ಬಿಜೆಪಿ ಶಾಸಕರ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ, ಖಾದರ್ ಹೇಳಿಕೆಗೆ ಕಾಮತ್ ತಿರುಗೇಟು
ಬಿಜೆಪಿ ಶಾಸಕರುಗಳ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ, ಆದರೆ ರಾಜಕೀಯಕ್ಕಾಗಿ ಮುಸ್ಲಿಮರನ್ನ ವಿರೋಧಿಸ್ತಾರೆ ಅಂದಿದ್ದ ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಆರೋಪಕ್ಕೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ತಿರುಗೇಟು ನೀಡಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು(ಮಾ.27): ಮಂಗಳೂರಿನ (mangaluru) ಬಿಜೆಪಿ ಶಾಸಕರುಗಳ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ. ಆದರೆ ರಾಜಕೀಯಕ್ಕಾಗಿ ಮುಸ್ಲಿಮರನ್ನ ವಿರೋಧಿಸ್ತಾರೆ ಅಂದಿದ್ದ ವಿಧಾನಸಭೆ ವಿಪಕ್ಷ ನಾಯಕ ಯು.ಟಿ.ಖಾದರ್ (UT Khader) ಆರೋಪಕ್ಕೆ ಮಂಗಳೂರು ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ (Bjp MLA Vedavyas Kamath) ತಿರುಗೇಟು ಕೊಟ್ಟಿದ್ದಾರೆ. ಮಂತ್ರಿಯಾಗಿ ಕೆಲಸ ಮಾಡಿದ ಖಾದರ್ ಗೆ ಸಾಮಾನ್ಯ ಜ್ಞಾನ ಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದದ್ದಾರೆ.
ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಕಾಮತ್, ಸರ್ಕಾರದ ಕೆಲಸ, ಗುತ್ತಿಗೆಗಳನ್ನ ನೀಡಲು ಅದರದ್ದೇ ಆದ ಕಾನೂನುಗಳಿವೆ. ಮಂತ್ರಿಯಾಗಿ ಕೆಲಸ ಮಾಡಿದ ಖಾದರ್ ಗೆ ಸಾಮಾನ್ಯ ಜ್ಞಾನ ಬೇಕು. ಮಂಗಳೂರು ಪಾಲಿಕೆಯಲ್ಲಿ 5 ಲಕ್ಷ ಮೇಲ್ಪಟ್ಟ ಎಲ್ಲಾ ಕಾಮಗಾರಿ ಇ-ಟೆಂಡರ್ ಮುಖಾಂತರ ಆಗುತ್ತದೆ. ಮೂಡಾ ಮತ್ತು ಪಿಡಬ್ಲ್ಯುಡಿ ಎಲ್ಲಾ ಕಾಮಗಾರಿ ಇ-ಟೆಂಡರ್ ಆಗುತ್ತದೆ. ಇದರಲ್ಲಿ ಅರ್ಹತೆ ಇದ್ದವರಿಗೆ ಈ ಕಾಮಗಾರಿ ಗುತ್ತಿಗೆ ಅವರಿಗೆ ಸಿಗುತ್ತದೆ ಎಂದು ಖಾದರ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಕೋಟೆನಾಡಿನಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಹೊತ್ತಿ ಉರಿದ ಜೋಗಿಮಟ್ಟಿ ಗಿರಿಧಾಮ
ಇನ್ನು ತನ್ನ ಆರೇಳು ವರ್ಷಗಳ ಹಿಂದಿನ ಫೋಟೋ ವೈರಲ್ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಕಾಮತ್, ನಾನು ಆರೇಳು ವರ್ಷದ ಹಿಂದೆ ವಿದೇಶ ಪ್ರವಾಸ ಮಾಡಿದಾಗ ನನಗೆ ಶುಭ ಕೋರಿ ಮುಸ್ಲಿಂ ಉದ್ಯಮಿ ಸ್ನೇಹಿತರು ಜಾಹೀರಾತು ಹಾಕಿದ್ದರು. ದುಬೈ ದೇಶದ ಎಲ್ಲಾ ಕಂಪೆನಿ ಯಾರದ್ದು? ಅಲ್ಲಿಗೆ ಉದ್ಯಮಕ್ಕೆ ನಾನು ಹೋಗಬೇಕು. ಒಬ್ಬ ರಫ್ತುಧಾರನಾಗಿ ಅಲ್ಲಿಗೆ ಹೋಗುವಾಗ ಅಲ್ಲಿನ ವ್ಯವಸ್ಥೆ ನನಗೆ ಅಗತ್ಯ. 40-50 ದೇಶಗಳಿಗೆ ರಫ್ತು ಮತ್ತು ಆಮದು ಮಾಡುವಾಗ ಅಲ್ಲಿನ ವ್ಯವಹಾರಿಕ ವ್ಯವಸ್ಥೆಯನ್ನು ನಾನು ಅನುಸರಿಸಬೇಕು. ನಾನು ಯಾರ ಜೊತೆ ವ್ಯವಹಾರ ಮಾಡಬೇಕು ಅಂತ ಗೊತ್ತಿದೆ ಎಂದಿದ್ದಾರೆ.
