ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ರಾಜಕಾರಣಕ್ಕೆ ವಾಪಸ್‌ ಆಗುವ ಹಾಗೂ ಪಕ್ಷದ ಮುಂದಿನ ರಾಜ್ಯಾಧ್ಯಕ್ಷರಾಗುವ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಗುಸುಗುಸು ಆರಂಭವಾಗಿದೆ.

ಬೆಂಗಳೂರು (ಆ.11): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ರಾಜಕಾರಣಕ್ಕೆ ವಾಪಸ್‌ ಆಗುವ ಹಾಗೂ ಪಕ್ಷದ ಮುಂದಿನ ರಾಜ್ಯಾಧ್ಯಕ್ಷರಾಗುವ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಗುಸುಗುಸು ಆರಂಭವಾಗಿದೆ. ಬುಧವಾರ ಉತ್ತರ ಪ್ರದೇಶದ ಸುನೀಲ್‌ ಬನ್ಸಲ್‌ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ ಆದೇಶ ಹೊರಬಿದ್ದಿದ್ದು, ಕರ್ನಾಟಕ ಬಿಜೆಪಿಯಲ್ಲಿ ಇಂಥದೊಂದು ಚರ್ಚೆಗೆ ಕಾರಣವಾಯಿತು. 

ಈಗಾಗಲೇ 8 ಮಂದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿರುವಾಗ ಬನ್ಸಲ್‌ ಅವರನ್ನು ನೇಮಿಸಿದ್ದು ಯಾಕೆ ಎಂಬ ಕುತೂಹಲ ಮೂಡಿದ್ದು, ಶೀಘ್ರದಲ್ಲಿಯೇ ಸಿ.ಟಿ.ರವಿ ಅವರು ಆ ಸ್ಥಾನದಿಂದ ನಿರ್ಗಮಿಸುವುದರ ಮುನ್ಸೂಚನೆ ಎಂಬ ವದಂತಿ ಹಬ್ಬಿದೆ. ಆದರೆ, ಇದನ್ನು ರಾಜ್ಯ ಬಿಜೆಪಿ ನಾಯಕರು ಖಚಿತಪಡಿಸುತ್ತಿಲ್ಲ. ಹಾಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಅವಧಿ ಇದೇ ತಿಂಗಳ 20ಕ್ಕೆ ಮುಗಿಯಲಿದೆ. ಇದು ಚುನಾವಣಾ ವರ್ಷವಾಗಿದ್ದರಿಂದ ಅವರನ್ನೇ ಮುಂದುವರೆಸುವರೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೊಂದು ವೇಳೆ ಬದಲಾವಣೆ ಆಗುವುದಾದರೆ ಆ ಸ್ಥಾನಕ್ಕೆ ಸಿ.ಟಿ.ರವಿ ಅವರೇ ಬರಬಹುದು ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ.

Chikkamagaluru: ರೈತನ ಜೊತೆ ಮೆಕ್ಕೆ ಜೋಳಕ್ಕೆ ಕುಂಟೆ ಹೊಡೆದ ಶಾಸಕ ಸಿ.ಟಿ.ರವಿ

ಇತ್ತೀಚಿಗೆ ರವಿ ಅವರು ರಾಜ್ಯದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪಕ್ಷ ಹಾಗೂ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಸರೇ ಮುಂದಿನ ರಾಜ್ಯಾಧ್ಯಕ್ಷ ಹುದ್ದೆಗೆ ಎಂಬ ಚರ್ಚೆ ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ. ಈಗಿರುವ ಕಟೀಲ್‌ ಅವರ ಅವಧಿ ಪೂರ್ಣಗೊಂಡ ಬಳಿಕ ಮುಂದುವರೆಸುವುದು ಬೇಡ ಎಂದಾದಲ್ಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಬೇಕು ಎಂಬುದು ತೀರ್ಮಾನವಾದಲ್ಲಿ ರವಿ ಅವರ ಹೆಸರೇ ಅಂತಿಮಗೊಳ್ಳಬಹುದು ಎನ್ನಲಾಗುತ್ತಿದೆ.

