ಜೆಡಿಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಸಿಪಿವೈ, ಚನ್ನಪಟ್ಟಣ ಈಗ ಬೂದಿ ಮುಚ್ಚಿದ ಕೆಂಡ!
ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಜೆಡಿಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಸಿಪಿ ಯೋಗೇಶ್ವರ್.ಆಹ್ವಾನ ಪತ್ರಿಕೆಯಲ್ಲಿ ಸಿ.ಪಿವೈ ಕೋರಿಕೆ ಮೇರೆಗೆ ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣ. ಕಾರ್ಯಕ್ರಮಕ್ಕೆ ಗೈರಾದ್ರ ಸಚಿವ ಅಶ್ವಥ್ ನಾರಾಯಣ್.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್,
ರಾಮನಗರ (ಅ.1): ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಈಗಾಗಲೇ ಚುನಾವಣೆಯ ಕಾವು ಹೆಚ್ಚಾದಂತಿದೆ. ಜಿಲ್ಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಯವರನ್ನು ಹಣಿಯಲು ಹಾಲಿ-ಮಾಜಿ ಸಚಿವರು ಪ್ಲಾನ್ ಮಾಡಿದ್ದು, ಚನ್ನಪಟ್ಟಣ ಇಂದು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಎಲ್ಲೆಂದರಲ್ಲಿ ಖಾಕಿ ಸರ್ಪಗಾವಲು, ಕಲ್ಲು ತೂರಾಟ, ಕಾರಿಗೆ ಮುತ್ತಿಗೆ, ರಸ್ತೆ ಮಧ್ಯೆ ಪ್ರತಿಭಟನೆ, ಇಷ್ಟೆಲ್ಲಾ ದೃಶ್ಯಗಳು ಕಂಡುಬಂದಿದ್ದು, ಬೊಂಬೆನಗರಿ ಚನ್ನಪಟ್ಟಣದಲ್ಲಿ, ಇಂದು ಬೆಳಿಗ್ಗೆ ಸುಮಾರು 50 ಕೋಟಿ ಮೌಲ್ಯದ ಸಿಎಂ ವಿಶೇಷ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ಕಾರ್ಯಕ್ರಮವನ್ನು ಚನ್ನಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೊನೆ ಕ್ಷಣದಲ್ಲಿ ಸಚಿವ ಅಶ್ವಥ್ ನಾರಾಯಣ ಕಾರ್ಯಕ್ರಮಕ್ಕೆ ಗೈರಾಗಿದ್ರು, ಇನ್ನೂ ಕ್ಷೇತ್ರದ ಶಾಸಕರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಪ್ರೋಟೊಕಾಲ್ ಉಲ್ಲಂಘನೆ ಮಾಡಿದ್ದಾರೆ ಎಂದು ಕಾರ್ಯಕ್ರಮದಿಂದ ದೂರ ಸರಿದಿದ್ದರು. ಈ ನಡುವೆ ಎಂಎಲ್ಸಿ ಸಿಪಿ ಯೋಗೆಶ್ವರ್ ಗುದ್ದಲಿ ಪೂಜೆ ನೆರವೇರಿಸಿ, ಜೆಡಿಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದರು, ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮಕ್ಕೆ ಸಿಪಿ ಯೋಗೆಶ್ವರ್ ಆಗಮಿಸುತ್ತಿದ್ದಂತೆ, ಜೆಡಿಎಸ್ ನ ಕಾರ್ಯಕರ್ತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ಕೆಲಕಾಲ ಗ್ರಾಮದಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಗಿತ್ತು, ಈ ನಡುವೆ ಜೆಡಿಎಸ್ ಕಾರ್ಯಕರ್ತರನ್ನು ಬಂಧನ ಕೂಡ ಮಾಡಲಾಯಿತು.
ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದಂತೆ, ಸ್ಥಳೀಯ ಶಾಸಕರ ಅನುಪಸ್ಥಿತಿಯಿಂದಾಗಿ ಉಳಿದ ಕಾಮಗಾರಿಗಳ ಗುದ್ದಲಿಪೂಜೆ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದರು. ಈ ನಡುವೆ ಕೂಡ ಬೈರಾಪಟ್ಟಣ ಗ್ರಾಮದಲ್ಲಿ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಲು ಸಿಪಿವೈ ಬಂದಿದ್ರು. ಈ ವೇಳೆ ಕಾರ್ಯಕ್ರಮ ಮುಗಿಸಿ ಹೊರಟಿದ್ದ ಯೋಗೆಶ್ವರ್ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಜೊತೆಗೆ ಕಲ್ಲು ತೂರಾಟ, ಕಾರಿನ ಹಿಂಬದಿಯ ಗ್ಲಾಸ್ ಪುಡಿಪುಡಿಯಾಗಿತ್ತು, ಸಿಪಿವೈ ಕಾರಿಗೆ ಮುತ್ತಿಗೆ ಹಾಕಿ ಜೆಡಿಎಸ್ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಕರ್ತರನ್ನು ಚದುರಿಸಲು ಪೋಲಿಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು. ಇಷ್ಟಾದರೂ ಸುಮ್ಮನಿರದ ಜಿಡಿಎಸ್ ಕಾರ್ಯಕರ್ತರು ರಸ್ತೆ ಮಧ್ಯೆ ಕುಳಿತು ಯೋಗೆಶ್ವರ್ ವಿರುದ್ದ ಘೋಷಣೆ ಕೂಗಿದರು.ತದನಂತರ ಪೋಲಿಸರ ನೆರವಿನಿಂದ ಯೋಗೆಶ್ವರ್ ಕೋಡಂಬಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿಯೂ ಕೂಡ ಗುದ್ದಲಿ ಪೂಜೆ ನಡೆಸಿದರು. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಇಷ್ಟೆಲ್ಲಾ ಆಗ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಸಿಪಿ ಯೋಗೆಶ್ವರ್ ಇಂದಿನ ಎಲ್ಲಾ ಘಟನೆಗಳಿಗೆ ಕುಮಾರಸ್ವಾಮಿಯೇ ನೇರ ಕಾರಣ, ಯಾವುದೇ ರೀತಿಯ ಪ್ಲೊಟೋಕಾಲ್ ಉಲ್ಲಂಘನೆಯಾಗಿಲ್ಲ. ಕುಮಾರಸ್ವಾಮಿ ಓರ್ವ ಬ್ಲಾಕ್ ಮೇಲರ್ ತಾಲ್ಲೂಕಿನ ಅಭಿವೃದ್ಧಿಯ ಚಿಂತನೆ ಕುಮಾರಸ್ವಾಮಿಗೆ ಇಲ್ಲ ಎಂದು ಹೆಚ್ ಡಿಕೆ ವಿರುದ್ದ ಸಿಪಿವೈ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿಗೆ ಯೋಚನೆ ಇಲ್ಲ. ತಾಲ್ಲೂಕಿನ ಜೆಡಿಎಸ್ ನ ಹಿರಿಯ ಮುಖಂಡರು ಪಕ್ಷ ಬಿಡುತ್ತಿದ್ದಾರೆ. ಇದೆಲ್ಲದರ ಹತಾಶೆಯಿಂದ ಕುಮಾರಸ್ವಾಮಿ ಈ ರೀತಿ ಕೆಲಸ ಮಾಡ್ತಿದ್ದಾರೆ.
ರಾಮನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅಗತ್ಯ: ಎಚ್.ಡಿ.ಕುಮಾರಸ್ವಾಮಿ
ಇದೆಲ್ಲವನ್ನೂ ಮರೆಮಾಚಲು ತಾಲ್ಲೂಕಿಗೆ ಗೂಂಡಾ ಸಂಸ್ಕೃತಿಯನ್ನು ತರಲು ಹೊರಟಿದ್ದಾರೆ. ಕುಮಾರಸ್ವಾಮಿಗೆ ಸ್ವಾರ್ಥ ಮನೋಭಾವ ಇದೆ. ಆಗಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರು ಯೋಚನೆ ಮಾಡೊಲ್ಲ, ಕುಮಾರಸ್ವಾಮಿ ರಾಜಕೀಯ ಲಾಭಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಜೆಡಿಎಸ್ ಪಕ್ಷವನ್ನು ಬಿಡಲು ನಿರ್ಧರಿಸಿದ್ದಾರೆ. ಇದೆಲ್ಲವನ್ನೂ ಕುಮಾರಸ್ವಾಮಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಳೆಗೆ ಎಚ್‌ಡಿಕೆ ಕಾರಣರಾದರೆ ಮಳೆಹಾನಿಗೂ ಅವರೇ ಕಾರಣರೆ?: ಸಿ.ಪಿ.ಯೋಗೇಶ್ವರ್
ಒಟ್ಟಾರೆ, ಬೊಂಬೆನಗರಿ ಚನ್ನಪಟ್ಟಣ ಬೂದಿ ಮುಚ್ಚಿದ ಕೆಂಡದಂತಿದ್ದು, ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಈ ಇಬ್ಬರು ನಾಯಕರ ಟಾಕ್ ವಾರ್ ಹೇಗಿರಲಿದೆ. ಯಾರ ಕೈ ಮೇಲಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.