Asianet Suvarna News Asianet Suvarna News

ಬಿಎಸ್‌ವೈ, ಬಿವೈವಿ ಬಗ್ಗೆ ಹರೀಶ್‌ ಹಗುರ ಮಾತು ಸಹಿಸಲ್ಲ: ರೇಣುಕಾಚಾರ್ಯ

ನಮ್ಮ ವಿರುದ್ಧವಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವೂ ಮಾತನಾಡುತ್ತಿದ್ದಾರೆ. ಹರಿಹರ ಶಾಸಕ ಬಿ.ಪಿ.ಹರೀಶ್‌ ಇದೇ ರೀತಿ ಮಾತನಾಡಿದರೆ ಸರಿ ಇರಲ್ಲ ಎಂದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

BJP Leader MP Renukacharya Talks Over BS Yediyurappa and BY Vijayendra grg
Author
First Published Jun 18, 2024, 5:00 AM IST

ದಾವಣಗೆರೆ(ಜೂ.18): ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ ನೇತೃತ್ವದಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಾಮಾಣಿಕವಾಗಿ, ಮನಃಪೂರ್ವಕವಾಗಿ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಆದರೂ ಹರಿಹರ ಕ್ಷೇತ್ರದ ಶಾಸಕ ಬಿ.ಪಿ.ಹರೀಶ್‌, ಮಾಜಿ ಶಾಸಕ ಹಾಗೂ ಜೆಡಿಎಸ್‌ ಮುಖಂಡ ಎಚ್.ಎಸ್.ಶಿವಶಂಕರ್‌ ಆರೋಪಿಸುವುದು ಸರಿಯಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗುಟುರು ಹಾಕಿದ್ದಾರೆ.

ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಸೋಮವಾರ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥರ ನಿವಾಸದಲ್ಲಿ ಪಕ್ಷದ ಸಮಾನ ಮನಸ್ಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ವಿರುದ್ಧವಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವೂ ಮಾತನಾಡುತ್ತಿದ್ದಾರೆ. ಹರಿಹರ ಶಾಸಕ ಬಿ.ಪಿ.ಹರೀಶ್‌ ಇದೇ ರೀತಿ ಮಾತನಾಡಿದರೆ ಸರಿ ಇರಲ್ಲ ಎಂದರು.

ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ‌ ದರ್ಶನ್‌ನ ಎಲ್ಲ ಸಿನಿಮಾ‌ ಬ್ಯಾನ್ ಮಾಡಿ: ರೇಣುಕಾಚಾರ್ಯ

ಹರೀಶ್‌ ಬಿಜೆಪಿ ತತ್ವ, ಸಿದ್ಧಾಂತ ಅಳವಡಿಸಿಕೊಂಡಿದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ. ಹರಿಹರದಲ್ಲಿ ಕಾಂಗ್ರೆಸ್ ಕೂಡ ಬಿಜೆಪಿಗಿಂತಲೂ ಹೆಚ್ಚು ಮತ ಪಡೆದಿದೆ. ಅಲ್ಲಿ ಹರೀಶ್‌, ಜೆಡಿಎಸ್‌ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್‌ ಸೇರಿ ಮೂವರಿದ್ದರೂ ಏಕೆ ಲೀಡ್ ಕೊಡಿಸಲಿಲ್ಲ? ತಮ್ಮ ಕ್ಷೇತ್ರದಲ್ಲೇ ಬಿಜೆಪಿಗೆ ಮುನ್ನಡೆ ಕೊಡಿಸಲಾಗದ ಹರೀಶ್‌ ಹಗುರ ಮಾತನಾಡಿದರೆ ಸರಿ ಇರಲ್ಲ. ಜೆಡಿಎಸ್‌ನ ಶಿವಶಂಕರ ಮೈತ್ರಿಗಷ್ಟೇ ಸೀಮಿತ. ನಮ್ಮ ಪಕ್ಷದ ವಿಚಾರದಲ್ಲಿ ಪ್ರವೇಶಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಜಗಳೂರಲ್ಲೇಕೆ ಮುನ್ನಡೆ ಸಿಗಲಿಲ್ಲ: ಜಗಳೂರಿನಲ್ಲಿ ಜಿ.ಎಂ.ಸಿದ್ದೇಶ್ವರ ಪುತ್ರ ಜಿ.ಎಸ್.ಅನಿತಕುಮಾರ್‌ ಇನ್‌ಚಾರ್ಜ್ ಇದ್ದರೂ ಅಲ್ಲಿ ಏಕೆ ಬಿಜೆಪಿಗೆ ಮುನ್ನಡೆ ಸಿಗಲಿಲ್ಲ? ದಾವಣಗೆರೆ ಉತ್ತರದಲ್ಲಿ ಬಿಜೆಪಿಗೆ ಮುನ್ನಡೆ ಬಂದಿತ್ತಲ್ಲವೇ? ಇದಕ್ಕೆ ರವೀಂದ್ರನಾಥ, ಲೋಕಿಕೆರೆ ನಾಗರಾಜ, ಡಾ.ಎ.ಎಚ್.ಶಿವಯೋಗಿಸ್ವಾಮಿ ಕಾರಣ ಅಲ್ಲವೇ? ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಮುಂದೂಡುವಂತೆ ಹೇಳಿದ್ದರೂ ಯಾಕೆ ಮಾಡಿದರು? ನಮಗೆ ಬೈಯಲೆಂದೇ ಮಾಡಿದ್ದಲ್ಲವೇ ಎಂದು ಇದೇ ವೇಳೆ ರೇಣುಕಾಚಾರ್ಯ ಪ್ರಶ್ನಿಸಿದರು.

