Asianet Suvarna News Asianet Suvarna News

ಮಿಂಚೇರಿ ಬೆಟ್ಟ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ: ಸಚಿವ ಬಿ. ಶ್ರೀರಾಮುಲು

ತಾಲೂಕಿನ ಮಿಂಚೇರಿ ಬೆಟ್ಟವನ್ನು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

Development of Mincheri Hill as an eco tourism centre says minister b sriramulu gvd
Author
Bangalore, First Published Aug 16, 2022, 12:56 AM IST

ಬಳ್ಳಾರಿ (ಆ.16): ತಾಲೂಕಿನ ಮಿಂಚೇರಿ ಬೆಟ್ಟವನ್ನು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಸಚಿವ ಬಿ. ಶ್ರೀರಾಮುಲು ತಿಳಿಸಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮನೆಮನೆಗೆ ತ್ರಿವರ್ಣಧ್ವಜ ಅಭಿಯಾನ ಅಂಗವಾಗಿ ಮಿಂಚೇರಿ ಗುಡ್ಡದಲ್ಲಿನ ಬ್ರಿಟಿಷ್‌ ಕಾಲದ ಬಂಗ್ಲೆಯ ಮುಂಭಾಗ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 

ಮಿಂಚೇರಿ ಬೆಟ್ಟದಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಉಪಾಹಾರದ ವ್ಯವಸ್ಥೆ, ತಂಗುವಿಕೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಂದಾಜುಪಟ್ಟಿಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳನ್ನು ಗುರುತಿಸುವ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಬಳ್ಳಾರಿ ವೈಟ್‌ಹೌಸ್‌ನಂತಿರುವ ನವೀಕೃತ ಬ್ರಿಟಿಷ್‌ ಜಡ್ಜ್‌ ಬಂಗ್ಲೆಗೆ ಹಾಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮಿಂಚೇರಿ ಬೆಟ್ಟಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಅತ್ಯಂತ ಸಂತಸವಾಗಿದೆ. 

ಟ್ರಕ್ಕಿಂಗ್ ‌ಮಾಡೋ ಮೂಲಕ ಧ್ವಜಾರೋಹಣ ಮಾಡಿದ ಸಚಿವ ಶ್ರೀರಾಮುಲು

ಬ್ರಿಟಿಷ್‌ ಜಡ್ಜ್‌ ಬಂಗ್ಲೆಗೆ ಅಮೃತಮಹಲ್‌ ಎಂದು ನಾಮಕರಣ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆ ಕಳುಹಿಸಿದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಉಪಅರಣ್ಯ ಸಂರಕ್ಷಾಣಾಧಿಕಾರಿ ಸಂದೀಪ್‌ ಸೂರ್ಯವಂಶಿ ಮಾತನಾಡಿ, ಮಿಂಚೇರಿ ಗುಡ್ಡದಲ್ಲಿ ದೇಶ ಸ್ವತಂತ್ರಗೊಂಡ ಆನಂತರ ನಡೆಯುತ್ತಿರುವ ಮೊದಲ ಧ್ವಜಾರೋಹಣ ಇದಾಗಿದೆ. ಬ್ರಿಟಿಷರು ಜಡ್ಜ್‌ ಬಂಗ್ಲೆಯನ್ನು 1894ರ ಅವಧಿಯಲ್ಲಿ ನಿರ್ಮಿಸಿದ್ದರು. ಸ್ವಾತಂತ್ರ್ಯಾನಂತರ ಅದನ್ನು ರೆಂಜ್‌ ಫಾರೆಸ್ಟ್‌ ಆಫೀಸರ್‌ ವಸತಿ ಗೃಹವನ್ನಾಗಿ ಮಾಡಲಾಗಿತ್ತು. 2015ರಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿಶೇಷ ಮುತುವರ್ಜಿಯ ಫಲವಾಗಿ ಮೂಲಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ನವೀಕರಣ ಕೆಲಸ ಆರಂಭಿಸಿ ಪೂರ್ಣಗೊಳಿಸಲಾಗಿದೆ. 

