ಸಚಿವರ ಗೈರು: ಸ್ಪೀಕರ್‌ ಅಸಹಾಯಕತೆ ಅಣಕಿಸಿದ ಬಿಜೆಪಿ

ವಿಧಾನಸಭೆ ಕಲಾಪದಲ್ಲಿ ಸಚಿವರ ಅನುಪಸ್ಥಿತಿಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಸ್ಪೀಕರ್‌ ಅಸಹಾಯಕತೆಯನ್ನು ಅಣಕಿಸಿದರು. 

BJP mocked Speaker UT Khader at Assembly Session gvd

ವಿಧಾನಸಭೆ (ಜು.19): ವಿಧಾನಸಭೆ ಕಲಾಪದಲ್ಲಿ ಸಚಿವರ ಅನುಪಸ್ಥಿತಿಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಸ್ಪೀಕರ್‌ ಅಸಹಾಯಕತೆಯನ್ನು ಅಣಕಿಸಿದರು. ಬಜೆಟ್‌ ಮೇಲಿನ ಚರ್ಚೆ ವೇಳೆ ಜೆಡಿಎಸ್‌ನ ಕರೆಮ್ಮ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ತಡೆದ ಬಿಜೆಪಿಯ ಸುರೇಶ್‌ ಕುಮಾರ್‌, ಸಚಿವರು ಕುಳಿತುಕೊಳ್ಳುವ ಮುಂದಿನ ಸಾಲಿನಲ್ಲಿ ಒಬ್ಬರೂ ಇಲ್ಲದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಸಚಿವರೆಲ್ಲರೂ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿದ್ದು, ಕಲಾಪವನ್ನೂ ಅಲ್ಲಿಗೆ ಸ್ಥಳಾಂತರಿಸಿ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಅವರನ್ನು ಕಿಚಾಯಿಸಿದರು.

ಅದಕ್ಕೆ ಖಾದರ್‌ ಅವರು, ನಿಯಮದಲ್ಲಿ ಅದಕ್ಕೆ ಅವಕಾಶವಿಲ್ಲ. ಒಂದು ವೇಳೆ ನಿಯಮದಲ್ಲಿ ಅವಕಾಶವಿದ್ದಿದ್ದರೆ ನೀವು ಹೇಳಿದಂತೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ಗೆ ಕಲಾಪ ಸ್ಥಳಾಂತರಿಸುತ್ತಿದ್ದೆ ಎಂದು ತಿರುಗೇಟು ನೀಡಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸ್ಪೀಕರ್‌ ಅವರ ಅಸಹಾಯಕತೆ ನಮ್ಮಿಂದ ನೋಡಲಾಗುತ್ತಿಲ್ಲ. ಕಲಾಪಕ್ಕೆ ಹಾಜರಾಗುವಂತೆ ಸಚಿವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದರು ಬಿಜೆಪಿಯ ಆರಗ ಜ್ಞಾನೇಂದ್ರ, ಸ್ಪೀಕರ್‌ ಖಾದರ್‌ ಅವರು ಈಗ ಯಾವುದೇ ಪಕ್ಷದ ಸದಸ್ಯರಲ್ಲ. 

ಎನ್‌ಡಿಎ ವಿರುದ್ಧ I.N.D.I.A ಗೆಲ್ಲಲಿದೆ: ಬಿಜೆಪಿಗೆ ಮಮತಾ ಸವಾಲು

ಆದರೂ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರುವುದರ ಬಗ್ಗೆ ಸುದ್ದಿಯಿದೆ. ಇದು ನಿಜವೇ ಎಂದು ಪ್ರಶ್ನಿಸಿದರು. ಅದಕ್ಕುತ್ತರಿದ ಯು.ಟಿ. ಖಾದರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಔತಣ ಕೂಟ ಏರ್ಪಡಿಸಿದ್ದರು. ಅದಕ್ಕಾಗಿ ನಾನು ತೆರಳಿದ್ದೆ. ಅಲ್ಲಿ ಸೋನಿಯಾ ಗಾಂಧಿ ಸೇರಿ ಹಲವು ನಾಯಕರು ಇದ್ದರು. ಆಗ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಮುಂದೆ ಬಿಜೆಪಿಯವರು ಔತಣಕೂಟ ಏರ್ಪಡಿಸಿ ನನ್ನನ್ನು ಕರೆದರೆ ಅಲ್ಲಿಗೂ ಬರುತ್ತೇನೆ. ನಾನು ಸ್ಪೀಕರ್‌ ಆದರೂ ಮನುಷ್ಯನೇ ಅಲ್ಲವೇ ಎಂದು ಮರುಪ್ರಶ್ನೆ ಹಾಕಿದರು.