ಕೃತಜ್ಞತಾ ಸಭೆಯಲ್ಲಿ ಎಸ್.ಎ.ರವೀಂದ್ರನಾಥ, ಡಾ.ಎ.ಎಚ್‌.ಶಿವಯೋಗಿಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಾವು ಇಲ್ಲದ ಕಾರ್ಯಕ್ರಮದಲ್ಲಿ ನಮ್ಮನ್ನು ಬೈಯ್ಯಲೆಂದೇ ಮಾಡಿದ ಸಭೆ ಅದಾಗಿತ್ತು. ಯಡಿಯೂರಪ್ಪ, ವಿಜಯೇಂದ್ರ, ನಮ್ಮ ಬಗ್ಗೆ ಹಗುರ ಮಾತನಾಡುವುದನ್ನು ನಿಲ್ಲಿಸಲಿ. ಸೋಲು ನಮ್ಮಿಂದ ಆಗಿದ್ದಲ್ಲ. ಸ್ವಯಂಕೃತಾಪರಾಧದಿಂದ ಸೋಲಾಗಿದೆ ಎಂದರು.

ಶ್ರೀರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು: ಪ್ರೊ.ಭಗವಾನ್ ವಿವಾದಾತ್ಮಕ ಹೇಳಿಕೆ

ಚುನಾವಣೆ ಸೋತ ಸಿದ್ದೇಶ್ವರ್‌ಗೆ ಆತಂಕ ಬೇಡ: ರವೀಂದ್ರನಾಥ್‌

ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಮಾಜಿ ಸಂಸದರು ಯಾವುದಾದರೂ ದೊಡ್ಡ ಆಲದ ಮರದ ಕೆಳಗೆ ಕುಳಿತು, ಜ್ಞಾನೋದಯ ಮಾಡಿಕೊಂಡು ಬರಲಿ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರು ಜಿ.ಎಂ.ಸಿದ್ದೇಶ್ವರ್‌ಗೆ ಸಲಹೆ ನೀಡಿದ್ದಾರೆ.

ತಮ್ಮ ನಿವಾಸದಲ್ಲಿ ಸೋಮವಾರ ರೇಣುಕಾಚಾರ್ಯ ಮತ್ತಿತರರ ಜೊತೆಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ರಾಜಕಾರಣವನ್ನು ಎಂದಿಗೂ ದ್ವೇಷದಿಂದ ಮಾಡಿಕೊಂಡು ಬಂದಿಲ್ಲ ಎಂದು ತಿರುಗೇಟು ನೀಡಿದರು.
ನಾವು ಕಾಂಗ್ರೆಸ್ಸಿನವರಿಗೆ ಬುಕ್ ಆಗಿದ್ದೇವೆ ಎನ್ನುವುದು ತಪ್ಪು. ನಾನು ಎಲ್ಲಿಗೆ ಹೋದರೂ ಬುಕ್ ಆಗಿದ್ದೇವೆಂದು ಹೇಳುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ ನಮ್ಮ ಊರಿಗೆ ಪ್ರಚಾರಕ್ಕೆ ಬಂದಿದ್ದರು. ಮತ ಕೇಳಿಕೊಂಡು ಎಲ್ಲರ ಮನೆಗೆ ಹೋದಂತೆಯೇ, ನಮ್ಮ ಮನೆಗೂ ಬಂದಿದ್ದರು. ಹಾಗೆ ಬಂದಿದ್ದಕ್ಕೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios