* ಸಿ,ಪಿ.ಯೋಗೇಶ್ವರ್ ಪರ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್* ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್‌ವೈಗೆ ಪರೋಕ್ಷ ಎಚ್ಚರಿಕೆ* ಯಡಿಯೂರಪ್ಪ ಸ್ಥಿತಿ ರಮೇಶ ಜಾರಕಿಹೊಳಿ ಪ್ರಕರಣದಂತೆ ಆಗಲಿದೆ ಎಂದ ಯತ್ನಾಳ್

ವಿಜಯಪುರ, (ಜೂನ್.01): ಸಚಿವ ಸಿ.ಪಿ.ಯೋಗೇಶ್ವರ್ ಅವರು ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಕೂಗು ಎಬ್ಬಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರು ಟು ದೆಹಲಿ ನಾಯಕರ ಭೇಟಿ ಮಾಡುತ್ತಿದ್ದಾರೆ.

ಇನ್ನು ಸಿ.ಪಿ.ಯೋಗೇಶ್ವರ್ ನಡೆಗೆ ಬಿಎಸ್‌ವೈ ಆಪ್ತ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಯೋಗೇಶ್ವರ್‌ ಅವರನ್ನ ಸಂಪುಟದಿಂದ ಕೈಬಿಡುವಂತೆ ಸಿಎಂಗೆ ಆಗ್ರಹಿಸಿದ್ದಾರೆ. 

ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಸಚಿವ ಸ್ಥಾನದಿಂದ ಸಿ.ಪಿ.ಯೋಗೇಶ್ವರ ಅವರನ್ನು ವಜಾ ಮಾಡುವುದು ಅಸಾಧ್ಯ. ವಿಶಿಷ್ಟ ಕೋಟಾದಲ್ಲಿ ಮಂತ್ರಿಯಾಗಿರುವ ಅವರಿಗೆ ವಜಾ ಬದಲಾಗಿ ಅವರ ನಿರೀಕ್ಷೆಯ ಇಂಧನ ಖಾತೆ ಸಹಿತ ಉಪ ಮುಖ್ಯಮಂತ್ರಿ ಹುದ್ದೇ ನೀಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

ದಿಢೀರ್ ದಿಲ್ಲಿಗೆ ಹಾರಿದ ವಿಜಯೇಂದ್ರ: ಕಾರಣ ಇದೇ ಆಗಿರಬಹುದಾ..?

ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಯ ವಿಡಿಯೋ ಹಾಕಿರುವ ಯತ್ನಾಳ, ಸಿ.ಪಿ.ಯೋಗೇಶ್ವರ ಅವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲ್ಲ. ಒಂದೊಮ್ಮೆ ಕ್ರಮ ಕೈಗೊಂಡ ಒಂದು ಗಂಟೆಯಲ್ಲಿ ಯಡಿಯೂರಪ್ಪ ಸ್ಥಿತಿ ರಮೇಶ ಜಾರಕಿಹೊಳಿ ಪ್ರಕರಣದಂತೆ ಆಗಲಿದೆ. ಅಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ಕೊಟ್ಟರು.

ಯೋಗೇಶ್ವರ ಸಹಿತ ಮುರುಗೇಶ ನಿರಾಣಿ, ಎನ್.ಆರ್.ಸಂತೋಷ ಇವರೆಲ್ಲ ಒಂದೇ ಕೋಟಾದಲ್ಲಿ ಸಚಿವರಾದವರು. ಹೀಗಾಗಿ ಇವರ ವಿರುದ್ಧ ಮುಖ್ಯಮಂತ್ರಿ ಕ್ರಮ ಕೈಗೊಳ್ಳುವ ಶಕ್ತಿ ಯಡಿಯೂರಪ್ಪ ಅವರಿಗೆ ಇಲ್ಲ ಎಂದು ಕುಟುಕಿದರು.

ಜಿಂದಾಲ್ ಕಂಪನಿಗೆ 3666 ಎಕರೆ ಜಮೀನನ್ನು ಕೇವಲ ಎಕರೆಗೆ 1.25 ಲಕ್ಷ ರೂ.ಗೆ ನೀಡಿದ್ದನ್ನು ನಾನು ಪ್ರಶ್ನಿಸಿದೆ, ಹೈಕಮಾಂಡ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಜಿಂದಾಲ್‍ಗೆ ನೀಡಿದ್ದ ಭೂಮಿಯನ್ನು ರದ್ದು ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.