ಸ್ಪೀಕರ್‌ ಗರಂ: ಸದನ ಸಮಾವೇಶಗೊಂಡರೂ ಸದನಕ್ಕೆ ಕೆಲವು ಸಚಿವರು ಆಗಮಿಸದಿರುವುದಕ್ಕೆ ಗರಂ ಆದ ಸಭಾಧ್ಯಕ್ಷ ಯು.ಟಿ.ಖಾದರ್‌, ಸಕಾಲಕ್ಕೆ ಸರಿಯಾಗಿ ಸದನಕ್ಕೆ ಸಚಿವರು ಆಗಮಿಸಬೇಕು ಎಂದು ಸೂಚಿಸಿದರು. ಸದನ ಆರಂಭಗೊಂಡಾಗ ಸಚಿವರ ಹಾಜರಾತಿ ಇರಲಿಲ್ಲ. ಈ ಬಗ್ಗೆ ಪ್ರತಿಪಕ್ಷಗಳು ಸಭಾಧ್ಯಕ್ಷರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಪ್ರತಿದಿನವೂ ತಡ ಮಾಡುವುದು ಸರಿಯಲ್ಲ. ಸಚಿವರು ಸದನಕ್ಕೆ ಸರಿಯಾದ ಸಮಯಕ್ಕೆ ಬರುವಂತೆ ಗಮನಹರಿಸಬೇಕು ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಗೆ ಸೂಚಿಸಿದರು. ಸಚಿವರು ಸಮಯ ಪಾಲನೆ ಮಾಡಬೇಕು. ಸಮಯ ಸದ್ಬಳಕೆಯಾಗಬೇಕು ಎಂದರು.

ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಆರ್‌.ಅಶೋಕ್‌ ಮಾತನಾಡಿ, ಇಂಧನ ಸಚಿವ ಕೆ.ಜೆ.ಜಾಜ್‌ರ್‍ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಸಚಿವರೂ ಇಲ್ಲ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಸಚಿವರು ಇಲ್ಲದಿದ್ದರೆ ಕಲಾಪ ನಡೆಯುವುದಾದರೂ ಹೇಗೆ? ಸರ್ಕಾರಕ್ಕೆ ಸಡಿಲ ಕೊಡಬೇಡಿ ಎಂದರು. ಸರ್ಕಾರ ವಿಧಾನಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ವಿಧಾನಸಭೆಯ ಘನತೆಗೆ ತಕ್ಕದ್ದಲ್ಲ. ಈ ರೀತಿಯಾದರೆ ಸದನ ಘನತೆ, ಗೌರವ ಏನಾಗುತ್ತದೆ ಎಂದರು. ಅಶೋಕ್‌ ಮಾತನಾಡಿ, ರಮೇಶ್‌ ಕುಮಾರ್‌ ಸಭಾಧ್ಯಕ್ಷರಾಗಿದ್ದ ವೇಳೆ ಸರ್ಕಾರದ ಇಂತಹ ಅಸಡ್ಡೆಗೆ ತಕ್ಕ ಶಾಸ್ತಿ ಮಾಡುತ್ತಿದ್ದರು. 

ಮದ್ಯದ ಬೆಲೆ ಹೆಚ್ಚಳದಿಂದ ಬಡವರಿಗೆ ಸಮಸ್ಯೆ: ಶಾಸಕ ಕೃಷ್ಣಪ್ಪ

ಒಂದು ದಿನ ಸಭಾಧ್ಯಕ್ಷರು ಹೊರನಡೆದರು. ಅವರ ಮನವೊಲಿಸಲು ಆಗ ಎರಡು ಗಂಟೆ ಬೇಕಾಯಿತು ಎಂದು ನೆನಪು ಮಾಡಿಕೊಂಡರು. ಅಷ್ಟರಲ್ಲಿ ಹಲವು ಸಚಿವರು ಸದನಕ್ಕೆ ಆಗಮಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಸವದಿ, ಸದನಕ್ಕೆ ಸರಿಯಾದ ಸಮಯಕ್ಕೆ ಬಂದವರಿಗೆ ಬಹುಮಾನ ನೀಡುತ್ತೀರಾ? ರೋಲೆಕ್ಸ್‌ ವಾಚ್‌ ಕೊಡುತ್ತೀರಾ? ಎಂದು ಸಭಾಧ್ಯಕ್ಷರನ್ನು ಕೆಣಕಿದರು. ಆಗ ಷಡಕ್ಷರಿ, ಮೊದಲ ಬಹುಮಾನ ಚಿನ್ನದ ನಾಣ್ಯ, ಎರಡನೇ ಬಹುಮಾನ ಬೆಳ್ಳಿ ಮತ್ತು ಮೂರನೇ ಬಹುಮಾನ ಕಬ್ಬಿಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಇದನ್ನು ನಾವು ಕೊಡುವುದಿಲ್ಲ, ಷಡಕ್ಷರಿ ಕೊಡುತ್ತಾರೆ ಎಂದು ಹೇಳಿ ಮುಂದಿನ ಕಲಾಪ ನಡೆಸಿದರು.

Latest Videos
Follow Us:
Download App:
  • android
  • ios