Asianet Suvarna News Asianet Suvarna News

ಕಾಂಗ್ರೆಸ್‌, ಡಿಕೆಶಿ ವಿರುದ್ಧ ಮುಗಿಬಿದ್ದ ಬಿಜೆಪಿ ; ಹಡಗಿಗೆ ತೂತು ಬಿದ್ದಿದೆ

  •  17 ಶಾಸಕರು ಮತ್ತೆ ಕಾಂಗ್ರೆಸ್‌ಗೆ ಬರುವುದಾದರೆ ಅರ್ಜಿ ಹಾಕಿ ಎಂದ ಡಿಕೆಶಿ
  • ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಆಡಳಿತಾರೂಢ ಬಿಜೆಪಿಯಿಂದ ವ್ಯಾಪಕ ಟೀಕೆ
  •  ಡಿ.ಕೆ.ಶಿವಕುಮಾರ್‌ ವಿರುದ್ಧ ಹಲವು ಮುಖಂಡರು ವಾಗ್ದಾಳಿ 
BJP Leaders slams Congress leaders snr
Author
Bengaluru, First Published Jul 6, 2021, 9:17 AM IST

ಬೆಂಗಳೂರು (ಜು.06):  ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದ 17 ಶಾಸಕರು ಮತ್ತೆ ಕಾಂಗ್ರೆಸ್‌ಗೆ ಬರುವುದಾದರೆ ಅರ್ಜಿ ಹಾಕಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಆಡಳಿತಾರೂಢ ಬಿಜೆಪಿಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆದಿಯಾಗಿ ಹಲವು ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ಮುಳುಗುವ ಹಡಗಾಗಿರುವ ಕಾಂಗ್ರೆಸ್‌ ಹಗಲು ಕನಸು ಕಾಣುತ್ತಿದ್ದು ಅನ್ನು ಹತ್ತುವವರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಶನಿವಾರ ಬೆಂಗಳೂರಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಡಿ.ಕೆ.ಶಿವಕುಮಾರ್‌ ಅವರು, ಕೆಪಿಸಿಸಿ ಅಧ್ಯಕ್ಷನಾಗಿ ನಾನು ಯಾರನ್ನೂ ಅಸ್ಪೃಶ್ಯನಂತೆ ಕಾಣುವುದಿಲ್ಲ. ಪಕ್ಷ ಸೇರ ಬಯಸುವ ಬಿಜೆಪಿ ಶಾಸಕರು ಅರ್ಜಿ ಹಾಕಿಕೊಳ್ಳಲಿ. ರಾಜಕೀಯ ನಿಂತ ನೀರಲ್ಲ, ಯಾವಾಗಲೂ ಬದಲಾಗುತ್ತಿರುತ್ತದೆ ಎಂದಿದ್ದರು. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.

ಡಿಕೆಶಿ ಹೊಗಳಿದ ಎಚ್ ವಿಶ್ವನಾಥ್ : ಹಿರಿಯ ನಾಯಕನನ್ನು ತೆಗಳಿದರು

ಆ ಬಗ್ಗೆ ಹಾವೇರಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿದ ನಳಿನ್‌ ಕುಮಾರ್‌ ಕಟೀಲ್‌, ಕಾಂಗ್ರೆಸ್‌ ಹಡಗಿಗೆ ತೂತು ಬಿದ್ದಿದೆ. ಅದು ಯಾವಾಗ ಮುಳುಗುತ್ತದೆಯೋ ಗೊತ್ತಿಲ್ಲ. ಅದನ್ನು ಹತ್ತುವವರು ಯಾರೂ ಇಲ್ಲ. ಹೀಗಾಗಿ ಯಾರಾದರೂ ರಕ್ಷಿಸಲಿ, ಯಾವ ಪಕ್ಷದವರಾದರೂ ಬರಲಿ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ ಎಂದಿದ್ದಾರೆ.

