ಉಪಮುಖ್ಯಮಂತ್ರಿಗಳೇ ಧರ್ಮಸ್ಥಳ ವಿಚಾರದಲ್ಲಿ ಅನ್ಯಾಯ, ಮೋಸ ಆಗಿದೆ, ಇದರ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಾರೆ. ಗೃಹ ಸಚಿವರು ಏನೂ ಇಲ್ಲ. ಟೆಸ್ಟ್‌ಗೆ ಕಳುಹಿಸಿದ್ದೇವೆ. ವರದಿ ಬಂದಿಲ್ಲ ಎನ್ನುತ್ತಾರೆ.
ವಿಧಾನಸಭೆ (ಆ.19): ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬೆಟ್ಟ ಅಗೆದರೂ ಇಲಿ ಸಿಗಲಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮಾತನಿಂದ ಸೊಳ್ಳೆಯೂ ಸಿಗಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು. ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ಗೃಹ ಸಚಿವರ ಉತ್ತರ ನೀಡಿದ ಬಳಿಕ ಮಾತನಾಡಿ, ಉಪಮುಖ್ಯಮಂತ್ರಿಗಳೇ ಧರ್ಮಸ್ಥಳ ವಿಚಾರದಲ್ಲಿ ಅನ್ಯಾಯ, ಮೋಸ ಆಗಿದೆ, ಇದರ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಾರೆ. ಗೃಹ ಸಚಿವರು ಏನೂ ಇಲ್ಲ. ಟೆಸ್ಟ್‌ಗೆ ಕಳುಹಿಸಿದ್ದೇವೆ. ವರದಿ ಬಂದಿಲ್ಲ ಎನ್ನುತ್ತಾರೆ. ಸರ್ಕಾರ ಯಾರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದೆ? ಪ್ರಗತಿಪರರು, ನಗರ ನಕ್ಸಲರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ ಬಳಿಕ ಎಸ್ಐಟಿ ರಚನೆಯಾಗಿದೆಯೇ ಹೊರತು ಈ ವಿಚಾರದಲ್ಲಿ ನಾವು ಅವರ ಬಳಿ ಹೋಗಿದ್ದೆವಾ ಎಂದು ಪ್ರಶ್ನಿಸಿದರು.
ಧರ್ಮಸ್ಥಳದಲ್ಲಿ ಅತ್ಯಾ*ಚಾರ, ಕೊಲೆ, ಅನಾಚಾರ ಆಗಿದೆ ಎಂಬ ಆರೋಪವನ್ನು ಕೋಟ್ಯಂತರ ಜನ ನೋಡಿದ್ದಾರೆ. ಮುಖ್ಯಮಂತ್ರಿಗಳು 28 ಕೊಲೆ ಮಾಡಿದ್ದಾರೆ. ಜೈಲಿಗೆ ಹಾಕಿ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದಾನೆ. ಆಗ ನಮ್ಮ ಸರ್ಕಾರ ಇರಲಿಲ್ಲ ಎಂದು ಸಚಿವರು ಹೇಳಿದ್ದಾರೆ. 2023ರ ಮೇ 13ರಂದು ಚುನಾವಣೆ ನಡೆಯಿತು. ಮೇ 28ರಂದು ನಿಮ್ಮದೇ ಸರ್ಕಾರ ಅಧಿಕಾರದಲ್ಲಿತ್ತು. ಇಂತವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಸದನಕ್ಕೆ ಬೆಲೆ ಇಲ್ಲವೇ? ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ಸ್ಪಷವಾಗಿ ಹೇಳಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಬುರುಡೆ ತಂದವನ ಬಂಧನ ಏಕಿಲ್ಲ?: ಮಾಸ್ಕ್ ಮ್ಯಾನ್ ಮೊದಲ ದಿನ ಸಿನಿಮಾ ಶೈಲಿಯಲ್ಲಿ ಬುರುಡೆ ಹಿಡಿದುಕೊಂಡು ಬಂದಿದ್ದ. ಆ ಬುರುಡೆ ಎಲ್ಲಿಂದ ತಂದ? ಕಾನೂನು ಪ್ರಕಾರ ಹೂತ ಹೆಣ ತೆಗೆಯಲು ನ್ಯಾಯಾಲಯದ ಅನುಮತಿ ಬೇಕು. ಆದರೆ, ಆತ ಬುರುಡೆಯನ್ನೇ ತೆಗೆದುಕೊಂಡು ಬಂದಿದ್ದಾನೆ. ಆತ ಅನುಮತಿ ಇಲ್ಲದೆ ಬುರುಡೆ ಹೇಗೆ ತೆಗೆದ? ಏಕೆ ಆತನನ್ನು ಬಂಧಿಸಲಿಲ್ಲ? ಆ ಬುರುಡೆ ಏಕೆ ಪರಿಶೀಲಿಸಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಶಾಸಕ ಸುನೀಲ್ ಕುಮಾರ್ ದನಿ ಗೂಡಿಸಿದರು. ಇದಕ್ಕೆ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಇನ್ನೂ ತನಿಖೆ ಆಗಿಲ್ಲ. ಆತನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ವಾ? ನೀವು ಸದನದಲ್ಲಿ ಹೇಳಿದ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾ ಎಂದು ಮರು ಪ್ರಶ್ನೆ ಹಾಕಿದರು.
ಇದರ ಹಿಂದಿನ ಗ್ಯಾಂಗ್ ಯಾವುದು?: ಬಳಿಕ ಮಾತು ಮುಂದುವರೆಸಿದ ಆರ್.ಅಶೋಕ್, ಮಾಸ್ಕ್ ಮ್ಯಾನ್ ನಾನು ತಮಿಳುನಾಡಿನಲ್ಲಿದ್ದೆ. ಮನೆ ಕಟ್ಟಿಸಿಕೊಡುತ್ತೇವೆ, ಹಣ ಕೊಡುತ್ತೇವೆ ಎಂದು ಮಹಿಳೆಯೊಬ್ಬಳು ಹೇಳಿದಳು. ಹೀಗಾಗಿ ನಾನು ಬಂದೆ ಎಂದು ಹೇಳಿದ್ದಾನೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ನೀವು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಹೇಳುತ್ತಿರುವಿರಿ. ನಿತ್ಯ ಒಂದು ಸಾವಿರ ದೂರುಗಳು ಬರುತ್ತವೆ. ಎಲ್ಲದಕ್ಕೂ ಎಸ್‌ಐಟಿ ರಚನೆ ಮಾಡುವಿರಾ? ಇದರ ಹಿಂದೆ ಯಾರಿದ್ದಾರೆ? ಆ ಗ್ಯಾಂಗ್ ಯಾವುದು ಎಂದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
