ನವದೆಹಲಿ (ಅ.06):  ‘ಕನಕನಪುರದ ಹೊಲದಲ್ಲಿ ಆಲೂಗಡ್ಡೆ ಬೆಳೆದಿದ್ದಾರೋ, ಚಿನ್ನ ಬೆಳೆದಿದ್ದಾರೋ? ಕಾಲೇಜು ಓದುವ ಮಗಳ ಅಕೌಂಟ್‌ನಲ್ಲಿ ಸಾವಿರಾರು ಕೋಟಿ ಹಣ ಹೇಗೆ ಬರುತ್ತೆ? ಇವರನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ವಾ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತರಾಟೆಗೆ ತೆಗೆದುಕೊಂಡರು. 

ನವದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ದಾಳಿಗೊಳಗಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು. ಡಿ.ಕೆ.ಶಿವಕುಮಾರ್‌ ಅವರ ಆರ್ಥಿಕ ಪ್ರಗತಿ ನ್ಯಾಚುರಲ್ ಗ್ರೋಥ್‌ ಅಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಸಾಂವಿಧಾನಿಕ ಸಂಸ್ಥೆ ಮೇಲೆ ವಿಶ್ವಾಸ ಇಲ್ಲ. ಇ.ಡಿ, ಸಿಬಿಐ ದಾಳಿ ಮಾಡಿದ್ರೆ ರಾಜಕೀಯ ಪ್ರೇರಿತ ಎನ್ನುತ್ತಾರೆ. ಅಕ್ರಮ ಆಸ್ತಿಗಳಿಕೆಗೆ ಬೀದಿಯಲ್ಲಿ ಉತ್ತರಿಸುವುದಕ್ಕೆ ಆಗಲ್ಲ. ನ್ಯಾಯಾಲಯದಲ್ಲೇ ಉತ್ತರ ಕೊಡಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಐ ದಾಳಿ: ಸಿಎಂ ಯಡಿಯೂರಪ್ಪ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್
 
ವಿಧಾನಸಭೆಯಲ್ಲಿ ಸಚಿವ ಮಾಧುಸ್ವಾಮಿ ಅವರ ಹೇಳಿಕೆಯನ್ನು ಡಿ.ಕೆ.ಶಿವಕುಮಾರ್‌ ನೆನಪಿಸಿಕೊಳ್ಳಬೇಕು. ಅವರ ಆರ್ಥಿಕ ಪ್ರಗತಿ ನ್ಯಾಚುರಲ… ಗ್ರೋಥ್‌ ಅಲ್ಲ. ಹಣದ ಮೂಲವನ್ನು ಅವರು ತೋರಿಸಬೇಕು. ಕಾಲೇಜು ಓದುವ ಅವರ ಮಗಳ ಖಾತೆಯಲ್ಲಿ ಸಾವಿರಾರು ಕೋಟಿ ರುಪಾಯಿ ಹಣ ಹೇಗೆ ಬರುತ್ತೆ? ಇವರನ್ನು ಯಾರು ಪ್ರಶ್ನೆ ಮಾಡಬಾರದಾ? ಕಾನೂನಿಗೆ ಡಿಕೆಶಿ ಒಳಪಟ್ಟಿಲ್ಲವಾ ಎಂದು ಪ್ರಶ್ನಿಸಿದರು.

ಬೀದಿಯಲ್ಲಿ ನಿಂತು ಪ್ರದರ್ಶನ ಮಾಡಿದ್ರೆ ಉತ್ತರ ಸಿಗಲ್ಲ. ಉತ್ತರ ಪಡೆಯೋಕೆ ಸಿಬಿಐ, ಇ.ಡಿ. ಇದೆ. ಇದರಿಂದ ಸತ್ಯ ಮುಚ್ಚಿಡೊಕೆ ಆಗಲ್ಲ, ಎಲ್ಲವೂ ಹೊರಬರುತ್ತೆ ಎಂದು ಹೇಳಿದರು.