ಸಚಿವ ಬಿ.ಸಿ.ಪಾಟೀಲ್‌, ಕಾಂಗ್ರೆಸ್‌ನವರನ್ನು ಜನರು ಮರೆತಿದ್ದಾರೆ. ಯಾವುದೇ ಅರ್ಜಿ ಅವರಿಗೆ ಬರುತ್ತಿಲ್ಲ. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ಹೋಲ್‌ಸೇಲ್‌ ಟೆಂಡರ್‌ ಕರೆದಿದ್ದಾರೆ. ಡಿ.ಕೆ.ಶಿವಕುಮಾರ್‌ ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಕದ ತಟ್ಟುತ್ತಿದ್ದಾರಾ ಬಿಜೆಪಿ ಬಾಂಬೆ ಫ್ರೆಂಡ್ಸ್..? ...

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್‌ ಪಕ್ಷದಲ್ಲಿ ಈಗ ಇದ್ದವರಿಗೇ ನೆಲೆ ಇಲ್ಲ. ಇಂತಹ ಪಕ್ಷಕ್ಕೆ ಬೇರೆಯವರು ಹೋಗುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಸಿಎಂ ಕುರ್ಚಿಗೆ ಕಿತ್ತಾಡುವ ಸ್ಥಿತಿ ಇರುವಾಗ ಆ ಪಕ್ಷಕ್ಕೆ ಯಾರು ತಾನೆ ಹೋಗುತ್ತಾರೆ. ಯಾರೂ ಕೂಡ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ. ಅವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಟಕಿಯಾಡಿದ್ದಾರೆ.

ಇನ್ನು ಬಾಗಲಕೋಟೆಯಲ್ಲಿ ಸಚಿವ ಉಮೇಶ್‌ ಕತ್ತಿ, ಡಿ.ಕೆ.ಶಿವಕುಮಾರ ಅವರ ಹೇಳಿಕೆ ತಿರುಕನ ಕನಸು ಕಂಡಂತಾಗಿದೆ. ಇಂತಹ ಕನಸು ಕಾಣುವ ಡಿ.ಕೆ.ಶಿವಕುಮಾರ ಅವರ ಕನಸು ನನಸಾಗುವುದಿಲ್ಲ ಎಂದಿದ್ದಾರೆ. ಬಿಜೆಪಿ ಸೇರಿದ ಶಾಸಕರು ಮರಳಿ ಕಾಂಗ್ರೆಸ್‌ ಸೇರುತ್ತಾರೆ? ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಯಾಕೆ ಬಂದಿದ್ದಾರೆ? ಮತ್ತೆ ಯಾಕೆ ವಾಪಸ್‌ ಹೋಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ. ಹೀಗಾಗಿ ಏನಾದರೂ ಒಂದು ಮಾತನಾಡುತ್ತಲೇ ಇರುತ್ತಾರೆ ಎಂದು ಟೀಕಿಸಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಜೆಪಿಗೆ ಬಂದ ಕಾಂಗ್ರೆಸ್‌ನ ಯಾವ ಶಾಸಕರು ಮರಳಿ ಕಾಂಗ್ರೆಸ್‌ಗೆ ಹೋಗುವ ಮನಸ್ಥಿತಿಯಲ್ಲಿ ಇಲ್ಲ. ಅಲ್ಲಿಂದ ಬಂದವರು ಯಡಿಯೂರಪ್ಪ ಹಾಗೂ ಮೋದಿ ಅವರ ನಾಯಕತ್ವವನ್ನು ಬೆಂಬಲಿಸಿ ಬಿಜೆಪಿಗೆ ಬಂದಿರುವುದರಿಂದ ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿ ನಡೆಯುತ್ತಿರುವ ಶೀತಲ ಸಮರವನ್ನು ವ್ಯಂಗ್ಯವಾಡಿರುವ ಅವರು, ರಾಜ್ಯದಲ್ಲಿ ಸದ್ಯ ಚುನಾವಣೆಯೂ ಇಲ್ಲ. ಚುನಾವಣೆಯ ದಿನಾಂಕವೂ ನಿಗದಿಯಾಗಿಲ್ಲ. ಇಂತಹ ಸಮಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಗುದ್ದಾಡುವುದು ಎಷ್ಟುಸರಿ? ಕಾಂಗ್ರೆಸ್‌ನವರು ಮದುವೆಗಿಂತ ಮುಂಚೆ ಮಕ್ಕಳನ್ನು ಹೆರಬೇಕೆಂದು ಬಯಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

Follow Us:
Download App:
  • android
  • ios