ಸಹಿಗಾಗಿ ಯತ್ನಾಳ್ ಕೂಡ ಡಿ.ಕೆ.ಶಿವಕುಮಾರ್ ಬಳಿ ಬರ್ತಾರೆ: ಡಿ.ಕೆ.ಸುರೇಶ್
ವಿಜಯೇಂದ್ರ ಮತ್ತು ಡಿ.ಕೆ. ಶಿವಕುಮಾರ್ ಆತ್ಮೀಯತೆ ಹೊಂದಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ವಿಜಯೇಂದ್ರ ಮಾತ್ರವಲ್ಲದೆ ಯತ್ನಾಳ್ ಕೂಡ ಡಿ.ಕೆ.ಶಿವಕುಮಾರ್ ಜತೆಗೆ ಆತ್ಮೀಯವಾಗಿದ್ದಾರೆ. ಅವರೂ ಕೆಲವೊಮ್ಮೆ ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಶಿವಕುಮಾರ್ ಬಳಿ ಬರುತ್ತಾರೆ: ಮಾಜಿ ಸಂಸದ ಡಿ.ಕೆ.ಸುರೇಶ್
ಬೆಂಗಳೂರು(ಡಿ.03): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತ್ರವಲ್ಲದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಬರುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ವಿಜಯೇಂದ್ರ ಮತ್ತು ಡಿ.ಕೆ. ಶಿವಕುಮಾರ್ ಆತ್ಮೀಯತೆ ಹೊಂದಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ವಿಜಯೇಂದ್ರ ಮಾತ್ರವಲ್ಲದೆ ಯತ್ನಾಳ್ ಕೂಡ ಡಿ.ಕೆ.ಶಿವಕುಮಾರ್ ಜತೆಗೆ ಆತ್ಮೀಯವಾಗಿದ್ದಾರೆ. ಅವರೂ ಕೆಲವೊಮ್ಮೆ ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಶಿವಕುಮಾರ್ ಬಳಿ ಬರುತ್ತಾರೆ ಎಂದು ತಿಳಿಸಿದರು.
ಮಾತು ವಾಪಸ್ ಪಡೆಯದಿದ್ದರೆ ಸೋಲು, ಬಿಜೆಪಿ ನೋಟಿಸ್ ಬೆನ್ನಲ್ಲೇ ಯತ್ನಾಳ್‌ಗೆ ಸ್ವಾಮೀಜಿ ಶಾಪ!
ವಿಜಯೇಂದ್ರ ಹಾಗೂ ಶಿವಕುಮಾರ್ ನಡುವೆ ಹೊಂದಾಣಿಕೆ ರಾಜಕೀಯದ ದಾಖಲೆಯಿದೆ ಎಂದು ಯತ್ನಾಳ್ ಹೇಳಿದ್ದಾರೆ. ಅಂಥ ದಾಖಲೆಗಳಿದ್ದರೆ ಅವರು ಬಿಡುಗಡೆ ಮಾಡಲಿ. ನಾವು ಬೇಡ ಎನ್ನುವುದಿಲ್ಲ. ಅವರೂ ಶಿವಕುಮಾರ್ ಭೇಟಿ ಮಾಡಿ ಉಭಯ ಕುಶಲೋಪರಿ ಮಾತನಾಡುತ್ತಾರೆ. ಆದರೂ ವಿಜಯೇಂದ್ರ ಬಗ್ಗೆ ಮಾತ್ರ ಏತಕ್ಕಾಗಿ ಹೇಳಿದ್ದಾರೆ ಗೊತ್ತಿಲ್ಲ. ಅದು ಅವರ ಆಂತರಿಕ ವಿಚಾರ ಎಂದರು.
