* ರಾಜ್ಯದಲ್ಲಿ ಬಿಎಸ್‌ವೈ ನಾಯಕತ್ವ ಬದಲಾವಣೆ ಚರ್ಚೆ ಜೋರು* ಬಿಎಸ್‌ವೈ ನಿವಾಸಕ್ಕೆ ಸ್ವಾಮೀಜಿಗಳ ದಂಡು* ಸ್ವಾಮೀಜಿಗಳ ನಡೆಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಕಿಡಿ
ಮೈಸೂರು, (ಜು.21): ನಾಯಕತ್ವ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರವಾಗಿ ಮಠಾಧಿಪತಿ ಬ್ಯಾಟಿಂಗ್ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡದಂತೆ ಆಗ್ರಹಿಸಿಸುತ್ತಿದ್ದಾರೆ.
ಅಲ್ಲದೇ ಸ್ವಾಮೀಜಿಗಳ ದಂಡೇ ಬೆಂಗಳೂರಿನ ಸಿಎಂ ನಿವಾಸಕ್ಕೆ ಬಂದು ಬಿಜೆಪಿಗೆ ಖಡಕ್ ಎಚ್ಚರಿಕೆ ಕೊಡುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ ವಿಧಾನಪರಿಷತ್ ಎಚ್ ವಿಶ್ವನಾಥ್ ಮಠಾಧೀಶರ ನಡೆಗೆ ವಾಗ್ದಾಳಿ ನಡೆಸಿದ್ದಾರೆ.
'ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಕಠಿಣ ಸ್ಥಿತಿ'
ಈ ಬಗ್ಗೆ ಇಂದು (ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಯಡಿಯೂರಪ್ಪ ಪರ ನಿಂತಿರುವ ಸ್ವಾಮೀಜಿಗಳು ಬೀದಿಗೆ ಬಂದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಪರ ನಿಂತು ರಾಜಕಾರಣದಲ್ಲಿ ತೊಡಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧಿಪತಿಗಳು ಜನರಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತಿದ್ದೀರಾ? ಸ್ವಾಮೀಜಿಗಳನ್ನು ಬೀದಿಗೆ ತಂದು ತಮ್ಮ ಪರ ಮಾತಾಡಿ ಎನ್ನುವುದೂ ತಪ್ಪು. ಇದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಸಮುದಾಯದವರು ಮುಖ್ಯಮಂತ್ರಿ ಆಗಬೇಕು. ಆದರೆ, ಅವರು ಜಾತಿವಂತನಾಗಬಾರದು ನೀತಿವಂತನಾಗಬೇಕು ಎಂದು ಹೇಳಿದರು.
ಹೈಕಮಾಂಡ್ ಹೇಳಿದಂತೆ ಕೇಳಬೇಕಾಗುತ್ತೆ: ಶ್ರೀಗಳ ಮುಂದೆ ಬಿಎಸ್‌ವೈ ಅಸಹಾಯಕತೆ!
ಸರ್ಕಾರ ಹಾದಿ ತಪ್ಪಿದ ಸಮಯದಲ್ಲಿ ಎಲ್ಲರೂ ಎಚ್ಚರಿಸುತ್ತಾರೆ. ವಿರೋಧ ಪಕ್ಷ, ಸಮಾಜ, ಸಂಘ ಸಂಸ್ಥೆಗಳು, ಮಠಾಧೀಶರು ಬುದ್ಧಿ ಹೇಳುತ್ತಾರೆ. ಆದರೆ, ಎಚ್ಚರಿಸಬೇಕಾದವರೆ. ರಾಜಕಾರಣಿಗಳಿಗಿಂತ ಮೀರಿದ ಪಾತ್ರ ವಹಿಸುತ್ತಿರುವುದು ಎಷ್ಟು ಸರಿ' ಎಂದು ಪ್ರಶ್ನಿಸಿದರು. 'ಮಠ ಮಾನ್ಯಗಳು, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕೇ ಹೊರತೂ ರಾಜಕಾರಣದ, ಅಧಿಕಾರದ ಭಾಗವಾಗಬಾರದು. ನಡೆದಾಡುವ ದೇವರಾಗಬೇಕೇ ಹೊರತೂ ನಡೆದಾಡುವ ರಾಜಕಾರಣಿಗಳಾಗಬಾರದು. ಇದು ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ತಿಳಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಪೀಠದ ಸ್ವಾಮೀಜಿ ಈ ರೀತಿ ಬಾಲಿಶವಾಗಿ ಮಾತನಾಡಿದ್ದರು. ಅವತ್ತು ಕೂಡ ನಾನು ಅದನ್ನು ಖಂಡಿಸಿದ್ದೆ. ಈಗಲೂ ಮಠಾಧೀಶರನ್ನು ಕೈ ಮುಗಿದು ಕೇಳುವೆ. ಧರ್ಮದಲ್ಲಿ ರಾಜಕಾರಣ ತರಬೇಡಿ ಎಂದು ಮನವಿ ಮಾಡಿದರು.
ಬಹಳ ನೋವಿನ ವಿಚಾರವೆಂದರೆ ಬಸವಶ್ರೀ ಪ್ರಶಸ್ತಿ ಕೊಡಮಾಡುವ ಮುರುಘಾಶ್ರೀಗಳು ಬೀದಿಗೆ ಬಂದು ರಾಜಕಾರದ ಬಗ್ಗೆ ಮಾತನಾಡುತ್ತಿರುವುದು. ಹಾಗಾದರೆ ಈ ಪ್ರಶಸ್ತಿಗೆ ಏನು ಬೆಲೆ? ಬಸವಣ್ಣ ಯಾವತ್ತು ಜಾತಿ ರಾಜಕಾರಣ ಮಾಡಿದರು? ಸರ್ಕಾರದ ಕೆಲಸ ದೇವರ ಕೆಲಸ ಎಂಬುದು ಈಗ ಸರ್ಕಾರಿ ಕೆಲಸ ಸ್ವಾಮೀಜಿಗಳ ಕೆಲಸ ಎಂಬಂತಾಗಿದೆ' ಎಂದು ಟೀಕಿಸಿದರು.
ಯಡಿಯೂರಪ್ಪ ಜನನಾಯಕ, ಆ ಬಗ್ಗೆ ಮೆಚ್ಚುಗೆ ಇದೆ. ಆದರೆ, ಸರ್ಕಾರ ಬಂದಿದ್ದು ಹೇಗೆ? ಮೊದಲನೇ ಬಾರಿ ಸ್ವಯಂಕೃತ ಅಪರಾಧದಿಂದ ಜೈಲಿಗೆ ಹೋದಿರಿ. ಆಗಲೂ ಗೌರವಯುತ ನಿರ್ಗಮನ ಸಿಗಲಿಲ್ಲ. 6 ವರ್ಷ ಅಮಾನತು ಮಾಡಲಾಯಿತು. ಆಗ ಏಕೆ ಯಾವ ಸ್ವಾಮೀಜಿಗಳು ಮಾತನಾಡಲಿಲ್ಲ, ಬೀದಿಗೆ ಬರಲಿಲ್ಲ ಎಂದು ವಿಶ್ವನಾಥ್ ಪ್ರಶ್ನಿಸಿದರು,.
