Asianet Suvarna News Asianet Suvarna News

ದೇವರಿಗೆ ಅವಮಾನ ವಿರೋಧಿಸಿ ಯಾತ್ರೆ: ಸಿ. ಟಿ. ರವಿ, ಅಣ್ಣಾಮಲೈ ವಶಕ್ಕೆ!

ವೇಲಾಯುಧ ಯಾತ್ರೆ ವೇಳೆ| ಸಿ.ಟಿ. ರವಿ, ಅಣ್ಣಾಮಲೈ ವಶಕ್ಕೆ| ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಅಂದರ್‌| ಡಿಎಂಕೆಯಿಂದ ಸುಬ್ರಹ್ಮಣ್ಯಗೆ ಅವಮಾನ ಆರೋಪ| ಈ ಕಾರಣ ಯಾತ್ರೆ ಹಮ್ಮಿಕೊಂಡಿದ್ದ ಬಿಜೆಪಿ| ಆದರೆ ಕೊರೋನಾ ಕಾರಣ ಯಾತ್ರೆ ನಿಷೇಧಿಸಲಾಗಿತ್ತು| ನಿಷೇಧಾಜ್ಞೆ ಉಲ್ಲಂಘಿಸಿ ಯಾತ್ರೆ ನಡೆಸಿದ್ದಕ್ಕಾಗಿ ಪೊಲೀಸರ ಕ್ರಮ

Tamil Nadu Police Arrests State BJP Chief As Party Dares Government With Vel Yatra pod
Author
Bangalore, First Published Nov 7, 2020, 8:57 AM IST

ಚೆನ್ನೈ(ನ.07): ತಮಿಳುನಾಡಿನಲ್ಲಿ ಶುಕ್ರವಾರದಿಂದ ಡಿಸೆಂಬರ್‌ 6ರವರೆಗೆ ‘ವೇಲ್‌ ಯಾತ್ರೆ’ (ಸುಬ್ರಹ್ಮಣ್ಯನ ಅಸ್ತ್ರವಾದ ‘ವೇಲಾಯುಧ’ ಯಾತ್ರೆ) ಕೈಗೊಳ್ಳಲು ಉದ್ದೇಶಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್‌. ಮುರುಗನ್‌, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಕರ್ನಾಟಕ ಕೇಡರ್‌ ನಿವೃತ್ತ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಸೇರಿದಂತೆ ಹಲವಾರು ಮುಖಂಡರನ್ನು ಶುಕ್ರವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆಂಧ್ರಪ್ರದೇಶ ಗಡಿಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರವಾದ ತಿರುತ್ತಣಿಯಲ್ಲಿ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

‘ಕುರುಪ್ಪರ್‌ ಕೂಟಂ’ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಸುಬ್ರಹ್ಮಣ್ಯನ ಸ್ತುತಿ ಮಂತ್ರವಾದ ‘ಸ್ಕಂದ ಷಷ್ಠಿ ಕವಚಂ’ ಅನ್ನು ಅವಮಾನಿಸಲಾಗಿದೆ ಎನ್ನಲಾಗಿದ್ದು, ಇದರ ಹಿಂದೆ ತಮಿಳುನಾಡಿನ ಪ್ರಮುಖ ವಿಪಕ್ಷ ಡಿಎಂಕೆ ಇದೆ ಎಂಬುದು ಬಿಜೆಪಿ ಆರೋಪ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಡಿಸೆಂಬರ್‌ 6ರವರೆಗೆ (ಬಾಬ್ರಿ ಮಸೀದಿ ಧ್ವಂಸ ದಿನ) ತಮಿಳುನಾಡಿನಲ್ಲಿ ‘ವೇಲ್‌ ಯಾತ್ರೆ’ ಕೈಗೊಳ್ಳಲು ಕೈಗೊಳ್ಳಲು ಬಿಜೆಪಿ ಉದ್ದೇಶಿಸಿತ್ತು. ಯಾತ್ರೆಯು ತಿರುತ್ತಣಿ, ಪಳನಿ, ತಿರುಚಂದೂರು ಸೇರಿದಂತೆ 6 ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಸಂಚರಿಸುವ ಉದ್ದೇಶ ಹೊಂದಿತ್ತು.

ಯಾತ್ರೆ ವಿರುದ್ಧ ಮದ್ರಾಸ್‌ ಹೈಕೋರ್ಟ್‌ನಲ್ಲಿ 2 ಅರ್ಜಿಗಳು ಸಲ್ಲಿಕೆ ಆಗಿದ್ದವು. ಕೊರೋನಾ ಹರಡುತ್ತಿರುವ ಈ ಸಂದರ್ಭದಲ್ಲಿ ಯಾತ್ರೆಗೆ ಸರ್ಕಾರ ನಿರಾಕರಿಸಿತ್ತು. ಆದರೂ ಶುಕ್ರವಾರ ಯಾತ್ರೆ ಆರಂಭಿಸಲು ತಿರುತ್ತಣಿಗೆ ಸಿ.ಟಿ. ರವಿ, ಮುರುಗನ್‌ , ಮಾಜಿ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌, ರಾಜ್ಯ ಬಿಜೆಪಿ ಮುಖಂಡ ಎಚ್‌. ರಾಜಾ, ಅಣ್ಣಾಮಲೈ ಆಗಮಿಸಿದ್ದರು. ಈ ಪೈಕಿ ನಿಷೇಧ ಉಲ್ಲಂಘಿಸಿ ಯಾತ್ರೆಗೆ ಅಣಿಯಾಗಿದ್ದ ರವಿ, ಮುರುಗನ್‌, ಅಣ್ಣಾಮಲೈ ಸೇರಿ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಪ್ರತಿಕ್ರಿಯಿಸಿ, ‘ಕಾನೂನು ತನ್ನ ಕ್ರಮ ಜರುಗಿಸಲಿದೆ’ ಎಂದಷ್ಟೇ ಹೇಳಿದ್ದಾರೆ.

ಸುಬ್ರಹ್ಮಣ್ಯನ ಆರಾಧನೆ ಅಪರಾಧವೇ?

ಸುಬ್ರಹ್ಮಣ್ಯನನ್ನು ಆರಾಧಿಸುವುದು ಅಪರಾಧ ಕೃತ್ಯವೇ? ತಮಿಳುನಾಡು ದೇಗುಲಗಳ ಬೀಡು. ಆದರೆ ತಿರುತ್ತಣಿಯಲ್ಲಿ ಇತರ ಬಿಜೆಪಿ ನಾಯಕರ ಜತೆ ನನ್ನನ್ನು ಬಂಧಿಸಲಾಗಿದೆ. ಆದರೆ ತಮಿಳು ಜನರ ಸೇವೆ ಮಾಡುವ ನಮ್ಮ ಸಂಕಲ್ಪವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ.

- ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Follow Us:
Download App:
  • android
  • ios