ಡಾಕ್ಟರ್ ಸ್ಪರ್ಧೆಯಿಂದ ಡಿಕೆ ಬ್ರದರ್ಸ್‌ಗೆ ತಲೆನೋವು: ಯೋಗೇಶ್ವರ್
ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಡಿ.ಕೆ.ಸಹೋದರರು ದುಡ್ಡನ್ನು ನೀರಿನಂತೆ ಚೆಲ್ಲುತ್ತಿದ್ದಾರೆ. ಅವರಲ್ಲಿ ದುಡ್ಡಿನ ಬಲ ಮಾತ್ರ ಇದೆ, ಜನಬೆಂಬಲ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್
ಚನ್ನಪಟ್ಟಣ(ಏ.20): ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಸ್ಪರ್ಧೆಯಿಂದ ಅಣ್ಣತಮ್ಮಂದಿರಿಗೆ ಟೆನ್ಸನ್ ಆಗಿದೆ. ನಾವು ಪುಗಸಟ್ಟೆ ಸಾವಿರಾರು ಕೋಟಿ ದುಡ್ಡು ಮಾಡಿಕೊಳ್ಳುತ್ತಿದ್ದೆವು. ಇವರು ಬಂದರಲ್ಲ ಎಂದು ತಲೆನೋವು ಶುರುವಾಗಿದೆ. ಆ ಹಿನ್ನೆಲೆಯಲ್ಲಿ ಅವರು ಎಲ್ಲೆಡೆ ಹೋಗಿ ಬೇರೆ ಪಕ್ಷದ ಮುಖಂಡರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಡಿ.ಕೆ.ಸಹೋದರರ ವಿರುದ್ಧ ಆರೋಪ ಮಾಡಿದರು.
ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಡಿ.ಕೆ.ಸಹೋದರರು ದುಡ್ಡನ್ನು ನೀರಿನಂತೆ ಚೆಲ್ಲುತ್ತಿದ್ದಾರೆ. ಅವರಲ್ಲಿ ದುಡ್ಡಿನ ಬಲ ಮಾತ್ರ ಇದೆ, ಜನಬೆಂಬಲ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಸೋಲಿನ ಭೀತಿಯಿಂದ ಐಟಿ, ಇಡಿ ಅಸ್ತ್ರ ಪ್ರಯೋಗ: ಡಿ.ಕೆ.ಸುರೇಶ್
ಸುಳ್ಳೇರಿಯಲ್ಲಿ ಸುರೇಶ್ ಕ್ವಾರಿ:
ಸುಳ್ಳೇರಿ ಸರ್ವೆ ನಂಬರ್‌ನಲ್ಲಿ ಡಿ.ಕೆ.ಸುರೇಶ್ ೨೦ ವರ್ಷದಿಂದ ಕ್ವಾರಿ ನಡೆಸುತ್ತಿದ್ದಾರೆ. ಇದಕ್ಕೆ ಅವರೇ ಮಾಲೀಕರು. ಇಲ್ಲಿಂದ ಅವರು ಕೋಟ್ಯಂತರ ರು. ತೆಗೆದುಕೊಂಡಿದ್ದಾರೆ. ನಮ್ಮ ಮೆಂಗಳ್ಳಿ ರಸ್ತೆ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸಿಲ್ಲ. ಅವರು ಕನಕಪುರ ಮಾತ್ರವಲ್ಲ ಮೆಂಗಳ್ಳಿ ಅರಣ್ಯ, ಸುಳ್ಳೇರಿ ಸರ್ವೇಯಲ್ಲೂ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರ ಜೀವನವೆಲ್ಲಾ ಲೂಟಿ ಮಾಡುವುದೇ ಆಗಿದೆ. ಡಿ.ಕೆ.ಶಿವಕುಮಾರ್ ಆರ್.ಆರ್ ನಗರದಲ್ಲಿ ನನ್ನ ತಮ್ಮನಿಗೆ ವೋಟು ನೀಡದಿದ್ದಲ್ಲಿ ಕರೆಂಟ್, ನೀರು ಕಟ್ ಮಾಡುತ್ತೇನೆ ಎಂದು ಜನರನ್ನು ಹೆದರಿಸುತ್ತಾರೆ. ಅವರ ದೌರ್ಜನ್ಯ ದಬ್ಬಾಳಿಕೆಗೆ ನಮ್ಮ ತಾಲೂಕಿನ ಜನ ಬಗ್ಗುವುದಿಲ್ಲ. ಸಣ್ಣಪುಟ್ಟ ಆಮಿಷಕ್ಕೆ ಬಲಿಯಾಗಬೇಡಿ. ಒಳ್ಳೆಯ ಕಾಲ ಬಂದಿದೆ. ಈ ಬಾರಿ ತಾಲೂಕಿನಲ್ಲಿ ಮಂಜುನಾಥ್‌ಗೆ ಅತಿ ಹೆಚ್ಚಿನ ಲೀಡ್ ನೀಡಿ ಎಂದು ಮನವಿ ಮಾಡಿದರು.
ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರದಿಂದ ಮೂರು ಬಾರಿ ಸಂಸದರಾಗಿದ್ದಾರೆ. ಇದೀಗ ನಾಲ್ಕನೆ ಬಾರಿ ಅವರು ಚುನಾವಣೆ ಎದುರಿಸುತ್ತಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ.ಮಂಜುನಾಥ್ ಸ್ಪರ್ಧಿಸಿದ್ದಾರೆ. ಇವರಿಬ್ಬರಲ್ಲಿ ಯಾರು ಸೂಕ್ತ ಎಂದು ನೀವೇ ನಿರ್ಧರಿಸಿ. ನಮ್ಮ ನಂಬಿಕೆ ಹುಸಿಯಾಗುವುದಿಲ್ಲ. ಈ ಬಾರಿ ಮಂಜುನಾಥ್ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮಂಜುನಾಥ್ ಸೇವೆ ಗುರುತಿಸಿ ಟಿಕೆಟ್:
ಡಾ. ಮಂಜುನಾಥ್ ನಮ್ಮಂತೆ ಹಳ್ಳಿಗಾಡಿನಲ್ಲೇ ಬೆಳೆದವರು, ಇವರು ಮಾನವೀಯತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೈದ್ಯ ವೃತಿಯಲ್ಲಿ ಜನಸೇವೆ ಮಾಡಿದ್ದಾರೆ. ಬಡವರು, ಜನಸಾಮಾನ್ಯರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಂದು ಆಸ್ಪತ್ರೆಯನ್ನು ವಿಶ್ವಮಟ್ಟದ ದರ್ಜೆಗೆ ಅಭಿವೃದ್ಧಿಗೊಳಿಸಿದ್ದಾರೆ. ಇಡೀ ರಾಜ್ಯದ ದೇಶದ ಜನರಿಗೆ ಅನುಕೂಲ ಕಲ್ಪಿಸುವ ರೀತಿಯಲ್ಲಿ ಆಸ್ಪತ್ರೆಯನ್ನ ಬೆಳೆಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇವರಿಗೆ ಪಕ್ಷ ಟಿಕೆಟ್ ನೀಡಿದೆ ಎಂದರು.
ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಮಾತನಾಡಿ, ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಹಳ್ಳಿಯಲ್ಲಿ ಬೆಳೆದ ನನಗೆ ಚಿಕ್ಕ ವಯಸ್ಸಿನಿಂದಲೇ ಹಳ್ಳಿಯ ಜನರಿಗೆ ಒಳ್ಳೆಯ ವೈದ್ಯಕೀಯ ಸೇವೆ ಸಿಗಬೇಕು. ಶ್ರೀಮಂತರಿಗೆ ಸಿಗುವ ವೈದ್ಯಕೀಯ ಸೇವೆ ಬಡವರಿಗೆ ಸಿಗಬೇಕು ಎಂಬ ಉದ್ದೇಶವಿತ್ತು. ವೈದ್ಯನಾದ ನಂತರ ಅದನ್ನು ಯಶಸ್ವಿಯಾಗಿದ್ದೇನೆ ಎಂದರು.
ನಾನು ಜಯದೇವ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಸುಮಾರು ೭೫ ಲಕ್ಷ ಜನರಿಗೆ ವೈದ್ಯಕೀಯ ಸೇವೆ, ೮ ಲಕ್ಷ ಜನರಿಗೆ ಆಪರೇಷನ್ ಮಾಡಿದ್ದೇನೆ. ಒಬ್ಬನೇ ಒಬ್ಬ ರೋಗಿಯನ್ನು ಹಣವಿಲ್ಲ ಎಂದು ವಾಪಸ್ ಕಳುಹಿಸಿಲ್ಲ. ಚುನಾವಣೆಗೆ ನಿಲ್ಲಬೇಕು ಎಂಬ ಉದ್ದೇಶದಿಂದ ನಾನು ಸೇವೆ ಮಾಡಲಿಲ್ಲ. ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ಇದೀಗ ಮತ ಮೊದಲು ಸೇವೆ ನಿರಂತರ ಎಂಬ ಧ್ಯೇಯೆ ಇಟ್ಟುಕೊಂಡಿದ್ದೇನೆ. ಜನಶಕ್ತಿಯ ಮುಂದೆ ಬೇರೆ ಯಾವುದೇ ಶಕ್ತಿ ಇಲ. ಈ ಬಾರಿಯ ಚುನಾವಣೆಯಲ್ಲಿ ನನಗೂ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿಯವರು ಸೋಲಿನ ಭೀತಿಯಿಂದ ಐಟಿ, ಇಡಿ, ಸಿಬಿಐ ಸಂಸ್ಥೆಗಳಿಂದ ದಾಳಿ ಮಾಡಿಸ್ತಾರೆ; ಸಂಸದ ಡಿ.ಕೆ. ಸುರೇಶ್!
ಇದೇ ವೇಳೆ ತಾಲೂಕಿನ ಇಗ್ಗಲೂರು, ಹಾರೋಕೊಪ್ಪ, ಸೋಗಾಲ, ಅಕ್ಕೂರು, ಬಾಣಗಹಳ್ಳಿ, ವೈ.ಟಿ.ಹಳ್ಳಿ, ಜೆ.ಬ್ಯಾಡರಹಳ್ಳಿ, ಸಿಂಗಾಜಿಪುರ, ಭೂಹಳ್ಳಿ, ಬಿ.ವಿ.ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಬಿರುಸಿನ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ತಾಲೂಕು ಅಧ್ಯಕ್ಷ ತೂಬಿನಕೆರೆ ರಾಜು, ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಪ್ರಸನ್ನ ಪಿ.ಗೌಡ, ಬೋರ್‌ವೆಲ್ ರಾಮಚಂದ್ರು ಇತರರಿದ್ದರು.