ಮಂತ್ರಿಗಿರಿ ಪಟ್ಟಕ್ಕೆ ಪಟ್ಟು ಹಿಡಿದಿರುವ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ  ಶಾಸಕ ರಮೇಶ ಜಾರಕಿಹೊಳಿ ಮುಂದಿನ ರಾಜಕೀಯ ನಡೆ ನಿಗೂಢ ಆಪ್ತ ವಲಯಗಳಿಂದ ದೆಹಲಿಯಿಂದ ವರಿಷ್ಠರ ಬುಲಾವ್‌ ಬಂದಿದೆ ಎಂಬ ಮಾಹಿತಿ 

ಬೆಳಗಾವಿ (ಜೂ.28):  ಮಂತ್ರಿಗಿರಿ ಪಟ್ಟಕ್ಕೆ ಪಟ್ಟು ಹಿಡಿದಿರುವ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮುಂದಿನ ರಾಜಕೀಯ ನಡೆ ನಿಗೂಢವಾಗಿದ್ದು, ದೆಹಲಿಯಿಂದ ವರಿಷ್ಠರ ಬುಲಾವ್‌ ಬಂದಿದೆ ಎಂಬ ಮಾಹಿತಿ ಅವರ ಆಪ್ತ ವಲಯಗಳಿಂದ ಕೇಳಿಬರುತ್ತಿದೆ. ಇದರ ನಡುವೆ ಭಾನುವಾರ ಸಂಜೆ ರಹಸ್ಯ ಸ್ಥಳವೊಂದರಲ್ಲಿ ಜಾರಕಿಹೊಳಿ ಸಹೋದರರು ಗೌಪ್ಯ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಯಾರ ಸಂಪರ್ಕಕ್ಕೂ ಸಿಗದ ರಮೇಶ ಜಾರಕಿಹೊಳಿ ಅವರ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್‌ ಆಗಿದೆ. ರಮೇಶ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಸಹೋದರ ಲಖನ್‌ ಜಾರಕಿಹೊಳಿ ಗೌಪ್ಯ ಸಭೆ ನಡೆಸಿದ್ದು, ದೆಹಲಿಯಲ್ಲಿ ಮುಖ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

ಮುಂಬೈನಲ್ಲಿ ಮಾಜಿ ಸಿಎಂ ದೇವೇಂದ್ರ ಫಡಣವೀಸ್‌ ಅವರ ಭೇಟಿ, ಮೈಸೂರು ಜಿಲ್ಲೆಯ ಸುತ್ತೂರು ಮಠದ ಶ್ರೀಗಳು ಹಾಗೂ ಅಥಣಿ ಆರ್‌ಎಸ್‌ಎಸ್‌ ಮುಖಂಡರ ಭೇಟಿ ನಂತರ ಜಾರಕಿಹೊಳಿ ಸಹೋದರರು ನಡೆಸುತ್ತಿರುವ ಸಭೆ ರಾಜಕೀಯವಾಗಿ ಮಹತ್ವ ಪಡೆದಿದೆ. ರಮೇಶ ಯಾವ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಅವರ ಸಹೋದರ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪರ್ಕ ಸಾಧಿಸಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಹೋದರ ರಮೇಶನ ಮನವೊಲಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿ ರಹಸ್ಯ ಸಭೆ: ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ

ಆದರೆ, ಬಾಲಚಂದ್ರ ಅವರು ತಮ್ಮ ಸಹೋದರನ ಮನವೊಲಿಸುತ್ತಾರೆಯೇ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಸೋಮವಾರ ತಮ್ಮ ಕ್ಷೇತ್ರದಲ್ಲೇ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ರಮೇಶ ಜಾರಕಿಹೊಳಿ ಮಂಗಳವಾರ (ನಾಡಿದ್ದು) ಮತ್ತೆ ಮುಂಬೈಗೆ ತೆರಳುವ ಸಾಧ್ಯತೆಗಳಿವೆ. ಮುಂಬೈಗೆ ತೆರಳುವ ಮುನ್ನ ಕೊಲ್ಲಾಪುರ ಮಹಾಲಕ್ಷ್ಮೇ ದರ್ಶನ ಪಡೆಯಲಿದ್ದಾರೆ. ನಂತರ ಮುಂಬೈಗೆ ತೆರಳಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡಣವೀಸ್‌ ಅವರ ಜೊತೆಗೆ ಮತ್ತೊಂದು ಸುತ್ತಿನ ಮಾತುಕತೆಯನ್ನೂ ನಡೆಸಲಿದ್ದಾರೆ. ದೇವೇಂದ್ರ ಫಡಣವೀಸ್‌ ಮೂಲಕ ದೆಹಲಿ ಹೈಕಮಾಂಡ್‌ ನಾಯಕರ ಭೇಟಿಗೆ ಸಮಮ ನಿಗದಿಪಡಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಫಡಣವೀಸ್‌ ಮೂಲಕ ಕಳುಹಿಸಿದ ರಮೇಶ ಅವರ ಸಂದೇಶ ದೆಹಲಿ ನಾಯಕರಿಗೆ ಮುಟ್ಟಿದೆ ಎಂಬುದು ಅವರಿಗೆ ದೆಹಲಿಯಿಂದ ಬಂದ ಬುಲಾವ್‌ ಸಾಕ್ಷಿ ಎನ್ನಲಾಗಿದೆ. ಜುಲೈ ಮೊದಲ ಅಥವಾ ಎರಡನೇ ವಾರ ದೆಹಲಿಗೆ ಹೋಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.