Asianet Suvarna News Asianet Suvarna News

ಸ್ವಪಕ್ಷದ ಶಾಸಕರಿಂದಲೇ ಬಿಬಿಎಂಪಿ ವಾರ್ಡ್‌ ವಿಂಗಡಣೆಗೆ ತಕರಾರು: ಹೈಕೋರ್ಟ್‌ ಮೆಟ್ಟಿಲೇರಿದ ಸತೀಶ್‌ ರೆಡ್ಡಿ

ಬೊಮ್ಮನಹಳ್ಳಿಯ 7500 ಮತದಾರರು ಪಕ್ಕದ ಕ್ಷೇತ್ರಕ್ಕೆ ವರ್ಗ: ಸತೀಶ್‌ ಆಕ್ಷೇಪ

BJP MLA M Satish Reddy Objected to BBMP Ward Allocation in Bengaluru grg
Author
First Published Sep 11, 2022, 4:30 AM IST

ಬೆಂಗಳೂರು(ಸೆ.11):  ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು ವಾರ್ಡ್‌ ಮರು ವಿಂಗಡಣೆಯನ್ನು ಪ್ರಶ್ನಿಸಿ ಆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಸತೀಶ್‌ ರೆಡ್ಡಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಾರ್ಡ್‌ ಪ್ರದೇಶಗಳು ಆ ಕ್ಷೇತ್ರದೊಳಗೆ ಮಾತ್ರ ವಿಭಜನೆಯಾಗಬೇಕು. ಯಾವುದೇ ವಾರ್ಡ್‌ನ ಪ್ರದೇಶಗಳು ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಕೆಯಾಗಬಾರದು ಎಂಬುದಾಗಿ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 7 ಹೇಳುತ್ತದೆ.

ಆದರೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು ವಾರ್ಡ್‌ನ ಅಕ್ಷಯ ಗಾರ್ಡನ್‌, ಸತ್ಯಸಾಯಿ, ಶಿರಡಿ ಸಾಯಿ ನಗರ, ವಿಐಪಿ ಲೇಔಟ್‌ ಮತ್ತಿತರೆ ಪ್ರದೇಶಗಳು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದೊಂದಿಗೆ ಹಂಚಿಕೆ ಮಾಡಲಾಗಿದೆ. ಆದ್ದರಿಂದ ವಾರ್ಡ್‌ ಮರು ವಿಂಗಡಣೆಯ ಅಧಿಸೂಚನೆ ರದ್ದುಪಡಿಸಬೇಕು. ಹುಳಿಮಾವು ವಾರ್ಡ್‌ನ ಮರು ವಿಂಗಡಣೆಯನ್ನು ಪುನರ್‌ ಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಶಾಸಕರು ಕೋರಿದ್ದಾರೆ.

ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ; ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಎಂದ ಕಟೀಲ್!

ಬೊಮ್ಮನಹಳ್ಳಿಯ 7500 ಮತದಾರರು ಪಕ್ಕದ ಕ್ಷೇತ್ರಕ್ಕೆ ವರ್ಗ: ಸತೀಶ್‌ ಆಕ್ಷೇಪ

ಬೊಮ್ಮನಹಳ್ಳಿ: ‘ನನ್ನ ಮತ ಕ್ಷೇತ್ರದ 7500 ಮತದಾರರ ಹೆಸರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ದೂರು ನೀಡಿದರೂ ಬಿಬಿಎಂಪಿ ನಿರ್ಲಕ್ಷಿಸಿದ್ದರಿಂದ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇನೆ ಎಂದು ಶಾಸಕ ಎಂ.ಸತೀಶ್‌ ರೆಡ್ಡಿ ಹೇಳಿದ್ದಾರೆ.

ಎಚ್‌.ಎಸ್‌.ಆರ್‌. ಬಡಾವಣೆಯ ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರಕೆರೆ ವಾರ್ಡ್‌ನ ಅಕ್ಷಯ್‌ ಗಾರ್ಡನ್‌, ಶಿರಡಿ ಸಾಯಿ ನಗರ, ಹಿರಾನಂದಿನಿ ಅಪಾರ್ಚ್‌ಮೆಂಟ್‌ ಮುಂತಾದ ಪ್ರದೇಶದಲ್ಲಿ ನನ್ನ ಮತ ಕ್ಷೇತ್ರದ 7,500 ಮತದಾರರುಗಳಿದ್ದು, ಈ ಮತದಾರರ ಹೆಸರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿದೆ ಎಂದರು.

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ: ಇಲ್ಲಿದೆ ಆರೋಪಿಗಳ ಇಂಟ್ರಸ್ಟಿಂಗ್ ಕಹಾನಿ

ಅಲ್ಲಿನ ನಿವಾಸಿಗಳು ನೀಡಿದ ದೂರಿನನ್ವಯ ನಾನು ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದೆ. ಆದರೆ ಪರಿಷ್ಕೃತ ಮತದಾರರ ಪಟ್ಟಿಯನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಮೂದಿಸಿಲ್ಲ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವಾಗಿ ನೂತನವಾಗಿ ರೂಪುಗೊಂಡಾಗಿನಿಂದಲೂ ನನ್ನ ಮತದಾರರ ಹೆಸರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿಯೇ ಇದ್ದು, ಇದೀಗ ಬೇರೆಡೆ ಸೇರ್ಪಡೆಗೊಂಡಿರುವುದನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ದಾವೆ ಹೂಡಿದ್ದೇನೆ. ಈ ಕುರಿತು ದಾವೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದ್ದೇನೆ ಎಂದರು.

ಮೀಸಲಾತಿಯ ಕುರಿತು ಅಥವಾ ಚುನಾವಣೆಯನ್ನು ಮುಂದೂಡುವ ಕುರಿತು ಯಾವುದೇ ರೀತಿಯ ದಾವೆಯನ್ನು ನಾನು ಹೂಡಿರುವುದಿಲ್ಲ. ನಾನು ಪ್ರಶ್ನಿಸಿರುವುದು ಕೇವಲ ನನ್ನ ಮತ ಕ್ಷೇತ್ರದ ಮತದಾರರನ್ನು ನಮ್ಮ ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇನೆ. ಇದರಲ್ಲಿ ಯಾವುದೇ ರೀತಿಯ ತಪ್ಪು ಕಲ್ಪನೆ ಬೇಡ ಅಂತ ಶಾಸಕ ಎಂ.ಸತೀಶ್‌ ರೆಡ್ಡಿ ತಿಳಿಸಿದ್ದಾರೆ.  
 

Follow Us:
Download App:
  • android
  • ios