‘ವೀ ನೀಡ್‌ ಎಮರ್ಜೆನ್ಸಿ ಹಾಸ್ಪಿಟಲ್‌ ಇನ್‌ ಉತ್ತರ ಕನ್ನಡ’ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌

ಕಾರವಾರ(ಜು.23): ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ/ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಹಕ್ಕೊತ್ತಾಯ ಮತ್ತೆ ಮುನ್ನೆಲೆಗೆ ಬಂದಿದೆ. ಬುಧವಾರ ಉತ್ತರ ಕನ್ನಡ- ಉಡುಪಿ ಗಡಿಯಾದ ಶಿರೂರು ಟೋಲ್‌ನಲ್ಲಿ ನಡೆದ ಭೀಕರ ಆ್ಯಂಬುಲೆನ್ಸ್‌ ಅಪಘಾತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಘಟನೆ ನಡೆದ ಬಳಿಕ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲದೆ ಇರುವುದಕ್ಕೆ ಅಮಾಯಕರ ಜೀವ ಹಾನಿಯಾಗಿದೆ ಎಂಬ ಭಿತ್ತಿಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.

ಈ ಜಿಲ್ಲೆ ಭೌಗೋಳಿಕವಾಗಿ ಅತಿ ವಿಸ್ತಾರವಾಗಿದ್ದು, ಇಲ್ಲಿ ಅಪಘಾತ ಸಂಭವಿಸಿದಾಗ ತುರ್ತಾಗಿ ಚಿಕಿತ್ಸೆ ನೀಡುವ ಟ್ರಾಮಾ ಸೆಂಟರ್‌, ಅತ್ಯಾಧುನಿಕ ಪರೀಕ್ಷಾ ಸಲಕರಣೆಗಳು, ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿರುವ ಮಲ್ಟಿ/ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿದ್ದರೂ ತುರ್ತು ಹಾಗೂ ಗಂಭೀರ ಪ್ರಕರಣಗಳಿಗೆ ಚಿಕಿತ್ಸೆ ಇಲ್ಲಿ ಸಾಧ್ಯವಾಗುತ್ತಿಲ್ಲ.

ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ; ಕೂಡಲೇ ನಂದಿಸಿದ ಸಿಬ್ಬಂದಿ

ಕರಾವಳಿ ಭಾಗದ ಭಟ್ಕಳ, ಹೊನ್ನಾವರ, ಕುಮಟಾದಲ್ಲಿ ಯಾವುದೇ ಅಪಘಾತ ಅಥವಾ ತುರ್ತು ಇನ್ನಿತರ ಸಂದರ್ಭಗಳಲ್ಲಿ ಉಡುಪಿ, ಮಂಗಳೂರು ಆಸ್ಪತ್ರೆಗಳನ್ನು ಅವಲಂಬಿತವಾಗಿದ್ದರೆ, ಅಂಕೋಲಾ, ಕಾರವಾರದ ಜನತೆ ಪಕ್ಕದ ಗೋವಾ ರಾಜ್ಯದ ಆಸ್ಪತ್ರೆಗೆ ತೆರಳುತ್ತಾರೆ. ಘಟ್ಟದ ಮೇಲಿನವರು ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಆಸ್ಪತ್ರೆಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವಲಂಬಿತರಾಗಿದ್ದಾರೆ.

ಇತ್ತೀಚಿನ ಐದಾರು ವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡು, ಆಸ್ಪತ್ರೆಗೆ ಸೇರುವ ಮುನ್ನ ಮೃತಪಟ್ಟವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಅರೆಬರೆ ಹಾಗೂ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಹೆಚ್ಚಿನ ಅಪಘಾತಕ್ಕಾಗಿ ಕಾರಣವಾಗಿದೆ. ಹೀಗಾಗಿ 2019ರಲ್ಲಿ ಜಿಲ್ಲೆಯ ಕೆಲ ಯುವಕರು ಸೇರಿಕೊಂಡು ‘ವೀ ನೀಡ್‌ ಎಮರ್ಜೆನ್ಸಿ ಹಾಸ್ಪಿಟಲ್‌ ಇನ್‌ ಉತ್ತರ ಕನ್ನಡ’ ಹ್ಯಾಷ್‌ಟ್ಯಾಗ್‌ನಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಮಾಡಿದ್ದರು.

ಒಂದೇ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ ಪ್ರೇಮಿಗಳು: ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು ದುರಂತ ಅಂತ್ಯ

ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗಮನಕ್ಕೆ ಬಂದು, ಶೀಘ್ರವೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಬದಲಾದ ಸಂದರ್ಭದಲ್ಲಿ ಸರ್ಕಾರ ಉರುಳಿತ್ತು. ಮುಖ್ಯಮಂತ್ರಿ ಬದಲಾದರೂ ಈ ಭರವಸೆ ಭರವಸೆಯಾಗಿಯೇ ಉಳಿದಿದ್ದು, ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಕೂಡ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಶಿರೂರಿನಲ್ಲಿ ಬುಧವಾರ ನಡೆದ ಅಪಘಾತಕ್ಕೆ ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲದಿರುವುದೇ ಕಾರಣ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದು, ಬಹುಶಃ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಆ್ಯಂಬುಲೆನ್ಸ್‌ ಏರಿ ಹೊರ ಜಿಲ್ಲೆಗೆ ತೆರಳುವ ಅನಿವಾರ್ಯತೆ ಇರುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.