Asianet Suvarna News Asianet Suvarna News

ಕಮಲ ನಾಯಕರ ಒಗ್ಗಟ್ಟಿನ ಮಂತ್ರ: ಕಾಂಗ್ರೆಸ್‌, ಜೆಡಿಎಸ್‌ಗೆ ತಕ್ಕ ಪಾಠ ಕಲಿಸಲು ಬಿಜೆಪಿ ಸಜ್ಜು

ವಿಜಯಪುರ ಮಹಾನಗರಪಾಲಿಕೆ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು, ಕಾರ್ಯಕರ್ತರು ನಿರಾಳ

BJP Leaders Unity in Vijayapura City Corporation Elections grg
Author
First Published Oct 15, 2022, 6:26 AM IST

ರುದ್ರಪ್ಪ ಆಸಂಗಿ

ವಿಜಯಪುರ(ಅ.15):  ವಿಜಯಪುರ ಮಹಾನಗರಪಾಲಿಕೆಯನ್ನು ತನ್ನ ತೆಕ್ಕೆಗೆ ತಗೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಇದೇ ಪ್ರಪ್ರಥಮ ಬಾರಿಗೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಬಿಜೆಪಿ ಬಣ ರಾಜಕೀಯಕ್ಕೆ ರಾಜ್ಯ ನಾಯಕರು ಇತಿಶ್ರೀ ಹಾಡುವ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಇದರಿಂದಾಗಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವಿಜಯಪುರ ಮಹಾನಗರಪಾಲಿಕೆಯ 35 ವಾರ್ಡ್‌ಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾದ ಬೆನ್ನಲ್ಲೆ ಟಿಕೆಟ್‌ ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ- ಸಂಸದ ರಮೇಶ ಜಿಗಜಿಣಗಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬಣ ಮುನ್ನಲೆಗೆ ಬಂದಿದ್ದರಿಂದಾಗಿ ಯಾವ ಬಣದವರಿಗೆ ಅಜಿÜರ್‍ ನೀಡಿದರೆ ತಮಗೆ ಟಿಕೆಟ್‌ ಪಕ್ಕಾ ಆಗುತ್ತದೆ ಎಂಬುವುದು ಗೊತ್ತಾಗದೆ ಟಿಕೆಟ್‌ ಆಕಾಂಕ್ಷಿಗಳು ಗೊಂದಲದಲ್ಲಿ ಇದ್ದಾರೆ. ಯತ್ನಾಳ ಬಣದ ಟಿಕೆಟ್‌ ಆಕಾಂಕ್ಷಿಗಳು ಯತ್ನಾಳ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬಳಿ ಟಿಕೆಟ್‌ ಕೇಳುವ ಕಸರತ್ತು ನಡೆಸಿದ್ದಾರೆ. ಅದೇ ರೀತಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ- ಸಂಸದ ರಮೇಶ ಜಿಗಜಿಣಗಿ ಅವರ ಬಣದವರು ಪಟ್ಟಣಶೆಟ್ಟಿ, ಜಿಗಜಿಣಗಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಟಿಕೆಟ್‌ ಕೋರಿ ಅರ್ಜಿ ಮಾಡಿಕೊಂಡಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ಹಾಗೂ ಅಭ್ಯರ್ಥಿ ಪರ ಪ್ರಚಾರ ನಡೆಸುವ ಬಿಜೆಪಿ ಕಾರ್ಯಕರ್ತರು ಯಾರ ಪರವಾಗಿ ತಾವು ಪ್ರಚಾರ ಕಾರ್ಯದಲ್ಲಿ ತೊಡಗಬೇಕು ಎಂಬ ಜಿಜ್ಞಾಸೆಗೆ ಬಿದ್ದಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಪಕ್ಷದ ರಾಜ್ಯ ನಾಯಕರು ಟಿಕೆಟ್‌ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರಲ್ಲಿನ ಗೊಂದಲ ನಿವಾರಿಸದಿದ್ದರೆ ಚುನಾವಣೆಯಲ್ಲಿ ಭಾರಿ ಬೆಲೆ ತೆತ್ತಬೇಕಾದೀತು ಎಂದು ಯೋಚನೆ ಮಾಡಿ ಬೆಳಗಾವಿ ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಅವರ ನೇತೃತ್ವದಲ್ಲಿ ಈಚೆಗಷ್ಟೇ ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಶಾಸಕರು, ಮಾಜಿ ಸಚಿವರು, ಜಿಲ್ಲಾ ಮುಖಂಡರುಗಳ ಸಭೆಯನ್ನು ಕರೆದು ಈ ಬಗ್ಗೆ ಚರ್ಚಿಸಲಾಯಿತು. ಟಿಕೆಟ್‌ ಹಂಚಿಕೆ ಸರ್ವ ಸಮ್ಮತವಾಗದಿದ್ದರೆ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಎಲ್ಲರೂ ಒಗ್ಗೂಡಿ ತಪ್ಪಿಸಬೇಕಿದೆ. ಕಾರ್ಯಕರ್ತರಲ್ಲಿ ಹೊಸ ಹುರುಪು, ಉತ್ಸಾಹ ತುಂಬಲು ನಾಯಕರು ಒಗ್ಗೂಡುವುದು ಅನಿವಾರ್ಯ. ಇಲ್ಲದಿದ್ದರೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಟಿಕೆಟ್‌ ಆಕಾಂಕ್ಷಿಗಳ ಗೊಂದಲವನ್ನು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬಂಡವಾಳ ಮಾಡಿಕೊಂಡು ಪಾಲಿಕೆ ಅಧಿಕಾರ ಪಡೆಯಲು ಸನ್ನಾಹ ನಡೆಸುತ್ತಿವೆ. ಆದ್ದರಿಂದ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂಬ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಗಿ ಎಲ್ಲ ಬಿಜೆಪಿ ನಾಯಕರೂ ಒಗ್ಗೂಡಿ ಕೆಲಸ ಮಾಡಲು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ.

