Breaking: ವಿಪಕ್ಷ ನಾಯಕರಾಗಿ ಆರ್.ಅಶೋಕ್ ಆಯ್ಕೆ
ಪದ್ಮನಾಭನಗರದ ಶಾಸಕ ಆರ್ ಅಶೋಕ್ ಅವರನ್ನು ಬಿಜೆಪಿಯ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅಶೋಕ್ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಬೆಂಗಳೂರು (ನ.17): ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪ್ರಭಾವಿ ಒಕ್ಕಲಿಗ ನಾಯಕನಾಗಿರುವ ಪದ್ಮನಾಭನಗರದ ಶಾಸಕ ಆರ್.ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರಾಗಿ ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅಶೋಕ್ ಹೆಸರನ್ನು ಸೂಚಿಸಿದರೆ, ಶಾಸಕ ಸುನಿಲ್ ಕುಮಾರ್ ಇದಕ್ಕೆ ಅನುಮೋದನೆ ನೀಡಿದರು. ಕೊನೆಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಹೆಸರಿಗೆ ಅನುಮೋದನೆ ನೀಡಿದರು.ವಿಪಕ್ಷ ನಾಯಕರಾಗಿ ಆರ್ ಅಶೋಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅಶೋಕ್ ಅವರ ಆಯ್ಕೆ ಮೂಲಕ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತಾಗಿದೆ. 'ಕಾಂಗ್ರೆಸ್ ದುರಾಡಳಿತ ಜನರ ಮುಂದೆ ಇಡಲಿದ್ದೇವೆ. ಮುಂಬರುವ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸೋಣ. ಒಂದು ಚುನಾವಣೆಯ ಸೋಲಿನಿಂದ ನಾವು ಹೆದರಿ ಕೂರೋದಿಲ್ಲ. ಹೈಕಮಾಂಡ್ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ' ಎಂದು ಶಾಸಕಾಂಗ ಸಭೆಯಲ್ಲಿ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಆರ್.ಅಶೋಕ್ ಮಾತನಾಡಿದ್ದಾರೆ. ಅದರೊಂದಿಗೆ ಚುನಾವಣೆ ಮುಗಿದು ಆರು ತಿಂಗಳಾದ ಬಳಿಕ ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಇಬ್ಬರನ್ನೂ ಆಯ್ಕೆ ಮಾಡಿದೆ.
ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್ ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಬಿಜೆಪಿಯ ಹಿರಿಯ ನಾಯಕರಾಗಿರುವ ಆರ್ ಅಶೋಕ್, ಉಪಮುಖ್ಯಮಂತ್ರಿಯಾಗಿ ವಿವಿಧ ಇಲಾಖೆಯಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ರಾಜ್ಯಾಧ್ಯಕ್ಷರ ಬಳಿಕ ವಿಪಕ್ಷ ನಾಯಕನ ಆಯ್ಕೆ ಸರ್ಕಸ್ ! ಇಂದೇ ಬಿಜೆಪಿ ಶಾಸಕಾಂಗ ಸಭೆ ? ಯಾರಿಗೆ ಲಕ್ ?
ಅಶೋಕ್ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ ಮಾತನಾಡಿದ ಯಲಹಂಕ ಶಾಸಕ ವಿಶ್ವನಾಥ್, ಆರ್.ಅಶೋಕ್ ನೇಮಕ ಹಿನ್ನಲೆಯಲ್ಲಿ ಕೆಲವರಿಗೆ ಅಸಮಾಧಾನ ಇರಲಿದೆ. ಹೆಣ್ಣು ನೋಡೋಕೆ ಹೋದಾಗ ಅಪ್ಪಗೆ ಇಷ್ಟ ಆಗಲ್ಲ. ಅತ್ತೆಗೆ ಇಷ್ಟ ಆಗಲ್ಲ.ಹುಡುಗನಿಗೆ ಇಷ್ಟ ಆಗಲ್ಲ.ಮದುವೆಯಾದ ಮೇಲೆ ಎಲ್ಲಾ ಸರಿ ಹೋಗುತ್ತೆ' ಎಂದು ಹೇಳಿದ್ದಾರೆ.ಗೋಪಾಲಯ್ಯ ಮಾತನಾಡಿ, 'ಕೇಂದ್ರದಿಂದ ಬಂದ ವರಿಷ್ಠರು ಸರ್ವಾನು ಮತದಿಂದ ಆರ್.ಅಶೋಕ್ ಆಯ್ಕೆ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದು, ಪಕ್ಷದ ನಿರ್ಧಾರವನ್ನು ಒಪ್ಪಿದ್ದೇವೆ. ಯಾರಿಗೂ ಅಸಮಾಧಾನ ಇಲ್ಲ' ಎಂದರು. ಇನ್ನು ಅಶೋಕ್ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ ಐಟಿಸಿ ಗಾರ್ಡೇನಿಯಾದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಇನ್ನು ಸಭೆ ಮುಗಿಸಿ ಹೊರಬಂದ ನಿರ್ಮಲಾ ಸೀತಾರಾಮನ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
BJP ವಿಪಕ್ಷ ನಾಯಕ ಆಯ್ಕೆ ನಾಳೆ?: ಸಂಜೆ 6ಕ್ಕೆ ಶಾಸಕಾಂಗ ಸಭೆ, ಘೋಷಣೆ ಆಗುತ್ತಾ?
ಮಾಧ್ಯಮದ ಜೊತೆ ಮಾತನಾಡಿದ ಅಶೋಕ್, 'ನನ್ನ ಆಯ್ಕೆಮಾಡಿದ ವರಿಷ್ಠರಿಗೆ ಧನ್ಯವಾದಗಳು. ಪ್ರೀತಿಯಿಂದ ಪ್ರತಿಪಕ್ಷ ನಾಯಕ ನಾಗಿ ಆಯ್ಕೆ ಮಾಡಿದ್ದಾರೆ. ನಾನು ಸಾಮಾನ್ಯ ಕಾರ್ಯಕರ್ತ. 1975ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದ್ದೆ. 20 ವರ್ಷ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. 7 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಆಯ್ಕೆ ಮಾಡಿದ ಪದ್ಮನಾಭ ನಗರ, ಉತ್ತರಹಳ್ಳಿ ಜನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಮತ್ತು ವಿಜಯೇಂದ್ರ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಮತ್ತೇ ಬಿಜೆಪಿ ಅಧಿಕಾರಕ್ಕೆ ತರುವ ಟಾಸ್ಕ್ ನಮಗೆ ವರಿಷ್ಠರು ನೀಡಿದ್ದಾರೆ. ಇಡೀ ರಾಜ್ಯ ಸುತ್ತಾಡುತ್ತೇವೆ. ಸದನದ ಒಳಗಡೆ ನಮಗೆ ನಿಜವಾದ ಚಾಲೆಂಜ್ ಇರುತ್ತದೆ' ಎಂದು ಹೇಳಿದರು.
'ಕಾಂಗ್ರೆಸ್ ಸರ್ಕಾರ ಬಂದ ದಿನದಿಂದಲೇ ವರ್ಗಾವಣೆ ಅಂಗಡಿ ತೆರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಮಗ ವರ್ಗಾವಣೆ ಧಂದೆಯಲ್ಲಿ ತೊಡಗಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮೀಯ 2 ಸಾವಿರ ಕೊಡುತ್ತಿಲ್ಲ. ಸರ್ಕಾರ ಪಾಪರ್ ಆಗಿದೆ. ಸಿಎಂ ಹುದ್ದೆ ಹಂಚಿಕೆ ಆಗಿದೆ. ಮಾತೆತ್ತಿದರೆ ಕೇಂದ್ರ ಸರ್ಕಾರ ಅಂತಿದ್ದಾರೆ. ಸರ್ಕಾರ ಇದುವರೆಗೂ ನಯಾಪೈಸೆ ರೈತರಿಗೆ ಬಿಡುಗಡೆ ಮಾಡಿಲ್ಲ. ನಮ್ಮ ಅಧಿಕಾರ ಇದ್ದಾಗ ಖಜಾನೆಯಿಂದಲೇ ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಪ್ರಶ್ನೆ ಮಾಡಿದವರನ್ನು ಸರ್ಕಾರ ದ್ವೇಷ ಮಾಡುತ್ತಿದೆ. ಈ ದ್ವೇಷಕ್ಕೆ ಮದ್ದಿಲ್ಲ. ಒಂದೇ ಒಂದು ನೀರಾವರಿ ಯೋಜನೆ ಬಂದಿಲ್ಲ. ಈ ಸರ್ಕಾರ ಬದುಕಿದೆಯಾ ಸತ್ತಿದೆಯಾ ಅನ್ನೋದೇ ಗೊತ್ತಾಗುತ್ತಿಲ್ಲ. ನಮ್ಮ 66 ಶಾಸಕರು ಕೂಡ ನಾಯಕರು. ಜೆಡಿಎಸ್ ಸಹ ನಮ್ಮ ಎನ್ ಡಿಎ ಪಾಲುದಾರರು. ನಾವು ಸಮರ್ಥವಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಕಿತ್ತೊಗೆಯುವುದು ನಮ್ಮ ಮೊದಲ ಆದ್ಯತೆ. ನಮ್ಮ ಸರ್ಕಾರದ ಮೇಲೆ 40% ಕಮೀಷನ್ ಆರೋಪ ಮಾಡಿದರು. ಆದರೆ, ಒಂದೇ ಒಂದು ದಾಖಲೆ ಕೊಡಲಿಲ್ಲ' ಎಂದು ಸರ್ಕಾರವನ್ನು ಟೀಕಿಸಿದ್ದಾರೆ.