ಸಚಿವರಾಗಿದ್ದ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ರಾಜೀನಾಮೆ ಅಂಗೀಕಾರವಾಗಿದೆ. ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದಾರೆ
ಬೆಂಗಳೂರು(ನ.08): ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕ್ರೀಡಾ ಖಾತೆಗಳನ್ನು ಹೊಂದಿದ್ದ ಸಚಿವ ಸಿ.ಟಿ.ರವಿ ಅವರ ರಾಜೀನಾಮೆ ಅಂಗೀಕಾರವಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಪಕ್ಷದ ಅಲಿಖಿತ ನಿಯಮದ ಅನುಸಾರ ರವಿ ಅವರು ಕಳೆದ ಅಕ್ಟೋಬರ್ 2ರಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳು ಆ ರಾಜೀನಾಮೆ ಪತ್ರವನ್ನು ಒಪ್ಪಿಕೊಳ್ಳದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ದೇವರಿಗೆ ಅವಮಾನ ವಿರೋಧಿಸಿ ಯಾತ್ರೆ: ಸಿ. ಟಿ. ರವಿ, ಅಣ್ಣಾಮಲೈ ವಶಕ್ಕೆ! ...
ಶನಿವಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ಬೆನ್ನಲ್ಲೇ ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ರಾಜೀನಾಮೆ ಅಂಗೀಕರಿಸುವಂತೆ ಕೋರಿ ರವಾನಿಸಿದರು. ಅದರ ಬೆನ್ನಲ್ಲೇ ರಾತ್ರಿ ರಾಜೀನಾಮೆ ಅಂಗೀಕಾರಗೊಳಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧಿಕೃತ ಆದೇಶ ಹೊರಡಿಸಿದರು.
2ನೇ ಬಾರಿಯೂ ಅವಧಿ ಪೂರೈಸದ ರವಿ‘
ಸಿ.ಟಿ.ರವಿ ಅವರು ಇದೀಗ ಎರಡನೇ ಬಾರಿಯೂ ಸಚಿವ ಹುದ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಿಲ್ಲ.
ಹಿಂದೆ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸಚಿವರಾಗಿ ಉನ್ನತ ಶಿಕ್ಷಣ ಖಾತೆ ನಿಭಾಯಿಸಿದ್ದರು. ಹೆಚ್ಚೂ ಕಡಮೆ ಒಂದು ವರ್ಷ ಮಾತ್ರ ಸಚಿವ ಸ್ಥಾನದಲ್ಲಿದ್ದರು. ನಂತರ ಸಾರ್ವತ್ರಿಕ ಚುನಾವಣೆ ಎದುರಾಯಿತು. ಇದೀಗ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಹೆಚ್ಚೂ ಕಡಮೆ ಒಂದೂವರೆ ವರ್ಷ ಮುಗಿಯುವ ಹೊತ್ತಿಗೆ ಸಚಿವ ಸ್ಥಾನದಿಂದ ನಿರ್ಗಮಿಸಿದ್ದಾರೆ.