ವಿಜಯಪುರ ಪಾಲಿಕೆ ಎಲೆಕ್ಷನ್: ತಡೆಯಾಜ್ಞೆ ಕೋರಿ ಅರ್ಜಿ ವಜಾಗೊಳಿಸಿದ ಕಲಬುರ್ಗಿ ಹೈಕೋರ್ಟ್ ಪೀಠ

ಬಿಜೆಪಿ ಪಕ್ಷದಲ್ಲಿಯೇ ಎಣ್ಣೆ, ಸೀಗೆಕಾಯಿಯಂತೆ ಸಮಾನ ದೂರವನ್ನು ಕಾಯ್ದುಕೊಂಡಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಅವರು ಸಭೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇದರಿಂದಾಗಿ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು, ಉತ್ಸಾಹ ತುಂಬಿದೆ. ಟಿಕೆಟ್‌ ಆಕಾಂಕ್ಷಿಗಳು, ಕಾರ್ಯಕರ್ತರು ಈಗ ಗೊಂದಲದಿಂದ ನಿರಾಳವಾಗಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಪಾಲಿಕೆಯ 35 ವಾರ್ಡ್‌ಗಳಲ್ಲಿ ಟಿಕೆಟ್‌ ಕೋರಿ 250ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಬಣ ರಾಜಕಾರಣವನ್ನು ಶಮನಗೊಳಿಸುವ ಮೂಲಕ ಸರ್ವ ಸಮ್ಮತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಟಿಕೆಟ್‌ ಆಕಾಂಕ್ಷಿಗಳಲ್ಲಿ ಅಸಮಾಧಾನವಾಗದಂತೆ ಸರ್ವ ಸಮ್ಮತ ಅಭ್ಯರ್ಥಿಗಳ ಆಯ್ಕೆ ಮಾಡಲು ಪಕ್ಷದ ಪಾಲಿಕೆ ಚುನಾವಣೆ ಉಸ್ತುವಾರಿ ನಿರ್ಮಲಕುಮಾರ ಸುರಾನಾ ಅವರು ಅ. 15ರಂದು ವಿಜಯಪುರದಲ್ಲಿ ಸಭೆ ನಡೆಸಿ ಅರ್ಹರಿಗೆ ಟಿಕೆಟ್‌ ಫೈನಲ್‌ ಮಾಡುವ ಪ್ರಕ್ರಿಯೆ ನಡೆಯಲಿದೆ.

ಒಟ್ಟಿನಲ್ಲಿ ಈ ಬಾರಿ ಪಾಲಿಕೆಯಲ್ಲಿ ನಿಚ್ಚಳ ಬಹುಮತ ಪಡೆಯುವ ಮೂಲಕ ಪಾಲಿಕೆಯ ಅಧಿಕಾರದ ಚುಕ್ಕಾಣೆ ಹಿಡಿಯಲು ಬಿಜೆಪಿ ನಾಯಕರು ಶತಾಯಗತಾಯ ಶ್ರಮಿಸುತ್ತಿದ್ದಾರೆ. ಈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಾಯಕರ ಒಗ್ಗಟ್ಟಿನ ಮಂತ್ರ ಫಲಪ್ರದವಾಗುತ್ತದೆಯೋ ಇಲ್ಲವೋ ಎಂಬುವುದನ್ನು ಈಗ ಕಾದು ನೋಡಬೇಕಷ್ಟೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ನಾಯಕರೂ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಪಾಲಿಕೆಯ ಅಧಿಕಾರದ ಚುಕ್ಕಾಣೆ ಬಿಜೆಪಿ ಹಿಡಿಯಲಿದೆ. ಖಂಡಿತವಾಗಿಯೂ ಈ ಬಾರಿ ವಿಜಯಪುರ ಮಹಾನಗರಪಾಲಿಕೆಯು ಬಿಜೆಪಿ ಪಾಲಾಗುವುದು ಖಚಿತ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಆಟ ಈ ಬಾರಿ ಬಿಜೆಪಿ ಮುಂದೆ ನಡೆಯುವುದಿಲ್ಲ ಅಂತ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ತಿಳಿಸಿದ್ದಾರೆ.  
 

Follow Us:
Download App:
  • android
  • ios