ಪರಿಸರ ಪ್ರವಾಸೋದ್ಯಮ, ಪ್ರವಾಸೋದ್ಯಮಕ್ಕೆ ಉತ್ತೇಜನ, ಮ್ಯೂಸಿಯಂ ಇನ್ನಿತರ ಚಟುವಟಿಕೆ ಕೈಗೊಳ್ಳಲು ಉದ್ದೇಶಿಸಲಾಗಿದ್ದು, 2-3 ತಿಂಗಳಲ್ಲಿ ಅನುಷ್ಠಾನಗೊಳ್ಳಲಿವೆ ಎಂದು ತಿಳಿಸಿದರು. ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ವಿಧಾನಪರಿಷತ್‌ ಸದಸ್ಯ ವೈ.ಎಂ. ಸತೀಶ, ಮೇಯರ್‌ ರಾಜೇಶ್ವರಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್‌, ಜಿಪಂ ಸಿಇಒ ಜಿ. ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ಸಹಾಯಕ ಆಯುಕ್ತ ಡಾ. ಆಕಾಶ ಶಂಕರ್‌, ತಹಸೀಲ್ದಾರ್‌ ವಿಶ್ವನಾಥ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ನೌಕರರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ಬಿಜೆಪಿಯಿಂದ ಬೈಕ್‌ ರ್ಯಾಲಿ: ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿ ಪಥದತ್ತ ಒಯ್ದು ಜನತೆ ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ ಎಂದು ಮಾಜಿ ಶಾಸಕ ನೇಮಿರಾಜ್‌ ನಾಯ್ಕ್‌ ಹೇಳಿದರು. ಆಜಾದಿಕಾ ಅಮೃತ ಮಹೋತ್ಸವದ ಪ್ರಯುಕ್ತ ಮಿನಿ ವಿಧಾನ ಸೌಧದಿಂದ ಪಟ್ಟಣದ ವಿವಿಧೆಡೆ ಬಿಜೆಪಿಯಿಂದ ನಡೆದ ಬೈಕ್‌ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಆಡಂಬರದ ದೇಶಭಕ್ತಿ ಸಲ್ಲದು. ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವುದು ಮುಖ್ಯವಾಗಿದೆ. ನರೇಂದ್ರ ಮೋದಿ ದೇಶದ ಪ್ರತಿಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಮೋದಿಯ ಆಡಳಿತವನ್ನು ಪ್ರಪಂಚದ ಬಹುತೇಖ ದೇಶಗಳು ಒಪ್ಪಿಕೊಂಡು, ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿವೆ. 

ಸಾರಿಗೆ ಇಲಾಖೆಯಿಂದ ಹೊಸ 600 ಬಸ್‌ಗಳ ಸಂಚಾರ ಶುರು: ಸಚಿವ ಶ್ರೀರಾಮುಲು

75ನೇ ವರ್ಷದ ಅಜಾದಿಕಾ ಅಮೃತ ಮಹೋತ್ಸವವನ್ನು ಪ್ರತಿಯೊಬ್ಬರು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರಾರ‍ಯಲಿ ಸಂಚರಿಸಿತು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯ್ಕ್‌, ಭದ್ರವಾಡಿ ಚಂದ್ರಶೇಖರ್‌, ಪೊಲೀಸ್‌ ರಾಮನಾಯ್ಕ್‌, ಮರಿಯಮ್ಮನಹಳ್ಳಿ ಕೃಷ್ಣನಾಯ್ಕ್‌, ಬಿಜೆಪಿ ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ, ಕಾರ್ಯದರ್ಶಿ ಬ್ಯಾಟಿ ನಾಗರಾಜ, ಪುರಸಭೆ ಸದಸ್ಯರಾದ ಬಿ. ಗಂಗಾಧರ, ನಾಗರಾಜ ಜನ್ನು, ದೀಪಕ್‌ ಕಠಾರೆ, ಈರಣ್ಣ, ನವೀನ್‌, ಜೋಗಿ ಹನುಮಂತ, ಬಣಕಾರ ಸುರೇಶ್‌, ಮುಖಂಡರಾದ ಬಾದಾಮಿ ಮೃತ್ಯುಂಜಯ, ಕೆ.ಎಂ. ತಿಪ್ಪೇಸ್ವಾಮಿ, ಅಂಬಳಿ ರಂವೀಂದ್ರ ಗೌಡ, ಸಂದೀಪ, ರಾಜು ಪಾಟೀಲ್‌ ಇತರರಿದ್ದರು.

Follow Us:
Download App:
  • android
  • ios