ಅಸಮಾಧಾನ ಸ್ಫೋಟ: ಸಿಎಂ ಯಡಿಯೂರಪ್ಪ ವಿರುದ್ಧ ಗುಡುಗಿದ ವಿಶ್ವನಾಥ್
ಸಚಿವ ಸ್ಥಾನಕ್ಕೆ ಕೋರ್ಟ್ ತಣೀರೆರಚಿರುವುದಕ್ಕೆ ಗಂರ ಆಗಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಿಎಂ ಬಿಎಸ್‌ವೈ ಮೇಲೆ ಗರಂ ಆಗಿದ್ದಾರೆ.
ಬೆಂಗಳೂರು, (ಡಿ.01): ಸಚಿವ ಸ್ಥಾನಕ್ಕೆ ಹೈಕೋರ್ಟ್ ಅನರ್ಹಗೊಳಿಸಿರುವ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧವೂ ಕಿಡಿ ಕಾರಿದ್ದಾರೆ.
ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಯಡಿಯೂರಪ್ಪ ಯಾರ ಸಹಕಾರದಿಂದ ಕುರ್ಚಿಯಲ್ಲಿ ಕುಳಿತಿದ್ದಾರೆ? ಯಾರ ಮರ್ಜಿಯಲ್ಲಿದ್ದಾರೆ ಎಂಬುದನ್ನು ಮರೆತಿದ್ದಾರೆ. ಸರ್ಕಾರ ರಚನೆಗೆ ಕಾರಣರಾದ ನಮ್ಮನ್ನು ಮರೆತು, ಯೋಗೇಶ್ವರ್‌ಗೆ ಮಣೆ ಹಾಕುತ್ತಿರುವುದು ಬೇಸರವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ನನ್ನ ಪರ ಅಡ್ವೋಕೇಟ್ ಜನರಲ್ ಸಮರ್ಥವಾಗಿ ವಾದ ಮಂಡಿಸಲಿಲ್ಲ; ಎಚ್. ವಿಶ್ವನಾಥ್ ಬೇಸರ
ನಾವು ಕೆಲವರ ಕಣ್ಣಲ್ಲಿ ಕೆಲವು ರೀತಿ ಕಾಣುತ್ತೇವೆ. ಯಾರ ಮರ್ಜಿಯಲ್ಲಿ ಯಾರು ಖುರ್ಚಿ ಮೇಲೆ ಕುಳಿತಿದ್ದಾರೆ? ಕೆಲವರು ಇದನ್ನೆಲ್ಲಾ ಮರೆತಿದ್ದಾರೆ. ಸಿಎಂ ಸೇರಿದಂತೆ ಇಂದು ಇವರೆಲ್ಲಾ ಯಾರ ಸಹಕಾರದಿಂದ ಕುಳಿತಿದ್ದಾರೆ? ಯಾರ ಮರ್ಜಿಯಲ್ಲಿ ಕುಳಿತಿದ್ದಾರೆ ಎಂಬುದನ್ನ ಮರೆತಿದ್ದಾರೆ. ಹೊಳೆ ದಾಟುವ ತನಕ ಅಂಬಿಗ ಗಂಡ, ಹೊಳೆ ದಾಟಿದ ಮೇಲೆ ಅಂಬಿಗ… ಎನ್ನುವ ಸ್ಥಿತಿ ಇಂದು ಬಂದಿದೆ' ಎಂದು ವಿಶ್ವನಾಥ್ ಹೇಳಿದರು.
ನೂರಕ್ಕೆ ನೂರು ಸಿ.ಪಿ.ಯೋಗೇಶ್ವರ್ ಅವರನ್ನ ಮಂತ್ರಿ ಮಾಡುತ್ತೇನೆ ಎಂದು ಖುದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿಕೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ಹುಣಸೂರಿನಲ್ಲಿ ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಅವರೇ ಕಾರಣ. ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೊದಲೇ ತಾವೇ ಅಭ್ಯರ್ಥಿ ಎಂದು ಸೀರೆ, ಬಟ್ಟೆ ಹಂಚಿ ಪ್ರಚಾರ ನಡೆಸಿದರು. ನಾನು ಅಭ್ಯರ್ಥಿ ಎಂದು ಘೋಷಣೆಯಾದ ಮೇಲೂ ಪಕ್ಷದಿಂದ ಚುನಾವಣೆಗಾಗಿ ಬಂದ ಹಣ ನನಗೆ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.