚಾಲಕರನ್ನು ನೇಮಿಸಲಾಗಿದೆ. ಮಂಗಳವಾರ ಸಭೆ ಕರೆದಿದ್ದೇವೆ. ಫೆ.12ರಂದು ರಾಜ್ಯದ ಎಲ್ಲ ಜಿಲ್ಲೆಗಳ ಯುವ ಮೋರ್ಚಾ ಅಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳ ಸಭೆ ಆಗಿದೆ. ಫೆ.16ರಂದು ಪಕ್ಷದ ವಿವಿಧ ಮೋರ್ಚಾಗಳ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಬಿಜೆಪಿಗೆ ಐಸಿಹಾಸಿಕ ಗೆಲುವು ತಂದು ಕೊಡಬೇಕು ಎಂಬುದು ಈ ಮೋರ್ಚಾ ಸಮಾವೇಶಗಳ ಮುಖ್ಯ ಉದ್ದೇಶವಾಗಿದೆ ಎಂದರು.
50 ಲಕ್ಷ ಹೊಸ ಮತದಾರರ ಗುರಿ:
ಈ ಮೋರ್ಚಾಗಳ ಸಮಾವೇಶದಿಂದ ರಾಜ್ಯದ ಎರಡು ಕೋಟಿ ಮತದಾರರನ್ನು ತಲುಪುವ ಗುರಿಯಿದೆ. ಸಮಾವೇಶಗಳ ಸಂದರ್ಭದಲ್ಲಿ ಮಿಸ್ಡ್ ಕಾಲ್ ಮುಖಾಂತರ ಕನಿಷ್ಠ 50 ಲಕ್ಷ ಹೊಸ ಮತದಾರರ ನೋಂದಣಿ ಅಭಿಯಾನ ನಡೆಯಲಿದೆ. ಈ ಮೋರ್ಚಾಗಳ ಸಮಾವೇಶದಲ್ಲಿ ಕೇಂದ್ರದ ನಾಯಕರು ಭಾಗಿಯಾಗಲಿದ್ದಾರೆ. ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಭೂಪೇಂದ್ರ ಯಾದವ್ ಸೇರಿದಂತೆ ಹಲವರು ಕೇಂದ್ರದ ನಾಯಕರನ್ನು ಈ ಸಮಾವೇಶಗಳಿಗೆ ಆಹ್ವಾನಿಸಿದ್ದು, ಶೀಘ್ರದಲ್ಲೇ ಅದು ಅಂತಿಮವಾಗಲಿದೆ ಎಂದರು.
ಬಿಎಸ್‌ವೈಗೆ ಕಲ್ಲೆಸೆದರೆ ಪಕ್ಷಕ್ಕೇ ಹೊಡೆತ: ಬಿ.ವೈ.ವಿಜಯೇಂದ್ರ
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
ಕೇಂದ್ರ- ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮುಟ್ಟಿಸಲು ಮೋರ್ಚಾಗಳ ಸಮಾವೇಶ ಆಯೋಜಿಸಲಾಗುತ್ತಿದೆ. ಈ ಮೂಲಕ 2 ಕೋಟಿ ಮತದಾರರನ್ನು ತಲುಪುವ ಗುರಿ ಇದೆ. ಸಮಾವೇಶಗಳ ಸಂದರ್ಭ ಮಿಸ್ಡ್ ಕಾಲ್ ಮೂಲಕ ಕನಿಷ್ಠ 50 ಲಕ್ಷ ಹೊಸ ಮತದಾರರ ನೋಂದಣಿ ಅಭಿಯಾನ ನಡೆಯಲಿದೆ.
- ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ
