ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹತಾಶರಾಗಿದ್ದು, ದಿನಕ್ಕೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹೇಗಾದರೂ ಮಾಡಿ ಜನರನ್ನು ಡಿಸ್ಟರ್ಬ್‌ ಮಾಡಿ ಲಾಭ ಪಡೆದುಕೊಳ್ಳಬೇಕು ಎಂದು ನೋಡುತ್ತಿದ್ದು, ಅದು ಆಗದ ಕಾರಣ ಜಾತಿ ಕಾರ್ಡ್‌ ಪ್ಲೇ ಮಾಡಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು. 

ಚನ್ನಪಟ್ಟಣ (ಫೆ.10): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹತಾಶರಾಗಿದ್ದು, ದಿನಕ್ಕೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹೇಗಾದರೂ ಮಾಡಿ ಜನರನ್ನು ಡಿಸ್ಟರ್ಬ್‌ ಮಾಡಿ ಲಾಭ ಪಡೆದುಕೊಳ್ಳಬೇಕು ಎಂದು ನೋಡುತ್ತಿದ್ದು, ಅದು ಆಗದ ಕಾರಣ ಜಾತಿ ಕಾರ್ಡ್‌ ಪ್ಲೇ ಮಾಡಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು. ತಾಲೂಕಿನ ಕನ್ನಿದೊಡ್ಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಕುರಿತು ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣೆ ಮುಗಿದ ನಂತರ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. 

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮುಖ್ಯಮಂತ್ರಿಯಾಗಬಾರದು ಎಂದು ಎಲ್ಲಿದೆ?. ಈಗಾಗಲೇ ಅವರು ಕೇಂದ್ರ ಸಚಿವರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. ಯಾರು ಬೇಕಾದರೂ ಸಿಎಂ ಆಗಬಹುದು ಎಂದರು. ಕುಮಾರಸ್ವಾಮಿ ಯಾವ ಉದ್ದೇಶ ಇಟ್ಟುಕೊಂಡು ಮಾತನಾಡುತ್ತಾರೋ ಗೊತ್ತಿಲ್ಲ. ಜಾತಿ ವಿಚಾರ ಇಟ್ಟುಕೊಂಡು ಮಾತನಾಡುತ್ತಾರೆ. ಜನ ಅಭಿವೃದ್ಧಿಪರ ದೃಷ್ಟಿಕೋನ ಹೊಂದಿರುವ ದೇಶದ ಭದ್ರತೆ ಹಾಗೂ ಒಳ್ಳೆಯ ಸರ್ಕಾರ ಕೊಡುವುವರನ್ನು ನೋಡುತ್ತಾರೆಯೇ ಹೊರತು ಜಾತಿ ರಾಜಕೀಯವನ್ನು ನೋಡುವುದಿಲ್ಲ ಎಂದು ಟಾಂಗ್‌ ನೀಡಿದರು.

ಬ್ರಾಹ್ಮಣರು ಸಿಎಂ ಆಗಬಾರದೇ?: ಎಚ್‌ಡಿಕೆ ವಿರುದ್ಧ ಮುನಿರತ್ನ ಕಿಡಿ

ಕುಮಾರಸ್ವಾಮಿಯವರ ಕುರಿತು ಏನು ಮಾತನಾಡಬೇಕೋ ಗೊತ್ತಾಗುತ್ತಿಲ್ಲ. ಹತಾಶೆಯಿಂದ ಅವರು ದಿನಕ್ಕೊಂದು ಹೇಳಿಕೆ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಮುಂಬರುವ ಚುನವಾಣೆಯಲ್ಲಿ ರಾಜ್ಯದ ಎಲ್ಲ ಎಲ್ಲ ಜಾತಿ, ಧರ್ಮದ ಜನ ಬಿಜೆಪಿ ಕೈ ಹಿಡಿಯಲಿದ್ದಾರೆ. ಮುಂಬರು ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಚುನಾವಣೆ ಗೆದ್ದ ನಂತರ ಮುಖ್ಯಮಂತ್ರಿಯನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ನಮ್ಮ ಪಕ್ಷದ ನಾಯಕರು, ಅವರನ್ನು ಕಡೆಗಣಿಸುವುದಾಗಲಿ, ಮೂಲೆಗುಂಪು ಮಾಡುವ ಪ್ರಶ್ನೆಯಾಗಲಿ ಇಲ್ಲವೇ ಇಲ್ಲ. ಕುಮಾರಸ್ವಾಮಿ ಅವರು ಅವರಿಗೆ ಅನುಕೂಲ ಆಗಬಹುದು ಎಂದು ಏನೇನೋ ಮಾತನಾಡುತ್ತಾರೆ ಎಂದರು.

ಜನರಿಂದ ಅದ್ಭುತ ಸ್ಪಂದನೆ: ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿರುವ ಸ್ವಾಭಿಮಾನ ಸಂಕಲ್ಪ ನಡಿಗೆಗೆ ತಾಲೂಕಿನ ಜನ ಅಭೂತಪೂರ್ವವಾಗಿ ಸ್ಪಂದಿಸುತ್ತಿದ್ದಾರೆ. ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದು ಹೋದ ಮೇಲೆ ಹಳ್ಳಿಗಳ ಕಡೆ ಬಂದಿಲ್ಲ. ಯಾವ ಹಳ್ಳಿಗೆ ಹೋದರು ಕುಮಾರಸ್ವಾಮಿ ಬಗ್ಗೆ ನೆನಪು ಇಲ್ಲ. ಅವರು ಬಂದೇ ಇಲ್ಲ, ಏನು ಕೆಲಸ ಮಾಡೇ ಇಲ್ಲ ಅಂತಾ ಜನ ಬಹಳ ಸಿಟ್ಟಾಗಿದ್ದಾರೆ ಎಂದು ತಿಳಿಸಿದರು. ಇಲ್ಲಿಂದ ಆಯ್ಕೆಯಾದ ನಂತರ ಕುಮಾರಸ್ವಾಮಿ ಕ್ಷೇತ್ರವನ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಜನ ಕುಮಾರಸ್ವಾಮಿ ಅವರನ್ನ ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದಾರೆ. 

ನಾನು ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಸ್ಥಳೀಯ ನಾಯಕ ಬೇಕು ಎಂಬ ಭಾವನೆ ಜನರಲ್ಲಿ ಮೂಡಿದೆ. ಮುಂದಿನ ಚುನಾವಣೆಗೆ ಇದು ಸಹಾಯಕವಾಗಿದ್ದು, ಜನ ಕೈಹಿಡಿಯುವ ವಿಶ್ವಾಸವಿದೆ ಎಂದು ತಿಳಿಸಿದರು. ಈ ವಿಚಾರದಲ್ಲಿ ನಾವೇನೂ ಮಾಡಲು ಆಗುತ್ತದೆ. ಇದನ್ನು ಜನ ಅನುಭಸಬೇಕು ಅಷ್ಟೇ. ಕುಮಾರಸ್ವಾಮಿ ಶಿಷ್ಯಂದಿರು ಕುಮಾರಸ್ವಾಮಿ ರೀತಿಯಲ್ಲಿಯೇ ಮಾತನಾಡುತ್ತಾರೆ. ಕಸ ವಿಲೇವಾರಿ ಆಗದೇ ಇರುವುದಕ್ಕೂ ನನಗೂ ಸಂಬಂಧವಿಲ್ಲ. ಇನ್ನು ಎರಡು ಮೂರು ತಿಂಗಳಲ್ಲಿ ಬದಲಾವಣೆ ಆಗುತ್ತದೆ ಎಂದು ತಿಳಿಸಿದರು.

ಚಿತ್ರದುರ್ಗದ ಮೂರು ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಅಬ್ಬರ: ಬಿಜೆಪಿ ಸರ್ಕಾರದ ವಿರುದ್ದ ಡಿಕೆಶಿ ವಾಗ್ದಾಳಿ

ಶಾಸಕರಿಂದ ಕೆಲಸಕ್ಕೆ ಅಡ್ಡಿ: ಚನ್ನಪಟ್ಟಣದಲ್ಲಿ ಕಸದ ಸಮಸ್ಯೆ ಉಲ್ಬಣಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣದಲ್ಲಿ ಕಸದ ಸಮಸ್ಯೆ ಬಗೆಹರಿಸುವುದು ಕ್ಷೇತ್ರದಿಂದ ಆಯ್ಕೆಯಾದ ಶಾಸಕರ ಕರ್ತವ್ಯ. ಈ ಕುರಿತು ನಾವೇನಾದರೂ ಕೆಲಸ ಮಾಡಲು ಹೋದರೇ ಪ್ರಶ್ನೆ ಮಾಡುತ್ತಾರೆ. ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡಲು ಮುಂದಾದರೆ ಕುಮಾರಸ್ವಾಮಿ ಅಡ್ಡಗಾಲು ಹಾಕುತ್ತಾರೆ ಎಂದು ಯೋಗೇಶ್ವರ್‌ ಕಿಡಿಕಾರಿದರು.