ಬೆಂಗಳೂರು, (ಮಾ.10): ಅಪ್ಪಮಕ್ಕಳ ಸಿಡಿ ಸಹ ಕೆಲವರ ಬಳಿಯಿದ್ದು, ಆ ಸಿಡಿಗಳನ್ನು ಸಹ ಇಷ್ಟರಲ್ಲಿಯೇ ಬಿಡುಗಡೆ ಮಾಡುತ್ತಾರೆ. ಸಿಡಿ ಇಟ್ಟುಕೊಂಡೇ ಬ್ಲ್ಯಾಕ್ಮೇಲ್ ಮಾಡುವ ಎರಡು ಪಕ್ಷಗಳ ಕೆಲ ರಾಜಕೀಯ ನಾಯಕರು ನಮ್ಮ ರಾಜದಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಮಾಡೋದು ಇಷ್ಟು ಹಣ ಕೊಡಿ ಎಂದು ಬ್ಲಾಕ್‌ಮೇಲ್‌ ಮಾಡೋದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನೂ 23 ಜನರ ಸಿಡಿ ಇದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.  ನನಗೆ ಸಿಡಿ ಮಾಡಿ ಗೊತ್ತಿಲ್ಲ ಸಿಡಿ ನೋಡೂ ಇಲ್ಲ. ಆದರೆ, ಇದೆಲ್ಲಾ ದುರದೃಷ್ಟಕರ ಎಂದು ತಿಳಿಸಿದರು.

ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಇವರು: ಸಚಿವರ ಸ್ಫೋಟಕ ಹೇಳಿಕೆ

ಸಿಡಿ ಯಾರು ಮಾಡಿದ್ದು ಎಂಬುದು ತನಿಖೆ ನಂತರವಷ್ಟೇ ತಿಳಿಯಬೇಕು. ಕಾಂಗ್ರೆಸ್‌ನವರೂ ಇರಬಹುದು, ಬಿಜೆಪಿಯವರೂ ಇರಬಹುದು. ಏಕೆಂದರೆ ಈಗ ರಾಜ್ಯದಲ್ಲಿರುವುದು ಒಂದು ರೀತಿಯಲ್ಲಿ ಬಿಜೆಪಿ -ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಎಂದು ಲೇವಡಿ ಮಾಡಿದರು.

ಬ್ಲ್ಯಾಕ್​ ಮೇಲ್ ತಂತ್ರ ನಡೀತಾ ಇದೆ. ಕೆಲವು ಮಂದಿ ವಿಧಾನಸೌಧ ಸುತ್ತಲೂ.. ಇನ್ನೂ 23 ಜನರದ್ದು ಇದೆ. ಇನ್ನೊಂದು ವಾರದಲ್ಲಿ ಬಿಡುಗಡೆಯಾಗುತ್ತದೆ ಅನ್ನೋ ಗಾಸಿಪ್ ಹಬ್ಬುತ್ತಿದೆ. ಒಟ್ಟಾರೆ ಇದು ಜನಪ್ರತಿನಿಧಿಗಳ ಬ್ಲ್ಯಾಕ್ ಮೇಲ್ ಮಾಡುವ ತಂತ್ರವಾಗಿದೆ. ಎಲ್ಲಾ ಪಕ್ಷದಲ್ಲಿರುವ ಕೆಲವು ನಾಯಕರು ಇದನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೊನ್ನೆ ಹೇಳಿದ್ರು ಇನ್ನೂ ಆರು ಸಚಿವರ ಸಿಡಿ ಬಿಡುಗಡೆ ಆಗುತ್ತದೆ ಅಂತಾ. ನನಗೆ 23 ಜನರ ಹೆಸರನ್ನ ಹೇಳಿದರು. ಸದನ ನಡೆಯುವ ಸಂದರ್ಭದಲ್ಲಿ ಯಾರೋ ಒಬ್ಬ ಶಾಸಕರಿಗೆ ಫೋನ್ ಬರುತ್ತೆ. ನಿಮ್ಮ ಕುರಿತ ಸಿಡಿ ಇದೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಾರೆ. ನೀವು ಇಷ್ಟು ಕೋಟಿ ಕೊಡಿ, ಇಲ್ಲದಿದ್ರೆ ಸಿಡಿ ಬಿಡುಗಡೆ ಮಾಡ್ತೇನೆ ಅಂತಾ ಬ್ಲಾಕ್ ಮೇಲೆ ಮಾಡಿರೋದು ಅದೆಷ್ಟೋ ನಡೆದಿದೆ. ಈ ಆಧಾರದ ಮೇಲೆ ನಾನು ಹೇಳಿಕೆ ನೀಡಿದ್ದೆ. ಈಗಲೂ ಕೂಡ ವಿಧಾನಸೌಧದ ಸುತ್ತಮುತ್ತ ಕೇಳಿ ಬರುತ್ತಿದೆ, ಇನ್ನೂ 23 ಜನರ CD ಇದೆ, ಬಿಡುಗಡೆಯಾಗುತ್ತದೆ ಅನ್ನೋದನ್ನ ಕೇಳಿದ್ದೇನೆ ಎಂದರು.