ಜೊತೆಗೆ ಮುಸ್ಲಿಂ ಸಮಾಜ ಎರಡ್ಮೂರು ಘಟನೆಯಲ್ಲಿ ಮಾಡಿದ್ದಕ್ಕೆ ಕ್ರಿಯೆಗೆ ಪ್ರತಿಕ್ರಿಯೆ ಆಗ್ತಿದೆ. ಇನ್ನು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ವಿಚಾರದಲ್ಲಿ ಕಾನೂನು ಇದೆ. ಧಾರ್ಮಿಕ ದತ್ತಿ ಕಾನೂನಿನ ಪ್ರಕಾರವೇ ಕಾನೂನು ಮಾಡಲಾಗಿದೆ. ಸರ್ಕಾರ ಮಾಡಿದ ಕಾನೂನನ್ನ ಪಾಲಿಸಲೇ ಬೇಕು. ಹಿಂದೂ ಸಮಾಜ ಈಗ ಮಾಡ್ತಿರೋ ಕೆಲಸದಲ್ಲಿ ಏನು ತಪ್ಪಿದೆ? ಯಾಕೆ ತಪ್ಪಿದೆ? ಎಂದು ಪ್ರಶ್ನಿಸಿದ್ದಾರೆ.
ಮದರಸಗಳಲ್ಲಿ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ
ಕೇಸರಿ ನಾಯಕರಿಗಿದ್ಯಾ ಹಿಂದೂಯೇತರರ ಜೊತೆ ಬ್ಯುಸಿನೆಸ್ ನಂಟು?: ಈ ನಡುವೆ ಮುಸ್ಲಿಮರ ಜೊತೆ ವ್ಯವಹಾರ ಬೇಡ ಎನ್ನುವ ಕೇಸರಿ ನಾಯಕರಿಗೆ ಹಿಂದೂಯೇತರರ ಜೊತೆ ಬ್ಯುಸಿನೆಸ್ ನಂಟು ಇದೆಯಾ ಎಂಬ ಆರೋಪವೂ ಕೇಳಿ ಬಂದಿದೆ. ಮಂಗಳೂರಿನ ಬಿಜೆಪಿ ಮತ್ತು ಹಿಂದೂ ನಾಯಕರಿಗೆ ಮುಸ್ಲಿಮರ ಜೊತೆ ಬ್ಯುಸಿನೆಸ್ ನೆಟ್ ವರ್ಕ್ ಇರೋ ಬಗ್ಗೆ ಕರಾವಳಿಯಲ್ಲಿ ಬಿಸಿಬಿಸಿ ಚರ್ಚೆ ನಡೀತಾ ಇದೆ. ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ವಿರುದ್ದವೂ ಆರೋಪ ಕೇಳಿ ಬಂದಿದ್ದು, ಕಾಮತ್ ಶಾಸಕರಾಗೋ ಮೊದಲಿನ ಫೋಟೋ ವೈರಲ್ ಮಾಡಿ ಚರ್ಚೆ ಮಾಡಲಾಗ್ತಿದೆ.
ಕಾಮತ್ ಬ್ಯುಸಿನೆಸ್ ಪ್ರವಾಸ ಹಿನ್ನೆಲೆ ವಿದೇಶಕ್ಕೆ ತೆರಳಿದ್ದ ವೇಳೆ ಮುಸ್ಲಿಮ್ ಉದ್ಯಮಿಗಳು ಶುಭ ಕೋರಿದ್ದರು. ಏಳು ವರ್ಷದ ಹಿಂದಿನ ಫೋಟೋ ವೈರಲ್ ಮಾಡಿ ಮುಸ್ಲಿಂ ಉದ್ಯಮಿಗಳ ನಂಟಿನ ಬಗ್ಗೆ ಪ್ರಶ್ನೆ ಮಾಡಲಾಗ್ತಿದೆ. ಜೊತೆಗೆ ಬಿಜೆಪಿ ಶಾಸಕರು ಮುಸ್ಲಿಮರಿಗೆ ಸರ್ಕಾರದ ಕಾಮಗಾರಿ ಗುತ್ತಿಗೆ ಕೊಡ್ತಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸಂಜೀವ ಮಠಂದೂರು, ಹರೀಶ್ ಪೂಂಜಾ ವಿರುದ್ದ ಆರೋಪ ಮಾಡಲಾಗಿದೆ. ಸದನದಲ್ಲೂ ಈ ಬಗ್ಗೆ ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಪ್ರಸ್ತಾಪಿಸಿ ಮಾತನಾಡಿದ್ದರು. ಸದ್ಯ ಈ ಬಗ್ಗೆ ಕರಾವಳಿ ಭಾಗದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
"