ಕೆಪಿಸಿಸಿ ಅಧ್ಯಕ್ಷರು ಪಕ್ಷ ತ್ಯಜಿಸಿ ಹೋದವರನ್ನು ಮಾತೃಪಕ್ಷಕ್ಕೆ ಕರೆತರುವ ಸೌಜನ್ಯ ತೋರಿಸುತ್ತಿದ್ದಾರೆ ರಾಜಕೀಯ ನಾಯಕರಾದವರು ಸೌಜನ್ಯ ಬೆಳೆಸಿಕೊಳ್ಳಬೇಕು  ಡಿ.ಕೆ. ಶಿವಕುಮಾರ್‌ ಅವರನ್ನು ಹೊಗಳಿದ ಎಚ್ ವಿಶ್ವನಾಥ

ಮೈಸೂರು (ಜು.05):  ಕೆಪಿಸಿಸಿ ಅಧ್ಯಕ್ಷರು ಪಕ್ಷ ತ್ಯಜಿಸಿ ಹೋದವರನ್ನು ಮಾತೃಪಕ್ಷಕ್ಕೆ ಕರೆತರುವ ಸೌಜನ್ಯ ತೋರಿಸುತ್ತಿದ್ದಾರೆ. ರಾಜಕೀಯ ನಾಯಕರಾದವರು ಸೌಜನ್ಯ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಡಿ.ಕೆ. ಶಿವಕುಮಾರ್‌ ಅವರನ್ನು ಹೊಗಳಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಸಂಘಟನಾ ಚತುರ. ಪಕ್ಷ ಸಂಘಟನೆಗೆ ಏನು ಮಾಡಬೇಕು ಅಂತ ಅವರಿಗೆ ಗೊತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿ, ಚಲನವಲನ ಗಮನಿಸಿ ಕಾಂಗ್ರೆಸ್‌ ಬಿಟ್ಟು ಹೋಗಿರುವವರನ್ನು ಮಾತೃ ಪಕ್ಷಕ್ಕೆ ಕರೆಯುತ್ತಿರುವುದು ಅವರ ಸೌಜನ್ಯವನ್ನು ತೋರಿಸುತ್ತದೆ. ಅವರ ಸಂಘಟನಾ ಚತುರತೆ, ಸೌಜನ್ಯತೆಯನ್ನು ಮೆಚ್ಚುತ್ತೇನೆ ಎಂದರು.

ಅವರಪ್ಪನ ಮನೆಯಿಂದ ನನಗೆ MLC ಸ್ಥಾನ ತಂದುಕೊಟ್ಟಿದ್ದಾರಾ?: ವಿಶ್ವನಾಥ್‌ ..

ಪಕ್ಷ ಸಂಘಟನೆ ಮಾಡುವ ರೀತಿ ಅದು. ಅಂತಹ ಸೌಜನ್ಯ ಸಿದ್ದರಾಮಯ್ಯ ಅವರಿಗೂ ಇರಬೇಕಿತ್ತು. ಆದರೆ ಪ್ರಳಯ ಆದರೂ ಪಕ್ಷಕ್ಕೆ ಸೇರಿಸಲ್ಲ ಅಂತ ಸದನದಲ್ಲಿ ಹೇಳುತ್ತಾರೆ. ಪಕ್ಷ ಬಿಟ್ಟವರು ಬರಬಾರದು ಎಂದಾದರೆ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರುವಾಗ ಎಲ್ಲ ಹಿರಿಯ ಕಾಂಗ್ರೆಸ್‌ ಮುಖಂಡರು ಹೀಗೆ ಹೇಳಿದ್ದರಾ? ಸಿದ್ದರಾಮಯ್ಯ ದ್ವೇಷದ ರಾಜಕಾರಣ ಬಿಡಬೇಕು. ಪಕ್ಷ ಬಿಡುವುದು, ಸೇರುವುದು ಹೊಸತಲ್ಲ ಎಂದು ಅವರು ಟೀಕಿಸಿದರು.

