ಮುಸ್ಲಿಂರ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಧಾರ್ಮಿಕ ಸ್ಥಳಗಳ ಅಸಡ್ಡೆ: ಶಾಸಕ ಅರವಿಂದ ಬೆಲ್ಲದ
ಭ್ರಷ್ಟ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯ ಓಲೈಸಲು ಹಿಂದೂ ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿ ಮಾಡದಂತೆ ಸುತ್ತೋಲೆ ಹೊರಡಿಸಿದೆ ಎಂದು ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
ಧಾರವಾಡ (ಆ.23): ಭ್ರಷ್ಟ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯ ಓಲೈಸಲು ಹಿಂದೂ ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿ ಮಾಡದಂತೆ ಸುತ್ತೋಲೆ ಹೊರಡಿಸಿದೆ ಎಂದು ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಜನತೆ ಹಾಗೂ ಧಾರ್ಮಿಕ ಸ್ಥಳಗಳ ಮಧ್ಯೆ ಅನ್ಯೋನ್ಯ ಸಂಬಂಧವಿದೆ. ಯಾತ್ರೆಗೆ ವಿಶೇಷ ಮಹತ್ವವಿದೆ. ಹೀಗಿದ್ದರೂ ಸರ್ಕಾರ ಹಿಂದೂಗಳಿಗೆ ಘಾಸಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಖಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರು, ಪ್ರವಾಸಿ ತಾಣಗಳಾದ ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಪ್ರವಾಸೋದ್ಯಮ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಿದ್ದಾರೆ ಎಂದು ದೂರಿದರು. ಮುಸ್ಲಿಂ ಓಲೈಕೆಗೆ ಸಾವಿರಾರು ಕೋಟಿ ಹಣ ನೀಡುವ ಸಿದ್ದರಾಮಯ್ಯ, ಹಿಂದೂ ದೇವಸ್ಥಾನಗಳಿಗೆ ಬರುವ ಹಣಕ್ಕೆ ಕತ್ತರಿ ಹಾಕುವುದೇಕೆ? ದೇವಸ್ಥಾನ ಅಭಿವೃದ್ಧಿ ನಿಲ್ಲಿಸುವುದೇಕೆ? ಎಂದು ಪ್ರಶ್ನಿಸಿದ ಬೆಲ್ಲದ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
ನಾವು ರಾಜ್ಯಪಾಲರನ್ನು ಅವಮಾನಿಸಿಲ್ಲ, ಕಲ್ಲು ಹೊಡೆಯುವುದು ಹೇಡಿತನ: ಬಿ.ಕೆ.ಹರಿಪ್ರಸಾದ್
ದಾಖಲೆ ಮುಚ್ಚಿಟ್ಟ ಭೈರತಿ: ಮುಡಾ ಹಗರಣ ಬೆಳಕಿಗೆ ಬಂದಾಕ್ಷಣವೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಮೈಸೂರಿಗೆ ತೆರಳಿ, ದಾಖಲೆ ಪಡೆದು ಅವುಗಳನ್ನು ಮುಚ್ಚಿಟ್ಟಿದ್ದು, ಒಂದೆರಡು ಮಾಧ್ಯಮಕ್ಕೆ ಲಭಿಸಿವೆ. ಈ ಕುರಿತು ತನಿಖೆ ನಡೆಸಬೇಕು. ಮುಡಾ ದಾಖಲೆಗಳಿಗೆ ವೈಟ್ನರ್ ಲೇಪಿಸಿ, ಗೊಂದಲ ಸೃಷ್ಟಿಸಿದ್ದಾರೆ. ರಾಜ್ಯಪಾಲರಿಗೆ ಬಂದ ದೂರಿನನ್ವಯ ತನಿಖೆಗೆ ಆದೇಶಿಸಿದ್ದಾರೆ. ಆ. 29ರಂದು ನ್ಯಾಯಾಲಯ ರಾಜ್ಯಪಾಲರ ನಿಲುವು ಎತ್ತಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ನಡೆಸುವ ಮುಖ್ಯಮಂತ್ರಿ ಮನವಿಗೆ ಉತ್ತರಿಸಿದ ಬೆಲ್ಲದ, ತಮ್ಮ ಮೇಲೆ ಹಗರಣದ ಆರೋಪ ಬಂದಾಗ ಅನ್ಯರ ಬಗ್ಗೆ ಮಾತನಾಡುವುದಲ್ಲ. ಯಾವುದೇ ಹಗರಣ ಇದ್ದರೂ ತನಿಖೆ ಮಾಡಲಿ. 2013-18ರ ವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಇದ್ದಾರೆ. ಇಷ್ಟು ವರ್ಷ ಮಲಗಿದ್ರಾ? ನಾವು ತನಿಖೆ ಮಾಡಲು ಹೇಳುತ್ತೇವೆ. ತನಿಖೆಗೆ ಬೇಡ ಅಂದವರಾರು? ಎಂದರು.
ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಜಯಭೇರಿ: ಕಾಂಗ್ರೆಸ್‌ಗೆ ಮುಖಭಂಗ
ಪೊಲೀಸರು ಶಾಮೀಲು: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾನೂನು ಬಾಹಿರವಾಗಿ ಬಡ್ಡಿ ದಂಧೆಗಳು ನಡೆಯುತ್ತಿವೆ. ಬಡ್ಡಿ ದಂಧೆಕೋರರ ಜೊತೆಗೆ ಪೊಲೀಸ್ ಇಲಾಖೆ ಶಾಮೀಲು ಆಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳಕ್ಕೆ ಬಡ್ಡಿ ದಂಧೆ ಹಾಗೂ ಡ್ರಗ್ಸ್ ಜಾಲವೇ ಕಾರಣ ಎಂದಿರುವ ಅವರು, ಯುವಕರು ಡ್ರಗ್ಸ್ ಸೇವಿಸಿ ಸುಲಿಗೆ, ಕೊಲೆಗೆ ಇಳಿಯುತ್ತಿದ್ದು, ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕು. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಶಾಸಕ ಬೆಲ್ಲದ ಆಗ್ರಹಿಸಿದರು.