ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಆಗಿಲ್ಲ? ಗಂಭೀರ ಕಾರಣ ಕೊಟ್ಟ ರೂಪಾಲಿ ನಾಯ್ಕ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಕೂಗು ಜೋರಾಗಿದೆ. ಇದರ ಮಧ್ಯೆ ಇದುವರೆಗೆ ಜಿಲ್ಲೆಯಲ್ಲಿ ಏಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಿಲ್ಲ ಎನ್ನುವ ಪ್ರಶ್ನೆಗಳಿಗೆ ಬಿಜೆಪಿ ಶಾಸಕಿ ಗಂಭೀರ ಕಾರಣಕೊಟ್ಟಿದ್ದಾರೆ.
ಕಾರವಾರ, (ಜುಲೈ.24): ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಕೂಗು ಭಾರೀ ಸದ್ದು ಮಾಡುತ್ತಿದೆ. ಪ್ರತಿಭಟನೆ, ಹಾಗೂ ಟ್ವಿಟ್ಟರ್ ಅಭಿಯಾನಗಳು ಸಹ ಚುರುಕು ಪಡೆದುಕೊಂಡಿದೆ.
ಮೊನ್ನೇ ನಡೆದ ಅಂಬ್ಯುಲೆನ್ಸ್ ದುರಂತದಿಂದ ಆಕ್ರೋಶಗೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಜನರ ಆಕ್ರೋಶದ ಕಟ್ಟೆ ಹೊಡೆದಿದೆ. 2019ರಿಂದಲೂ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಬೇಡಿಕೆ ಇದೆ. ಆದ್ರೆ, ಇದುವರೆಗೂ ಅದು ಸಾಧ್ಯವಾಗಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಆಸ್ಪತ್ರೆ ಆಗುತ್ತಿಲ್ಲ ಎಂದು ಜನರು ಜನಪ್ರತಿನಿಧಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೂಗು: ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಗಂಭೀರ ಕಾರಣ ಕೊಟ್ಟ ಶಾಸಕಿ
ಇನ್ನು ಇದುವರೆಗೂ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಮಾಡಲು ಆಗುತ್ತಿಲ್ಲ ಎನ್ನುವ ಪ್ರಶ್ನೆಗಳನ್ನ ಹಾಕುತ್ತಿದ್ದಾರೆ. ಇದಕ್ಕೆ ಬಿಜೆಪಿ ಶಾಸಕರಿ ರೂಪಾಲಿ ನಾಯ್ಕ ಕಾರಣವಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ವೈದ್ಯರು ಇಲ್ಲಿ ಕೆಲಸ ಮಾಡಲು ಬರಲು ಒಪ್ಪುವುದಿಲ್ಲ. ವೈದ್ಯರ ಕೊರತೆಯಿಂದ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮಾಡಲು ಸಾಧ್ಯವಾಗಿಲ್ಲ ಎಂದು ಕಾರಣ ಕೊಟ್ಟರು.
ನಾನು ಹಿಂದಿನಿಂದಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಯಡಿಯೂರಪ್ಪನವರ ಸರ್ಕಾರ ಇದ್ದಾಗಲೇ ಆಸ್ಪತ್ರೆ ಮಂಜೂರು ಆಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ತಡವಾಯಿತು ಎಂದು ಮತ್ತೊಂದು ಕಾರಣ ನೀಡಿದರು.
ಮುಂದಿನ ತಿಂಗಳು 1 ಅಥವಾ 2ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಬಗ್ಗೆ ಘೋಷಣೆ ಮಾಡುತ್ತಾರೆ. ಜನರ ಹೋರಾಟ, ಬೇಡಿಕೆ ಹಿನ್ನೆಲೆ ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಸಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಆರೋಗ್ಯ ಸಚಿವರ ಭರವಸೆ
ಆಸ್ಪತ್ರೆ ನಿರ್ಮಾಣದ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತುಕತೆ ನಡೆಸಿದ್ದು, ಉತ್ತರ ಕನ್ನಡ ಜಿಲ್ಲೆಗೆ ಕನಿಷ್ಠ ಎರಡು ಮಲ್ಟಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸಾರ್ವಜನಿಕರು ನಡೆಸುತ್ತಿರುವ ಆಂದೋಲನವನ್ನು ಸರ್ಕಾರವಾಗಿ ಪರಿಗಣಿಸಿದೆ.
ಆಸ್ಪತ್ರೆ ನಿರ್ಮಾಣದ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತುಕತೆ ನಡೆಸಿದರು. 'ಉತ್ತರ ಕನ್ನಡ ಜನರ ಅಗತ್ಯಗಳ ಬಗ್ಗೆ ಮಾಹಿತಿಯಿದೆ. ಈ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ, ಇದನ್ನು ವಿಶೇಷ ಮತ್ತು ಅತ್ಯಗತ್ಯ ಪ್ರಕರಣವೆಂದು ಪರಿಗಣಿಸಿ ಆಸ್ಪತ್ರೆ ನಿರ್ಮಿಸಲು ಪ್ರಯತ್ನ ನಡೆಸುತ್ತೇನೆ' ಎಂದು ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ.
ಜೋರಾದ ಕೂಗು, ಚುರುಕುಗೊಂಡ ಪ್ರತಿಭಟನೆ
ಹೌದು...ಜುಲೈ 20 ರಂದು ಸಂಭವಿಸಿದ ಆಂಬುಲೆನ್ಸ್ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎನ್ನುವ ಕೂಗು ಪ್ರಬಲವಾಗಿದೆ. ಅಲ್ಲದೇ ಯುವಕ ಆಕ್ರೋಶದ ಕಟ್ಟೆ ಹೊಡೆದಿದ್ದು, ಹೋರಾಟ ಸಂಘಟಿತ ರೂಪ ಪಡೆದುಕೊಂಡಿದೆ.
ಸುಸಜ್ಜಿತ ಆಸ್ಪತ್ರೆಗಾಗಿ ಜನರು ನಡೆಸುತ್ತಿರುವ ಹಕ್ಕೊತ್ತಾಯದ ಭಾಗವಾಗಿ ಅಗಸ್ಟ್ 1ರಿಂದ ರಕ್ತದಲ್ಲಿ ಪತ್ರ ಬರೆಯುವ ಅಭಿಯಾನವನ್ನು ಉತ್ತರ ಕನ್ನಡ ಜಿಲ್ಲೆಯ ಜನರು ಆರಂಭಿಸಲಿದ್ದಾರೆ. ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು ಅಭಿಯಾನ ಶುರುಮಾಡಲು ಕಾರವಾರ ನಿವಾಸಿಗಳೂ ಸೇರಿದಂತೆ ಜಿಲ್ಲೆಯ ಜನರು ಮುಂದಾಗಿದ್ದಾರೆ. ಭೌಗೋಳಿಕವಾಗಿ ಬಹು ವಿಸ್ತಾರವಾಗಿರುವ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಇದೇ ಕಾರಣಕ್ಕೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ದೂರದ ಉಡುಪಿ, ಮಂಗಳೂರು, ಹುಬ್ಬಳ್ಳಿ, ಗೋವಾಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಇದೀಗ ಆಸ್ಪತ್ರೆಗಾಗಿ ಯುವಕರು ಸಿಡಿದೆದ್ದಿದ್ದಾರೆ.