ಕಾಂಗ್ರೆಸ್ ನಲ್ಲಿ ಹರಿಪ್ರಸಾದರನ್ನು ಬೂಟಿಗಿಂತ ಕಡೆ ಮಾಡಿದ್ದಾರೆ. ಹಾಗಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಟೀಕಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬೂಟು ನೆಕ್ಕೋರು ಯಾರು?, ಮೌಂಟ್‌ ಬ್ಯಾಟನ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು ಎಂಬುದು ದೇಶದ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ/ಚಿಕ್ಕಮಗಳೂರು(ಡಿ.25): ಬಿಜೆಪಿಯವರು ಗೋಡ್ಸೆ ಅನುಯಾಯಿಗಳು, ನಮಗೆ ಟಿಪ್ಪು ಸುಲ್ತಾನ್ ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕುವವರು ಎಂದು ಕಾಂಗ್ರೆಸ್‌ ಮುಖಂಡ, ಶಾಸಕ ಬಿ.ಕೆ.ಹರಿಪ್ರಸಾದ್‌ ಅವರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಅವರ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್ ನಲ್ಲಿ ಹರಿಪ್ರಸಾದರನ್ನು ಬೂಟಿಗಿಂತ ಕಡೆ ಮಾಡಿದ್ದಾರೆ. ಹಾಗಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಟೀಕಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬೂಟು ನೆಕ್ಕೋರು ಯಾರು?, ಮೌಂಟ್‌ ಬ್ಯಾಟನ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು ಎಂಬುದು ದೇಶದ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹರಿಪ್ರಸಾದ್‌, ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಇಂಥವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ನಾವು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರ ಪರವಾಗಿರುವವರು. ನಾವು ಟಿಪ್ಪು ಸುಲ್ತಾನ್‌ರ ಭಾಗವಲ್ಲ. ನಮಗೆ ಟಿಪ್ಪು ಸುಲ್ತಾನ್ ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕುವವರು ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು.

ಇದಕ್ಕೆ ತಿರುಗೇಟು ನೀಡಿದ ಪ್ರಹ್ಲಾದ್‌ ಜೋಶಿ, ಅವರ ಭಾಷೆಯಲ್ಲಿ ನನಗೆ ಉತ್ತರ ಕೊಡುವುದಕ್ಕೆ ಬರಲ್ಲ. ಆದರೆ, ಕಾಂಗ್ರೆಸ್‌ನಲ್ಲಿ ಅವರನ್ನು ಬೂಟ್‌ಗಿಂತ ಕಡೆ ಮಾಡಿದ್ದಾರೆ. ಅದಕ್ಕೆ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು. ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಗಾಂಧೀಜಿಯವರ ಹತ್ಯೆಯಾದ ನಂತರ ಆರ್‌ಎಸ್ಎಸ್ ಮೇಲೆ ನಿರ್ಬಂಧ ಹಾಕಿದ್ದರು. ನಂತರ ಕಾಂಗ್ರೆಸ್ ಸರ್ಕಾರವೇ ನಿರ್ಬಂಧ ವಾಪಸ್ ಪಡೆಯಿತು. ಯಾಕೆ ನಿರ್ಬಂಧ ವಾಪಸ್ ಪಡೆಯಿತು ಎಂದು ಪ್ರಶ್ನಿಸಿದರು. ನೀವೇನೇ ಮಾಡಿದರೂ ಸಿದ್ದರಾಮಯ್ಯ ನಿಮ್ಮನ್ನು ಮಂತ್ರಿ ಮಾಡುವುದಿಲ್ಲ. ಡಿ.ಕೆ.ಶಿವಕುಮಾರ ನಿಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸೋನಿಯಾ ಗಾಂಧಿ ನಿಮ್ಮನ್ನು ಮಂತ್ರಿ ಮಾಡಿ ಎಂದು ಹೇಳಲ್ಲ ಎಂದು ಕುಟುಕಿದರು.

ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಯಾರು ಬೂಟ್ ನೆಕ್ಕುವವರು, ಯಾರು ಬ್ರಿಟಿಷರ ಪರ ಇದ್ದರು, ಯಾರು ಮೌಂಟ್ ಬ್ಯಾಟನ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದವರು ಎಂಬುದು ದೇಶದ ಚರಿತ್ರೆಯಲ್ಲಿದೆ. ಚರಿತ್ರೆಯನ್ನು ಮತ್ತೆ ಕೆದಕಬೇಡಿ ಹರಿಪ್ರಸಾದ್‌ ಅವರೇ, ಕೆದಕಲು ಬಂದರೆ ಮತ್ತೆ ನಿಮ್ಮ ಮುಖಕ್ಕೆ ಮಸಿಯಾಗುತ್ತದೆ. ಬೂಟ್ ನೆಕ್ಕುವವರು ನೀವು, ಆ ರೀತಿಯ ಹೇಳಿಕೆ ನೀಡುವ ಯಾವುದೇ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಂದು ಟೀಕಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಇತಿಹಾಸ ತಿಳಿದುಕೊಳ್ಳುವಂತೆ ಹರಿಪ್ರಸಾದ್‌ಗೆ ಸಲಹೆ ನೀಡಿದರು.