Asianet Suvarna News Asianet Suvarna News

ಗ್ಯಾರಂಟಿ ರದ್ದು ಮಾಡುವ ಹೇಳಿಕೆ ಕಾಂಗ್ರೆಸ್‌ ಬ್ಲ್ಯಾಕ್‌ಮೇಲ್‌ ತಂತ್ರ: ಬಿಜೆಪಿ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಎಂಟು ತಿಂಗಳಾದರೂ ಒಂದೇ ಒಂದು ಹೊಸ ಯೋಜನೆ ಜಾರಿಗೆ ತಂದಿಲ್ಲ, ಬೋಗಸ್ ಗ್ಯಾರಂಟಿಯಿಂದಾಗಿ ಜನ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್ ಸೆಟ್‌ಗೆ ಕರೆಂಟ್ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 

BJP Leaders Slams Karnataka Congress Government grg
Author
First Published Feb 2, 2024, 1:00 AM IST

ಚಿಕ್ಕಮಗಳೂರು/ಬೆಂಗಳೂರು(ಫೆ.02):  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲಾಗುವುದು ಎಂಬ ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ಬಿಜೆಪಿ ಮುಖಂಡರು ತೀವ್ರ ಕಿಡಿಕಾರಿದ್ದಾರೆ. ಇದು ಬ್ಲ್ಯಾಕ್‌ಮೇಲ್‌, ಬೆದರಿಕೆಯ ತಂತ್ರ. ಇಂಥ ಹೇಳಿಕೆಯನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಮರ್ಥಿಸಿಕೊಳ್ತಾರಾ? ಎಂದು ಮುಖಂಡರು ಹರಿಹಾಯ್ದಿದ್ದಾರೆ.

ಗ್ಯಾರಂಟಿ ರದ್ದು ಮಾಡುತ್ತೇವೆಂಬ ಹೇಳಿಕೆ ನೀಡಲು ನಾಚಿಕೆಯಾಗಬೇಕು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಎಂಟು ತಿಂಗಳಾದರೂ ಒಂದೇ ಒಂದು ಹೊಸ ಯೋಜನೆ ಜಾರಿಗೆ ತಂದಿಲ್ಲ, ಬೋಗಸ್ ಗ್ಯಾರಂಟಿಯಿಂದಾಗಿ ಜನ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಇಲ್ಲ, ರೈತರ ಪಂಪ್ ಸೆಟ್‌ಗೆ ಕರೆಂಟ್ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಗ್ಯಾರಂಟಿ ರದ್ದು ಮಾಡುತ್ತೇವೆಂದು ಹೇಳುವ ಮೂಲಕ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಂತಾಗಿದೆ ಎಂದರು.

ದತ್ತಪೀಠವು ನೂರಕ್ಕೆ ನೂರು ಹಿಂದು ದೇವಾಲಯವೇ: ಸಿ.ಟಿ.ರವಿ

ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ರಾಮಮಂದಿರ ಉದ್ಘಾಟನೆ ಬಳಿಕ ದೇಶದ ರಾಜಕೀಯ ವಾತಾವರಣ ಬದಲಾಗಿದೆ. ಇದರಿಂದಾಗಿ ಕಾಂಗ್ರೆಸ್ ಭಯಭೀತವಾಗಿದೆ. ಹಾಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದೊಂದು ಬ್ಲ್ಯಾಕ್‌ಮೇಲ್‌ ತಂತ್ರ ಎಂದು ಅಭಿಪ್ರಾಯಪಟ್ಟರು.

ಈ ಮಧ್ಯೆ ಬಾಲಕೃಷ್ಣ ಹೇಳಿಕೆಯನ್ನು ಸ್ವಾಗತಿಸುವುದಾಗಿ ತಿಳಿಸಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ ಮುಖಂಡರು ಗ್ಯಾರಂಟಿ ರದ್ದು ಮಾಡುತ್ತೇವೆಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ಕೆಲಸ ಮಾಡಲ್ಲ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ ಎಂದರು.

ಜಾತಿ ಒಡೆಯುವುದರಲ್ಲಿ ಸಿದ್ದುಗೆ ನೋಬೆಲ್ ಪ್ರಶಸ್ತಿ ನೀಡಬೇಕು: ಆರ್.ಅಶೋಕ್‌

ಸಿಎಂ ಸಮರ್ಥಿಸಿಕೊಳ್ತಾರಾ?: 

ಗ್ಯಾರಂಟಿಗಳನ್ನು ರದ್ದುಮಾಡುವುದಾಗಿ ಶಾಸಕ ಬಾಲಕೃಷ್ಣ ನೀಡಿರುವ ಎಚ್ಚರಿಕೆ, ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಳ್ತಾರಾ ಎಂದು ಇದೇ ವೇಳೆ ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಪ್ರಶ್ನಿಸಿದ್ದಾರೆ.

ಜನರನ್ನು ಹೆದರಿಸಿ, ಬೆದರಿಸಿ, ಗ್ಯಾರಂಟಿ ಎನ್ನುವ ಬಡಿಗೆ ಹಿಡಿದು ಮತ ಕೇಳುತ್ತಿದ್ದೀರಾ? ಮತದಾರರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದೀರಾ? ನಮ್ಮ ದೇಶದಲ್ಲಿ ಕಾಂಗ್ರೆಸ್‌ಗೇ ಗ್ಯಾರಂಟಿ ಇಲ್ಲ, ಇನ್ನು ಆ ಪಕ್ಷ ಕೊಡುವ ಗ್ಯಾರಂಟಿಗಳಿಗೆ ಗ್ಯಾರಂಟಿ ಇದೆಯೇ? ಈ ರೀತಿಯ ಬೆದರಿಕೆಗಳಿಗೆ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios