ಕಾಂಗ್ರೆಸ್‌ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ: ಬಿಜೆಪಿ ವಾಗ್ದಾಳಿ

ಮುಡಾ, ವಾಲ್ಮೀಕಿ, ಭೋವಿ ಹಗರಣಗಳಿಗೆ ಅಮಾಯಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಒಂದರ ಮೇಲೆ ಒಂದರಂತೆ ಆಗುತ್ತಿವೆ ಎಂದ ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ 

BJP Leader Hanamant Itagi Slams Karnataka Congress Government grg

ಯಾದಗಿರಿ(ಜ.02):  ರಾಜ್ಯದಲ್ಲಿ ಹಾಲಿ ಸರ್ಕಾರದ ಆಡಳಿತ ಬಂದಾಗಿನಿಂದ ಸರ್ಕಾರದಲ್ಲಿರುವವರ ಬೆದರಿಕೆಯ ಕಾರಣಕ್ಕೆ ಸರಣಿ ಆತ್ಮಹತ್ಯೆ ಪ್ರಕರಣಗಳು, ಸರಣಿ ಹಗರಣಗಳು ನಡೆಯುತ್ತಿದ್ದು, ಕಾಂಗ್ರೆಸ್ ರಾಜ್ಯದ ಜನತೆಗೆ ಆತ್ಮಹತ್ಯೆಗಳ ಭಾಗ್ಯ ನೀಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಆರೋಪಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟ್‌ನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆಯ ಆಪ್ತ ರಾಜು ಕಪನೂರನಿಂದ ಕಿರುಕುಳದ ಉಲ್ಲೇಖವಿದೆ. ಹೀಗಾಗಿ, ಸಚಿನ್ ಪಂಚಾಳ್ ಆತ್ಮಹತ್ಯೆ ಸಚಿವ ಪ್ರಿಯಾಂಕ್‌ ಖರ್ಗೆ ಕೃಪಾಪೋಷಿತ ರೌಡಿ, ಅನೇಕರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಗಳನ್ನು ಎದುರಿಸುತ್ತಿರುವ ರಾಜು ಕಪನೂರನ ನೆರೆ ಬೆದರಿಕೆಯಿಂದ ಆಗಿದೆ ಎಂಬುದು ಡೆತ್ ನೋಟ್‌ನಿಂದ ದೃಢವಾಗಿದೆ ಎಂದು ಅವರು ಆರೋಪಿಸಿದರು.

ಸಿಎಂ ಕುರ್ಚಿಗಾಗಿ ಸಿದ್ದು-ಡಿಕೆಶಿ ಬಡಿದಾಟ: ವಿಜಯೇಂದ್ರ

ಮುಡಾ, ವಾಲ್ಮೀಕಿ, ಭೋವಿ ಹಗರಣಗಳಿಗೆ ಅಮಾಯಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಒಂದರ ಮೇಲೆ ಒಂದರಂತೆ ಆಗುತ್ತಿವೆ ಎಂದರು.
ವಾಲ್ಮೀಕಿ ನಿಗಮದ ವ್ಯವಸ್ಥಾಪಕ ಚಂದ್ರಶೇಖರ ಆತ್ಮಹತ್ಯೆ, ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ, ದಾವಣಗೆರೆಯಲ್ಲಿ ಗುತ್ತಿಗೆದಾರೊಬ್ಬರ ಆತ್ಮಹತ್ಯೆ, ಮಾಗಡಿಯಲ್ಲಿ ಲಾರಿ ಮಾಲಿಕರೊಬ್ಬರು ಲಂಚ ಕೊಡಲಾಗದೆ ಆತ್ಮಹತ್ಯೆ, ಯಾದಗಿರಿ ಪಿಎಸ್ಸೈ ಪರಶುರಾಮ್ ಸಾವು ಪ್ರಕರಣ, ಇದೀಗ ಸಚಿನ್ ಪಂಚಾಳ ಆತ್ಮಹತ್ಯೆಯಾಗಿದೆ ಎಂದು ಅವರು ದೂರಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಈ ಸರ್ಕಾರ ಆತ್ಮಹತ್ಯೆಗಳನ್ನು, ಕೊಲೆಗಳನ್ನು ಮಾಡಿಸಲೆಂದೇ ಕುಳಿತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ ಅವರು, ಕೂಡಲೇ ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ನಡೆದಿವೆ. ಅವನ್ನು ಮುಚ್ಚಿ ಹಾಕಿದ ಷಡ್ಯಂತ್ರ ಹಿಂದೆ ನಡೆದಿವೆ. ನಡೆಯುತ್ತಲೇ ಇವೆ. ಈದೀಗ ಕಾಂಗ್ರೆಸ್‌ನವರು ಸಚಿನ್ ಪಂಚಾಳರ ಕುಟುಂಬದವರನ್ನು ಬೆಳಗಿನ ಜಾವ 3 ಗಂಟೆಗೆ ಭೇಟಿ ಕೊಟ್ಟಿದ್ದು, ಅವರನ್ನು ಓಲೈಕೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದು, ಅದು ಸಾಧ್ಯವಾಗದಿದ್ದಾಗ ಮತ್ತೆ ಅವರ ಕುಟುಂಬದಲ್ಲಿರುವ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುತ್ತಾರೆ. ಕಲಬುರಗಿ ಪೊಲೀಸ್ ಇಲಾಖೆ ಖರ್ಗೆ ಮತ್ತು ಕುಟುಂಬದ ಕಪಿಮುಷ್ಠಿಯೊಳಗಿದೆ ಎಂದು ಆರೋಪಿಸಿದರು.

ಈ ಹಿಂದೆ, ಇದೇ ಸರ್ಕಾರದ ಸಚಿವ ನಾಗೇಂದ್ರ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕ್ಷಣವೂ ತಡ ಮಾಡದೆ, ಪ್ರಿಯಾಂಕ್‌ ಖರ್ಗೆಯವರ ರಾಜೀನಾಮೆ ಪಡೆದುಕೊಳ್ಳಲಿ. ಯಾವುದೋ ನೆಪ ಮಾಡಿ, ರಕ್ಷಿಸುವ ದುಸ್ಸಾಹಸ ಬೇಡ ಎಂದು ಅವರು ಹೇಳಿದರು.

'ಬಿಜೆಪಿಯವರು ನಿಯತ್ತಾಗಿ ಇದ್ದಾರಾ?' : ಮಧು ಬಂಗಾರಪ್ಪ

ಬಿಜೆಪಿ ಮುಖಂಡರ ಕೊಲೆಗೆ ಸಂಚು

ಹಿಂದೂ ಸಮಾಜದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಕಲಬುರಗಿಯ ಬಿಜೆಪಿ ನಾಯಕರಾದ ಚಂದು ಪಾಟೀಲ್, ಮಣಿಕಂಠ ರಾಠೋಡ್ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ತಿಳಿಸಿದೆ. ಸಿದ್ದಲಿಂಗ ಸ್ವಾಮೀಜಿಯವರ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್‌ಗಳನ್ನು ಬಳಸುವ ವಿಚಾರವೂ ಡೆತ್ ನೋಟಿನಲ್ಲಿದೆ. ಎಲ್ಲ ರೀತಿಯಿಂದಲೂ ರಾಜ್ಯದ ಅತ್ಯಂತ ಶಕ್ತಿಶಾಲಿ ಖರ್ಗೆ ಕುಟುಂಬದ ವಿರುದ್ಧ ತನಿಖೆ ಮಾಡಲು ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಹಾಗಾಗಿ ಇದೊಂದು ಗಂಭೀರ ವಿಚಾರ. ಆದ್ದರಿಂದ ಇದರ ಸಿಬಿಐ ತನಿಖೆ ಅತ್ಯಗತ್ಯವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೇಸೂರ ಸೇರಿದಂತೆ ಇತರರಿದ್ದರು.

Latest Videos
Follow Us:
Download App:
  • android
  • ios