ಯೋಗೇಶ್ವರ್‌ಗೇ ಸಿಗುತ್ತಾ ಚನ್ನಪಟ್ಟಣ ಟಿಕೆಟ್?: ಬಿಜೆಪಿಗೆ ನೀಡಿದ ಸಮಿತಿಯ ಶಿಫಾರಸ್ಸಿನಲ್ಲಿ ಏನಿದೆ?
ಸಭೆಯಲ್ಲಿ ಪ್ರತಿಯೊಬ್ಬರು ಸಿ.ಪಿ.ಯೋಗೇಶ್ವರ್ ಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಅವರನ್ನು ಅಭ್ಯರ್ಥಿಯನ್ನಾಗಿಸಿದರೆ ಗೆಲುವು ನಿಶ್ಚಿತ ಎಂಬ ಅಭಿಮತಗಳು ಬಂದಿವೆ.
ಬೆಂಗಳೂರು(ಆ.15): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬುದಾಗಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದ ಸಮಿತಿ ತೀರ್ಮಾನ ಕೈಗೊಂಡಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಪತ್ರ ಬರೆದಿರುವುದು ಬಹಿರಂಗಗೊಂಡಿದೆ. ಚನ್ನಪಟ್ಟಣ ಉಪಚುನಾವಣೆ ಶೀಘ್ರವೇ ಘೋಷಣೆಯಾಗುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನರ ನಾಡಿಮಿಡಿತ ಅರಿಯಲು ಡಾ.ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಸಮಿತಿಯಲ್ಲಿ ಮುಖಂಡರಾದ ನಂದೀಶ್ ರೆಡ್ಡಿ, ಗೋಪಿನಾಥ್ ಸದಸ್ಯರಾಗಿದ್ದರು. ಸಮಿತಿಯ ಸಭೆ ನಡೆಸಿ ಜನಾಭಿಪ್ರಾಯ ಪಡೆದುಕೊಂಡಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಡಿಕೆಶಿ, ಕುಮಾರಸ್ವಾಮಿ ರಾಜಕೀಯ ಬಡಿದಾಟದ ನಡುವೆ ಎಂಟ್ರಿ ಕೊಟ್ಟ ಸಿ.ಪಿ. ಯೋಗೇಶ್ವರ
ಸಭೆಯಲ್ಲಿ ಪ್ರತಿಯೊಬ್ಬರು ಸಿ.ಪಿ.ಯೋಗೇಶ್ವರ್ ಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಅವರನ್ನು ಅಭ್ಯರ್ಥಿಯನ್ನಾಗಿಸಿದರೆ ಗೆಲುವು ನಿಶ್ಚಿತ ಎಂಬ ಅಭಿಮತಗಳು ಬಂದಿವೆ.
ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ರಚನಾತ್ಮಕ ಕೆಲಸಗಳನ್ನು ಮಾಡಿರುವ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ, ಬಿಜೆಪಿಗೆ ಅವರ ಅಗತ್ಯತೆ ಬಗ್ಗೆ ಪ್ರತಿಪಾದಿಸಲಾಗಿದೆ.ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಲು ಯೋಗೇಶ್ವರ ಅವರ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ತೀರ್ಮಾನವನ್ನು ಸಭೆ ಮಾಡಿದೆ ಎಂದು ತಿಳಿಸಿದ್ದಾರೆ.