ಒಳ ಒಪ್ಪಂದದ ದಾಖಲೆ ಇದ್ರೆ ಬಿಡುಗಡೆ ಮಾಡಿ: ಯತ್ನಾಳ್ ವಿರುದ್ಧ ವಿಜಯೇಂದ್ರ ಆಕ್ರೋಶ
ಬೇರೆ ಪಕ್ಷದ ನಾಯಕರ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ದಾಖಲೆಗಳಿದ್ದರೆ ಯಾವುದೇ ಶುಭ ಗಳಿಗೆ, ಮುಹೂರ್ತ ನೋಡದೆ ತಕ್ಷಣ ಬಿಡುಗಡೆ ಮಾಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಮಾಡಬೇಕಾದ ಅವಶ್ಯಕತೆ ನನಗಿಲ್ಲ. ನಾನು ರಾಜ್ಯಾಧ್ಯಕ್ಷನಾಗಿ ಪಕ್ಷದ ಸಂಘಟನೆ ಹಾಗೂ ಬಲಪಡಿಸುವ ಬಗ್ಗೆ ಗಮನಹರಿಸಿದ್ದೇನೆ. ಯತ್ನಾಳ್ ಅವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ ಎಂದು ಹೇಳಿದ್ದರು.
ಕರ್ನಾಟಕ ಬಿಜೆಪಿ ಯಾವತ್ತೂ ಹೈಕಮಾಂಡ್‌ಗೆ ಬಿಸಿ ತುಪ್ಪ, ರಾಜ್ಯ ನಾಯಕರಿಗೆ ಮೊಸರಿನಲ್ಲಿ ಕಲ್ಲು!
ಈ ವಿಜಯೇಂದ್ರನ ಬದಲಾವಣೆ ಮಾಡುವುದಕ್ಕೆ ಅವರ ಜೊತೆ ಇನ್ನೂ ಹತ್ತು ಜನರನ್ನು ಸೇರಿಸಿಕೊಳ್ಳಲಿ ನನಗೇನೂ ತೊಂದರೆ ಇಲ್ಲ. ಈಗಲೂ ಮನವಿ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ನಮ್ಮ ನಡವಳಿಕೆ ಸಂಘಟನೆಗೆ ಪೂರಕವಾಗಿ ಇರಬೇಕು. ಅದು ಬಿಟ್ಟು ತೊಂದರೆ ಕೊಡುವ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು. ಆದರೆ ಅವರಿಗೆ ಅರ್ಥ ಆಗುತ್ತಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಬೈಯುವುದೇ ಒಂದು ಪದವಿ ಅಂದುಕೊಂಡಿದ್ದಾರೆ. ಯತ್ನಾಳ್ ಅವರ ಉಚ್ಚಾಟನೆಗೆ ಕಾರ್ಯಕರ್ತರ ಅಪೇಕ್ಷೆ ಇದೆ. ಬಿಗಿ ಕ್ರಮ ಆಗಬೇಕು. ಇದರ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ತಿಳಿಸಿದ್ದರು.
ಪಕ್ಷಕ್ಕೆ ಅಗೌರವ ಆಗುವಂತೆ ಯಾರೂ ಮಾಧ್ಯಮಗಳ ಮುಂದೆ ಮಾತನಾಡಬಾರದು. ನಮ್ಮ ನಡವಳಿಕೆ, ಹೇಳಿಕೆಗಳು ಸಂಘಟನೆಗೆ ಪೂರಕವಾಗಿ ಇರಬೇಕೇ ಹೊರತು ಸಂಘಟನೆಗೆ ತೊಂದರೆ ಕೊಡುವ ಕೆಲಸವನ್ನು ನಾನೂ ಮಾಡಬಾರದು, ಮತ್ತೊಬ್ಬನೂ ಮಾಡಬಾರದು ಎಂದರು. ಚಾಡಿ ಹೇಳುವ ಅವಶ್ಯಕತೆ ನನಗಿಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯೇಂದ್ರ, ಚಾಡಿ ಹೇಳುವುದಾಗಲಿ, ಯತ್ನಾಳರನ್ನು ಪಕ್ಷದಿಂದ ಹೊರ ಕಳಿಸಬೇಕೆಂಬ ಒತ್ತಾಯ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ರಾಜ್ಯದ ಜನ ಭ್ರಷ್ಟ ಕಾಂಗ್ರೆಸ್ ಸರ್ಕಾರ ಎನ್ನುತ್ತಿದ್ದಾರೆ. ಇದರ ನಡುವೆ, ನಮ್ಮ ಕೆಲ ಮುಖಂಡರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ರಾಜ್ಯ ಕಂಡ ಧೀಮಂತ ನಾಯಕ, ರೈತ ಮುಂದಾಳು ಯಡಿಯೂರಪ್ಪರ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದರು.