ಬೆಂಗಳೂರು (ಡಿ.05):  ಇತ್ತೀಚಿನ ನಿಗಮ ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಹಲವು ಹಿರಿಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಶುಕ್ರವಾರ ರಾತ್ರಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕೋರ್‌ ಕಮಿಟಿ ಸದಸ್ಯರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸಮ್ಮುಖದಲ್ಲೇ ಬೇಸರ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ನೇಮಕ ಮಾಡುವ ಮೊದಲು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಬೇಕಿತ್ತು. ಪಕ್ಷದಿಂದ ಸಚಿವರಿಂದ ಶಿಫಾರಸು ಮಾಡಿದವರ ಹೆಸರುಗಳನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ಕೈಬಿಟ್ಟು ಬೇರೆಯವರನ್ನೇ ನೇಮಕ ಮಾಡಲಾಗಿದೆ. ಇದು ಪಕ್ಷದ ತಳಮಟ್ಟದಲ್ಲಿ ಸಾಕಷ್ಟುಅತೃಪ್ತಿ ಮೂಡಿಸಿದೆ. ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ಹಿರಿಯ ನಾಯಕರು ಪ್ರಸ್ತಾಪಿಸಿದರು.

ಹೈಕಮಾಂಡ್​ನಿಂದ ಸಂದೇಶ ತಂದಿರುವೆ ಎಂದ ಉಸ್ತುವಾರಿ: ಸಂಪುಟ ವಿಸ್ತರಣೆಯೋ?

ಎಲ್ಲರ ಮಾತುಗಳನ್ನು ಆಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಯಲ್ಲಿ ಮಾತನಾಡಿ, ಈಗ ಆಗಿರುವುದನ್ನು ಬಿಟ್ಟು ಬಿಡಿ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ. ಇನ್ನೂ ಅನೇಕ ನಿಗಮ ಮಂಡಳಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಸಮಿತಿಗಳಿಗೆ ನೇಮಕ ಮಾಡುವುದು ಬಾಕಿಯಿದೆ. ಅವುಗಳಿಗೆ ಪಕ್ಷದಿಂದ ಶಿಫಾರಸು ಮಾಡುವುದನ್ನೇ ನೇಮಕ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದರು ಎಂದು ಮೂಲಗಳು ತಿಳಿಸಿವೆ.