ಸೂತಕದ ಮನೆಯಲ್ಲಿ ಕಾಂಗ್ರೆಸ್‌ ಸಂಭ್ರಮ: ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ 13 ಜನರು ಜೀವ ಕಳೆದುಕೊಂಡಿದ್ದಾರೆ. ನೂರಾರು ಜನ ನಿರ್ಗತಿಕರಾಗಿದ್ದಾರೆ. ಆದರೂ ಕಾಂಗ್ರೆಸ್‌ ಪಕ್ಷ ಸೂತಕದ ಮನೆಯಲ್ಲಿ ಸಂಭ್ರಮ ಪಡುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡುವಾಗ ಸಿದ್ದರಾಮೋತ್ಸವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಸಂವೇದನಶೀಲತೆ ಕಳೆದುಕೊಂಡಿದೆ. ಜನ ಸಂಕಷ್ಟದಲ್ಲಿರುವ ಸಮಯದಲ್ಲಿ ಸಂಭ್ರಮ ಆಚರಿಸಿಕೊಳ್ಳುತ್ತಿದ್ದಾರೆ. 

ಅತಿವೃಷ್ಟಿಯಲ್ಲಿ ನಿಧನ, ಸಂಕಷ್ಟಕ್ಕೆ ಒಳಗಾದವರ ಬಗ್ಗೆ ಅವರಿಗೆ ಏನೂ ಅನ್ನಿಸುತ್ತಿಲ್ಲವೇ? ಆ ಪಕ್ಷ ಆಲೋಚಿಸಬೇಕಿರುವ ವಿಚಾರವಿದು. ಸಿದ್ದರಾಮಯ್ಯ ಅವರ 75 ವರ್ಷದ ಬದುಕಿನ ಸಾರ್ಥಕತೆ ಬೇರೆ. ಆದರೆ, ಜನ ಸಂಕಷ್ಟದಲ್ಲಿದ್ದಾಗ ಇದನ್ನು ಆಚರಿಸಿಕೊಳ್ಳುವುದು ಹಾಗೂ ಅವರ ನಾಯಕರು ಹಾಡಿ ಹೊಗಳುವುದು ಸಂವೇದನಾಶೀಲತೆ ಇದ್ದವರಿಗೆ ಶೋಭೆ ತರುವ ಸಂಗತಿಯಲ್ಲ ಎಂದರು. ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಹಾಗೂ ಬಿಜೆಪಿ ಸರ್ಕಾರಕ್ಕೆ 3 ವರ್ಷವಾಗಿರುವ ಹಿನ್ನೆಲೆ ಜನೋತ್ಸವ ಆಚರಿಸಬೇಕು ಎಂದು ತೀರ್ಮಾನಿಸಿ ಸಿದ್ಧತೆ ನಡೆದಿತ್ತು. 

ಕಾಂಗ್ರೆಸ್ಸಿಗರು ಪ್ರಾಮಾಣಿಕರಾಗಿದ್ದರೆ ಇ.ಡಿ.ಗೇಕೆ ಹೆದರಬೇಕು?: ಸಿ.ಟಿ.ರವಿ

ಆದರೆ, ಪಕ್ಷದ ಕಾರ್ಯಕರ್ತ ಪ್ರವೀಣ್‌ ಹತ್ಯೆ ನಡೆದ ಕಾರಣ ಕಾರ್ಯಕ್ರಮ ನಡೆಸದಿರಲು ಒಮ್ಮತದ ನಿರ್ಧಾರ ಮಾಡಿ ರದ್ದು ಮಾಡಲಾಯಿತು. ಅಂದು ಕಾಂಗ್ರೆಸ್‌ ಸೂತಕದ ಮನೆಯಲ್ಲಿ ಸಂಭ್ರಮ ಆಚರಿಸಿಕೊಳ್ಳಲು ಹೊರಟಿದ್ದೀರಿ ಎಂದು ಪ್ರಶ್ನಿಸಿತ್ತು. ಈಗ 13 ಜನ ನಿಧನರಾಗಿದ್ದಾರೆ. ಅದರಲ್ಲಿ ಶಿಕ್ಷಕರು, ಮಕ್ಕಳು, ಕಾರ್ಮಿಕರು ಸೇರಿದ್ದಾರೆ. ಹೀಗಿರುವಾಗ ಸೂತಕದ ಮನೆಯಲ್ಲಿ ಸಂಭ್ರಮ ಆಚರಿಸಿಕೊಳ್ಳುತ್ತಿದ್ದೇವೆ ಎಂದು ಕಾಂಗ್ರೆಸ್ಸಿನ ಕೆಲವರಿಗಾದರೂ ಅನ್ನಿಸಬೇಕಿತ್ತು. ಬಿಜೆಪಿ ರೀತಿಯಲ್ಲಿ ಅವರು ನಿಲುವು ತೆಗೆದುಕೊಳ್ಳುತ್ತಾರೆ ಎನ್ನುವ ನಮ್ಮ ನಿರೀಕ್ಷೆ ಹುಸಿಯಾಗಿದೆ. ಅದು ದುರಾದೃಷ್ಟಕರ ಎಂದು ಹೇಳಿದರು.