ರಾಜ್ಯದಲ್ಲಿ SSLC ಪರೀಕ್ಷೆ ನಡೆಸಬಾರದು : ಎಚ್.ವಿಶ್ವನಾಥ್ ಒತ್ತಾಯ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಡ: ಡೆಲ್ಟಾಪ್ಲಸ್‌ ವೈರಸ್‌ ಬಹುಬೇಗ ಹರಡುತ್ತಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾಡಬಾರದು. ಅಕ್ಷರ, ಆರೋಗ್ಯ ಚೆನ್ನಾಗಿದ್ದರೆ ಆಡಳಿತ ಚೆನ್ನಾಗಿರುತ್ತದೆ. ಮಗುವಿನ ಆರೋಗ್ಯ ಸುರಕ್ಷತೆ ಈಗ ಮುಖ್ಯ, ನಂತರ ಶಿಕ್ಷಣ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತದೆ. ಶಿಕ್ಷಣ ಸಮಿತಿ ವರದಿ ಏನು ಹೇಳಿದೆ? ಪಿಯುಸಿ ಪರೀಕ್ಷೆ ಬೇಡ ಎಂದು ಹೇಳಿದೆ. ಇದು ಯಾವುದನ್ನೂ ನೀವು ಗಮನಕ್ಕೆ ತೆಗೆದುಕೊಂಡಿಲ್ಲ. ದ್ವಿತೀಯ ಪಿಯು ಪರೀಕ್ಷೆಯೇ ಇಲ್ಲವಾದ ಮೇಲೆ ಅವರಿಗಿಂತ ಚಿಕ್ಕವರಾದ ಎಸ್ಸೆಸ್ಸೆಲ್ಸಿ ಮಕ್ಕಳಿಗೇಕೆ ಪರೀಕ್ಷೆ ಎಂದು ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

ಲಸಿಕೆ ಇಲ್ಲದೆ ಇರುವ ಮಕ್ಕಳಿಗೆ ಪರೀಕ್ಷೆ ಮಾಡುವುದು ಬೇಡ. ಎಷ್ಟೋ ದೊಡ್ಡ ದೊಡ್ಡ ರಾಜ್ಯಗಳಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡಿದ್ದಾರೆ. ಓದುವ ಮಕ್ಕಳಿಗೆ ನೆಗೆಟಿವ್‌ ರಿಪೋರ್ಟ್‌ ಬೇಕು. ಕೊರೋನಾ ಸೋಂಕಿಗಿಂತಲೂ ಡೆಲ್ಟಾಪ್ಲಸ್‌ ಬಹುಬೇಗನೆ ಹರಡುತ್ತಿರುವುದರಿಂದ ಯೋಚಿಸಬೇಕು. ಡಾ. ದೇವಿಶೆಟ್ಟಿಕೂಡ ಅದನ್ನೇ ಹೇಳಿದ್ದಾರೆ. ಮಕ್ಕಳ ಆರೋಗ್ಯ, ಸುರಕ್ಷತೆ ದೃಷ್ಟಿಯಿಂದ ಪರೀಕ್ಷೆ ರದ್ದುಪಡಿಸಬೇಕು. ಅಲ್ಲದೆ ಶೇ. 40ರಷ್ಟುಮಾತ್ರ ಪಾಠ ಮಾಡಲಾಗಿದೆ. ಮಕ್ಕಳಿಗೆ ಯಾವುದೇ ರೀತಿಯ ಮುಂಜಾಗ್ರತ ಸೌಲಭ್ಯ ಕಲ್ಪಿಸಿಲ್ಲ ಎಂದರು.

ಕೆಲವೇ ನಿಮಿಷಗಳಲ್ಲಿ ಹರಡುವ ಡೆಲ್ಟಾಪ್ಲಸ್‌ ಮಕ್ಕಳಿಗೆ ತಗುಲಿದರೆ ಯಾರು ಜವಾಬ್ದಾರಿ? ಪರೀಕ್ಷೆ ನಡೆಸಲು ತಾವು ಆರೋಗ್ಯ ಇಲಾಖೆ ಅನುಮತಿ ಪಡೆದಿದ್ದೀರಾ? ಈ ಕೂಡಲೇ ಪರೀಕ್ಷೆ ರದ್ದುಪಡಿಸದಿದ್ದರೆ ಮುಂದಿನ ಅನಾಹುತಕ್ಕೆ ನೀವೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.